ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು

ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ 9 ವರ್ಷದ ಬಾಲಕಿಯೊಬ್ಬಳು ಜೋಕಾಲಿ ಆಡುವಾಗ ಕುತ್ತಿಗೆಗೆ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾಳೆ. ಬೇಸಿಗೆ ರಜೆಗಾಗಿ ಚಿಕ್ಕಮ್ಮನ ಮನೆಗೆ ತೆರಳಿದ್ದ ಬಾಲಕಿ ಪಂಚೆ ಬಳಸಿ ಜೋಕಾಲಿ ಮಾಡಿಕೊಂಡಿದ್ದಳು. ಈ ವೇಳೆ ಕೋಣೆಯ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರ್ಘಟನೆ ಕುಟುಂಬದಲ್ಲಿ ಶೋಕ ಮೂಡಿಸಿದ್ದು, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು
ಮೃತ ಬಾಲಕಿ ಪ್ರಣಮ್ಯ
Edited By:

Updated on: Apr 24, 2026 | 12:02 PM

ಶಿವಮೊಗ್ಗ, ಏಪ್ರಿಲ್ 24: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ (Shivamogga) ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮನಕಲಕುವಂತಿದೆ.

ಕೋಣೆ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿ

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಪ್ರಣಮ್ಯ ತನ್ನ ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ತೆರಳಿದ್ದಳು. ಏಪ್ರಿಲ್ 20ರಂದು ಚಿಕ್ಕಮ್ಮನ ಮಕ್ಕಳು ಕೀಟಲೆ ಕೊಡುತ್ತಿದ್ದ ಕಾರಣ ಪ್ರಣಮ್ಯ ಒಬ್ಬಳೇ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಪಂಚೆ ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆಟವಾಡುವ ಸಂದರ್ಭದಲ್ಲಿ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಉಸಿರಾಟಕ್ಕೆ ಅಡಚಣೆ ಉಂಟಾಗಿ ಪ್ರಣಮ್ಯ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ. ಕುಟುಂಬದವರು ಬಾಗಿಲು ತೆರೆಯುವಷ್ಟರಲ್ಲಿ ಬಾಲಕಿ ಪ್ರಾಣ ಕಳೆದುಕೊಂಡಿದ್ದಳು.

ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಸುತ್ತಮುತ್ತಿನ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಮೈಸೂರಿನಲ್ಲಿ ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು!

ಇತ್ತೀಚೆಗಷ್ಟೇ ನಡೆದ ಘಟನೆ

ಬಕೆಟ್ ನೀರಿನಲ್ಲಿ ಮುಳುಗಿ 11 ತಿಂಗಳ ಮಗುವೊಂದು ಮೃತಪಟ್ಟಿದ್ದ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿತ್ತು. ಈ ವೇಳೆ ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಪ್ರತಿಭಾ, ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದರು. ಇದೇ ವೇಳೆ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದನ್ನು ನೋಡಿದ್ದ ತಾಯಿಯೂ ಆಘಾತದಿಂದ ಆತ್ಮಹತ್ಯೆಗೆ ಶರಣಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us