ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲೊಂದು ಈಸೂರು ಗ್ರಾಮವಿದೆ. ಶಿವಮೊಗ್ಗ ಜಿಲ್ಲೆಯ ಈಸೂರು ಅಂದ್ರೆ ಎಲ್ಲರ ಬಾಯಿಯಲ್ಲೂ ಬರುವುದು ಒಂದೇ ಶಬ್ದ ದಂಗೆ ಅಂತಾ. ಸ್ವಾತಂತ್ರ್ಯ ಹೋರಾಟದಲ್ಲಿ ಈ ಇಡೀ ಗ್ರಾಮವೇ ಪಾಲ್ಗೊಂಡಿದ್ದು ವಿಶೇಷ. ಇಂದಿಗೂ ಈ ಗ್ರಾಮವನ್ನು ವೀರಪುತ್ರರ ನಾಡು ಎಂದೇ ಕರೆಯಲಾಗುತ್ತೆ. ಭಾರತದ ಭೂಪಟದಲ್ಲಿ ಈ ಪುಟ್ಟ ಗ್ರಾಮಕ್ಕೆ ವಿಶೇಷ ಸ್ಥಾನವಿದೆ. 1942ರ ಮೊದಲು ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಏನಾದ್ರು ಮಾಡಿ ದೇಶದಿಂದ ಬ್ರಿಟಿಷರನ್ನು ಹೊಡೆದೊಡಿಸಬೇಕೆನ್ನುವ ಛಲವೂ ಈ ಗ್ರಾಮದ ಹೋರಾಟಗಾರಲ್ಲಿತ್ತು. ಇಂದಿಗೂ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಎಲ್ಲ ಇತಿಹಾಸಗಳು ಜೀವಂತವಾಗಿದೆ.
ಅದು ಭಾರತದಿಂದ ಬ್ರಿಟಿಷರನ್ನು ತೊಲಗಿಸಬೇಕೆಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಅದೆಷ್ಟೋ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆದ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಕುಮುದಿನಿ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮ ಈಸೂರು. 1942ರಲ್ಲಿ ನಡೆದ ಈಸೂರು ಹೋರಾಟದ ಚಳುವಳಿಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ನೂರಾರು ಸ್ವಾತಂತ್ರ್ಯ ಹೋರಾಟಗಾರರು ಗ್ರಾಮದಲ್ಲಿ ತಮ್ಮ ಜೀವನ ಮುಡುಪಾಗಿ ಇಡುವ ಮೂಲಕ ಜನರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹೊತ್ತಿಸಿದರು. ಈಸೂರು ದಂಗೆ ಮೂಲಕ ಬ್ರಿಟಿಷರ ಹುಟ್ಟು ಅಡುಗಿಸಿದರು. ಇಂತಹ ವೀರ ಯೋಧರ ಗ್ರಾಮದ ಸ್ವಾತಂತ್ರ್ಯ ಹೋರಾಟದ ಕೆಲ ಅಚ್ಚರಿ ಸಂಗತಿಗಳನ್ನು ಇಂದಿಗೂ ಹೋರಾಟಗಾರರು ನೆನಪಿಸುವ ಮೂಲಕ ಗದ್ಗರಿತರಾಗುತ್ತಾರೆ.
ಸ್ವಾತಂತ್ರ್ಯ ಹೋರಾಟಕ್ಕಾಗಿ ಇಡೀ ಗ್ರಾಮವೇ ಹೇಗೆ ಮುಂದಾಯಿತು ಎನ್ನುವುದು ತುಂಬಾ ರೋಚಕತೆಯಿಂದ ಕೂಡಿದೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಹಾತ್ಮ ಗಾಂಧಿಜೀ, ಸುಭಾಸ್ ಚಂದ್ರ ಭೋಸ್ ಅವರ ಪ್ರಭಾವಕ್ಕೆ ಒಳಗಾಗಿದ್ದ ಈ ಗ್ರಾಮದ ಜನರು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾದರು. ಪ್ರತಿದಿನ ಗ್ರಾಮದಲ್ಲಿ ಸಭೆ ಸೇರುವುದು, ಬ್ರಿಟಿಷರ ವಿರುದ್ಧ ಘೋಷಣೆ ಹಾಕುವ ಪ್ರಕ್ರಿಯೆಗಳು ಜೋರಾಗಿ ನಡೆಯುತ್ತಿದ್ದವು. ಈ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದು ವೀರಭದ್ರೇಶ್ವರ ದೇವಸ್ಥಾನ. ಈ ದೇವಸ್ಥಾನದಲ್ಲಿ ಗಂಟೆ ಬಾರಿಸುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಸೂಚನೆಗಳನ್ನು ನೀಡಲಾಗುತ್ತಿತ್ತು.
