ಶಾಕಿಂಗ್: ಖೈದಿ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ, ಆಪರೇಷನ್ ಮಾಡಿ ಹೊರತೆಗೆದ ವೈದ್ಯರು
ಶಿವಮೊಗ್ಗ ಜೈಲಿನ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೂವರು ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮೊಬೈಲ್ ಹೊರತೆಗೆದಿದ್ದಾರೆ. ಆ ಮೂಲಕ ಖೈದಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಏಕೆ ಮತ್ತು ಹೇಗೆ ಮೊಬೈಲ್ ನುಂಗಿದ್ದ ಎನ್ನುವುದು ಮಾತ್ರ ಅಧಿಕಾರಿಗಳಿಗೆ ತಲೆಬಿಸಿ ಆಗಿದೆ.

ಶಿವಮೊಗ್ಗ, ಜುಲೈ 13: ಕಾರಾಗೃಹದಲ್ಲಿ ಹಣ ಕೊಟ್ಟರೆ ಏನಬೇಕಾದರೂ ಸಿಗುತ್ತದೆ ಎನ್ನುವುದು ಈಗಾಗಲೇ ಅನೇಕ ಪ್ರಕರಣದಲ್ಲಿ ಸಾಬೀತು ಆಗಿದೆ. ಈ ನಡುವೆ ಶಿವಮೊಗ್ಗದ (Shivamogga) ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬ ಮೊಬೈಲ್ (mobile) ನುಂಗಿ ದೊಡ್ಡ ಇಕ್ಕಿಟ್ಟಿಗೆ ಸಿಲುಕೊಂಡಿದ್ದ ಘಟನೆ ನಡೆದಿದೆ. ಸದ್ಯ ಆತನ ಹೊಟ್ಟೆಯಲ್ಲಿದ್ದ ಒಂದು ಇಂಚು ಅಗಲ ಮತ್ತು ಮೂರು ಇಂಚು ಉದ್ದದ ಕೀ ಪ್ಯಾಡ್ ಮೊಬೈಲ್ ಅನ್ನು ಮೂವರು ವೈದ್ಯರು ಆಪರೇಷನ್ ಮಾಡಿ ಹೊರತೆಗೆದಿದ್ದು, ಖೈದಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೈಲಿನ ಅಧೀಕ್ಷಕರಿಂದ ಪೊಲೀಸರಿಗೆ ದೂರು ಹಿನ್ನೆಲೆ ಘಟನೆ ಕುರಿತು ಎಫ್ಐಆರ್ ದಾಖಲಾಗಿದೆ.
ಆರೋಪಿ ದೌಲತ್ ಮೊಬೈಲ್ ನುಗ್ಗಿದ್ದ ಖೈದಿ. ಜೂನ್ 24 ರಂದು ದೌಲತ್ ಕೇಂದ್ರ ಕಾರಾಗೃದಲ್ಲಿ ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದಾನೆ. ಈತನ ಹೊಟ್ಟೆಯಲ್ಲಿ ಸಮಸ್ಯೆ ಆಗಿರುವುದನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜೂ. 24 ರಂದು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡುತ್ತಾರೆ. ಅಲ್ಲಿ ವೈದ್ಯರು ಎಕ್ಸರೇ ಮತ್ತು ಸ್ಕ್ಯಾನ್ ಮಾಡಿ ನೋಡಿದಾಗ ಈತನ ಹೊಟ್ಟೆಯಲ್ಲಿ ಒಂದು ವಸ್ತು ಇರುವುದು ಗೊತ್ತಾಗುತ್ತದೆ.
ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಮಾರಾಟ ಮಾಡಿ 70 ಲಕ್ಷ ರೂ. ಗಳಿಸಿದ್ದ ವೈದ್ಯ ನಾಗರಾಜ್! ಎನ್ಐಎ ತನಿಖೆಯಲ್ಲಿ ಬಹಿರಂಗ
ಈ ಹಿನ್ನಲೆಯಲ್ಲಿ ಜೂ. 27 ರಂದು ಆಸ್ಪತ