ವೀರಭದ್ರಶ್ವೇರ ದೇವಸ್ಥಾನದ ಗಂಟೆ ನೀನಾದ ಕೇಳುತ್ತಿದ್ದಂತೆ ಗ್ರಾಮದ ಯುವಕರು ದೇವಸ್ಥಾನಕ್ಕೆ ಬಂದು ಸ್ವಾತಂತ್ರ್ಯ ಹೋರಾಟದ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಮಹಿಳೆಯರು, ಪುರುಷರು, ಯುವಕರು ಈಸೂರಿನ ದೇವಸ್ಥಾನಕ್ಕೆ ಬಂದು ಚಳುವಳಿಗಳಲ್ಲಿ ಕೈಜೋಡಿಸುತ್ತಿದ್ದರು.
ಪ್ರತಿನಿತ್ಯ ದೇವಸ್ಥಾನದಲ್ಲಿ ದೇಶಭಕ್ತಿ ಗೀತ, ಭಜನೆ, ಕೀರ್ತನೆಗಳ ಮೂಲಕ ಎಲ್ಲರಲ್ಲೂ ದೇಶ ಭಕ್ತಿಯ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಈ ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ಸಭೆ ಮಾಡಿ, ಬ್ರಿಟಿಷರ ಶೋಷಣೆಯ ವಿರುದ್ಧ ಧ್ವನಿಯೆತ್ತುತ್ತಿದ್ದರು. ಈಸೂರಿನ ಗ್ರಾಮದ ಹೋರಾಟದ ನೇತೃತ್ವವನ್ನು ಸಾಹುಕಾರ್ ಬಸವಣ್ಣಪ್ಪ ಅವರಿಗೆ ವಹಿಸಿಕೊಡಲಾಯಿತು.
ಒಮ್ಮೆ ಸಾಹುಕಾರ್ ಬಸವಣ್ಣಪ್ಪನವರ ನೇತೃತ್ವದಲ್ಲಿ ಗ್ರಾಮದಲ್ಲಿ ದೊಡ್ಡ ಹೋರಾಟ ಶುರುವಾಗುತ್ತದೆ. ಬ್ರಿಟೀಷ್ ಸರಕಾರದಿಂದ ಕಂದಾಯ ವಸೂಲಿ ಮಾಡಲು ಬರುವ ಶಾನಭೋಗ, ಕುಲಕರ್ಣಿ ಅವರ ಕೈಯಲ್ಲಿದ್ದ ಕಂದಾಯ ಪುಸ್ತಕಗಳನ್ನು ಕಸಿದುಕೊಂಡು ಬೆಂಕಿಗೆ ಆಹುತಿಮಾಡಲಾಗುತ್ತೆ. ಕಂದಾಯ ಕೇಳಲು ಬಂದವರಿಗೆ ಒಂಟಿ ಕಾಲಿನ ಶಿಕ್ಷೆಯನ್ನು ನೀಡಿ ಹೋರಾಟ ಮಾಡಲಾಗುತ್ತೆ.
ಗ್ರಾಮದ 14 ವರ್ಷದ ಜಯಣ್ಣ ಎಂಬುವರನ್ನು ತಹಸೀಲ್ದಾರ್ ಆಗಿ ಮಲ್ಲಣ್ಣ ಎನ್ನುವರನ್ನು ಸಬ್ ಇನ್ಸ್ ಪೆಕ್ಟರ್ ಮಾಡಿ ಗ್ರಾಮಸ್ಥರೇ ಅವರನ್ನು ನೇಮಿಸುತ್ತಾರೆ. ಇದರ ನಂತರ ಗ್ರಾಮದೊಳಗೆ ಬ್ರಿಟಿಷರು ಬರದಂತೆ ನೋಡಿಕೊಳ್ಳುತ್ತಾರೆ. 1942 ಸೆಪ್ಟೆಂಬರ್ 27 ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಮೊದಲ ಸ್ವತಂತ್ರ ಗ್ರಾಮವನ್ನು ಗ್ರಾಮಸ್ಥರೇ ಸ್ವಯಂ ಘೋಷಿಸುತ್ತಾರೆ.
ಬ್ರಿಟಿಷರಿಗೆ ಯಾವುದೇ ತೆರಿಗೆಯನ್ನು ಕಟ್ಟದೇ ಉಗ್ರ ಹೋರಾಟದ ಹಾದಿಯನ್ನು ತುಳಿಯುತ್ತಾರೆ. ಈ ಘಟನೆ ದೇಶದಲ್ಲಿ ಸಂಚಲನ ಮೂಡಿಸುತ್ತದೆ. ಈಸೂರು ಗ್ರಾಮವು ಸ್ವಯಂ ಸ್ವತಂತ್ರ ಘೋಷಿಸಿಕೊಂಡದ್ದು ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತದೆ.
ಈ ಸುದ್ದಿಯು ಬ್ರಿಟಿಷರಿಗೆ ಗೊತ್ತಾಗುತ್ತಿದ್ದಂತೆ ಅವರು ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಾರೆ. ಬ್ರಿಟೀಷ್ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಹೋರಾಟದ ಗಲಾಟೆಯಲ್ಲಿ ಅಮಲ್ದಾರ್ ಮತ್ತು ಇನ್ಸ್ಪೆಕ್ಟರ್ಗಳಿಬ್ಬರು ಮೃತಪಡುತ್ತಾರೆ. ಆಗ ಇಡೀ ಗ್ರಾಮಕ್ಕೆ ಬ್ರಿಟೀಷ್ ಸೇನೆ ನುಗ್ಗುತ್ತದೆ. ಊರಿನ ಜನರು ಗ್ರಾಮ ಬಿಟ್ಟು ಕಾಡಿಗೆ ಸೇರುತ್ತಾರೆ. ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಲೂಟಿ ಆಗುತ್ತದೆ. ಮಿಲಿಟರಿ ಪಡೆಯಿಂದ ಗ್ರಾಮದ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ. ಇದೇ ಪ್ರಕರಣದಲ್ಲಿ 50ಕ್ಕೂ ಹೆಚ್ಚು ಜನರನ್ನು ಬ್ರಿಟೀಷ್ ಸೇನೆ ಬಂಧಿಸುತ್ತದೆ.
ಬ್ರಿಟಿಷರ ವಿರುದ್ಧ ರಣಕಹಳೆಗೆ ಮುಂದಾಗಿದ್ದ ಹೋರಾಟದ ನೇತೃತ್ವ ವಹಿಸಿದ್ದ ಸಾಹುಕಾರ್ ಬಸವಣ್ಣಪ್ಪ ಅವರು ಭೂಗತವಾಗುತ್ತಾರೆ. ಇವರ ಜೊತೆ ಮತ್ತೊಬ್ಬ ಹೋರಾಟಗಾರ ಎ.ಹಾಲಪ್ಪ ಎಂಬಾತನು ಭೂಗತವಾಗಿ, ಸ್ವಾತಂತ್ರ್ಯ ಸಿಕ್ಕ ನಂತರ ಮರಳಿ ಗ್ರಾಮಕ್ಕೆ ಬರುತ್ತಾರೆ. ಈ ಇಬ್ಬರು ನಿರಂತರವಾಗಿ ತೆರೆಮರೆಯಲ್ಲೇ ಗ್ರಾಮದ ಪರವಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಾರೆ.
ಈ ನಡುವೆ ಗ್ರಾಮದ ಬಿ ಹಾಲಪ್ಪ ಎನ್ನುವನನ್ನು ಬ್ರಿಟೀಷರು ತಪ್ಪಾಗಿ ಎ.ಹಾಲಪ್ಪ ಎಂದು ಭಾವಿಸಿ ಬಂಧಿಸುತ್ತಾರೆ. ನಿರಪರಾಧಿ ಬಿ.ಹಾಲಪ್ಪ ಅವರಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಇನ್ನೂ 50 ಗ್ರಾಮಸ್ಥರನ್ನು ಬಂಧಿಸುವ ಮೂಲಕ ಬ್ರಿಟೀಷರು ಪ್ರತಿಕಾರ ತೀರಿಸಿಕೊಳ್ಳುತ್ತಾರೆ. ಹೀಗೆ ಈಸೂರಿನಲ್ಲಿ 1942ರ ಹೊತ್ತಿಗೆ ಹೋರಾಟವು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಗ್ರಾಮಕ್ಕೆ ಗ್ರಾಮವೇ ಹೋರಾಟದ ಹಾದಿ ತುಳಿಯುತ್ತದೆ. ಬ್ರಿಟಿಷರಿಗೆ ಈ ಗ್ರಾಮವು ದೊಡ್ಡ ತಲೆನೋವು ಆಗುತ್ತೆ. ಇಡೀ ಗ್ರಾಮದಲ್ಲಿ ಬ್ರಿಟೀಷರನ್ನು ಕಂಡರೇ ಕೊಂಚವೂ ಭಯವೇ ಇಲ್ಲದಂತ ವಾತಾವರಣ ನಿರ್ಮಾಣವಾಗಿ ಬಿಡುತ್ತೆ.
ಈಸೂರು ಎಂಬ ಪುಟ್ಟ ಗ್ರಾಮವೂ ಯಾಕೇ ಇಡೀ ದೇಶದ ಗಮನ ಸೆಳೆಯಿತು? ಅಂತಹ ದೊಡ್ಡ ಹೋರಾಟವು ಈ ಗ್ರಾಮದಲ್ಲಿ ನಡೆಯಿತೇ? ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರಗಳಿವೆ. ಈ ಗ್ರಾಮದಲ್ಲಿ ಅನೇಕ ಹೋರಾಟಗಾರರು ದಶಕಗಳ ಕಾಲ ಜೈಲು ಸೇರಿದ್ರೆ, ಇನ್ನೂ ಅನೇಕರು ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ. ಗಲ್ಲು ಶಿಕ್ಷೆಗೆ ಒಳಗಾಗಿ ವೀರಮರಣ ಒಪ್ಪಿದವರ ಸಂಖ್ಯೆ ಎಷ್ಟು ಏನು ಎನ್ನುವುದು ಈಸೂರಿನ ಹೋರಾಟದ ಇತಿಹಾಸದ ಪುಟಗಳನ್ನು ತೆರೆದಾಗ ಗೊತ್ತಾಗುತ್ತದೆ.
ಈಸೂರಿನ ಈ ಐದು ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇವರ ತ್ಯಾಗದ ಬಲಿದಾನದ ನೆನಪು ಇಂದಿಗೂ ಈಸೂರಿನ ಜನರಲ್ಲಿ ಕಣ್ಣೀರು ತರಿಸುತ್ತೆ. ಸ್ವಾತಂತ್ರ್ಯ ಹೋರಾಟಗಾರರ ಸವಿ ನೆನಪಿಗಾಗಿ ಗ್ರಾಮದಲ್ಲಿ ಒಂದು ಸ್ಮಾರಕವಿದೆ. ಈ ಸ್ಮಾರಕವೂ ಸದಾ ಗ್ರಾಮದ ಜನರಿಗೆ ಸ್ಪೂರ್ತಿಸೆಲೆಯಾಗಿದೆ. ಪ್ರತಿನಿತ್ಯವೂ ಈ ಸ್ಮಾರಕವೂ ಈ 5 ಜನರು ಬಲಿದಾನದ ಇತಿಹಾಸವನ್ನು ನೆನಪಿಸುತ್ತದೆ.
50ಕ್ಕೂ ಹೆಚ್ಚು ಈಸೂರಿನ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರು ಬಂಧಿಸಿದ್ದರು. ಅದರಲ್ಲಿ 5 ಜನರು ನೇಣಿಗೆ ಶರಣಾದ್ರೆ, ಕೆಲವರು ಇಲ್ಲಿಯವರೆಗೂ ನಾಪತ್ತೆಯಾಗಿದ್ದಾರೆ. ಇನ್ನೂ ಹಲವರು ಕೆಲವು ಸಂದರ್ಭದಲ್ಲಿ ಬಿಡುಗಡೆಗೊಂಡಿದ್ದಾರೆ ಎಂಬ ಮಾಹಿತಿ ಇದೆ.
ಮೊದಲ ಹಂತವಾಗಿ ಮೈಸೂರು ಮಹಾರಾಜರ ಪುತ್ರಿ ನಾಮಕರಣ ಪ್ರಯುಕ್ತ ಈಸೂರಿನ 12 ಸ್ವಾತಂತ್ರ್ಯ ಹೋರಾಟಗಾರರನ್ನು ಬಿಡುಗಡೆ ಮಾಡಲಾಗಿತ್ತು. ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಸೂರಿನ ಏಳು ಸ್ವಾತಂತ್ರ್ಯ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು.
ಒಟ್ಟು 50 ಜನರಲ್ಲಿ 5 ಹೋರಾಟಗಾರರನ್ನು ಗಲ್ಲಿಗೇರಿಸಲಾಗುತ್ತದೆ. 7 ಜನರು ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗುತ್ತಾರೆ. 12 ಜನರನ್ನು ಮೈಸೂರು ಮಹಾರಾಜರ ಪುತ್ರಿಯ ನಾಮಕರಣಕ್ಕೆ ಬಿಡುಗಡೆಗೊಳಿಸಲಾಗುತ್ತದೆ. 16 ಜನರು ಕಠಿಣ ಶಿಕ್ಷೆ ಅನುಭವಿಸಿ ಬಿಡುಗಡೆಯಾಗುತ್ತಾರೆ. 7 ಜನರು ಸ್ವಾತಂತ್ರ್ಯ ನಂತರ ಬಿಡುಗಡೆಗೊಳ್ಳುತ್ತಾರೆ. ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ಓರ್ವ ಬಂಧನದ ವೇಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಈಸೂರಿನ ಪುಟ್ಟ ಗ್ರಾಮದ 50ಕ್ಕೂ ಹೆಚ್ಚು ಹೋರಾಟಗಾರರು ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು.
ಈಸೂರಿನ ಗ್ರಾಮದಲ್ಲಿ ಹೋರಾಟದ ಕಿಚ್ಚು ಎಷ್ಟೊಂದು ಪ್ರಭಲವಾಗಿತ್ತು ಎನ್ನುವುದಕ್ಕೆ ಕೆಲವು ಮಹತ್ವದ ಸಂಗತಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
1942 ಸೆಪ್ಟೆಂಬರ್ 27 ರಂದು ಈಸೂರಿನ ಗ್ರಾಮದಲ್ಲಿ ಪ್ರಥಮವಾಗಿ ತ್ರಿವರ್ಣ ಧ್ವಜ ಹಾರಾಡಿತು. ಹಲವಾರು ವರ್ಷಗಳಿಂದ ದೇಶಕ್ಕಾಗಿ ಹೋರಾಡುತ್ತಿದ್ದ ದೇಶದ ಹೋರಾಟಗಾರರು ಸ್ವಾತಂತ್ರ್ಯ ಸಿಗುವ ಸನಿಹದಲ್ಲಿದ್ದರು. ಆದರೆ ಈಸೂರಿನ ಗ್ರಾಮಸ್ಥರು ಸ್ವಾತಂತ್ರ್ಯ ಸಿಗುವ 5 ವರ್ಷ ಮೊದಲೇ ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಇಡೀ ದೇಶದ ಗಮನ ಸೆಳೆದರು. ಇದು ಬ್ರಿಟಿಷರನ್ನು ಕೆರಳಿಸುವಂತಿತ್ತು. ಬ್ರಿಟಿಷರ ವಿರುದ್ಧ ತೊಡೆತಟ್ಟಿನಿಂತು ಈ ಗ್ರಾಮದ ಹೋರಾಟಗಾರರು ಎಲ್ಲದರಲ್ಲೂ ಮೂಂಚೂಣಿಯಲ್ಲಿದ್ದರು.
ಪ್ರತಿ ವರ್ಷ ಆಗಸ್ಟ್ 9 ರಂದು ಚಲೇಜಾವ್ ಚಳವಳಿಯ ಸವಿನೆನಪಿಗಾಗಿ ಶಿಕಾರಿಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇನ್ನೂ ಈ ಗ್ರಾಮದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಇಬ್ಬರು ಬದುಕಿದ್ದಾರೆ.
ಅವರ ಧ್ವನಿ ಎಷ್ಟೊಂದು ಗಟ್ಟಿಯಾಗಿದೆ ಅಂದ್ರೆ ಇಂದಿಗೂ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಕಿಂಚಿತ್ತೂ ಈ ಸ್ವಾತಂತ್ರ್ಯ ಹೋರಾಟಗಾರಲ್ಲಿ ಅಳಕಿಲ್ಲ. ಎಲ್ಲವನ್ನೂ ಎದೆತಟ್ಟಿ ಹೇಳುತ್ತಾರೆ.
ಈಸೂರು ದಂಗೆಯಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿದೆ. ಇವರನ್ನು ಮರೆಯುವಂತಿಲ್ಲ. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಮೂವರು ಮಹಿಳೆಯರಿಗೆ ಜೀವಾವಧಿ ಗಡಿಪಾರು ಶಿಕ್ಷೆಯನ್ನು ಮೈಸೂರು ಹೈಕೋರ್ಟ್ ನೀಡಿತ್ತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು.
ಈಸೂರಿನ ಪುಟ್ಟ ಗ್ರಾಮವೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಧುಮಕಿದ್ದು ಇತಿಹಾಸ. ಬ್ರಿಟಿಷರ ಪಾಲಿಗೆ ಇಡೀ ಗ್ರಾಮವೇ ಸಿಂಹಸ್ವಪ್ನವಾಗಿತ್ತು. ಈ ಗ್ರಾಮಕ್ಕೆ ಕಂದಾಯ ವಸೂಲಿಗೆ ಬರುವುದಕ್ಕೆ ಕಂದಾಯ ಅಧಿಕಾರಿಗಳು ಭಯಬೀಳುವಂತಾಗಿತ್ತು. ಈ ಗ್ರಾಮದ ಚಳುವಳಿಯು ಶಿವಮೊಗ್ಗ ಜಿಲ್ಲೆಯ ಇತರೆ ಗ್ರಾಮಗಳ ಹೋರಾಟಕ್ಕೂ ಸ್ಪೂರ್ತಿಯಾಗಿತ್ತು.
ಇನ್ನು ಇದೆಲ್ಲದರ ನಡುವೆ ಕೆಲವು ದಿನಗಳ ಹಿಂದೆ ಶಿವಣ್ಣ ಮತ್ತು ಪತ್ನಿ ಗೀತಾ ಈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್ ಅವರು ಈಸೂರು ದಂಗೆ ಚಿತ್ರದಲ್ಲಿ ನಟಿಸುವುದಾಗಿ ಒಪ್ಟಿಕೊಂಡಿದ್ದಾರೆ. ಶೀಘ್ರದಲ್ಲಿ ಈ ಚಿತ್ರ ತೆರೆಯ ಮೇಲೆ ಬರಲಿದೆ.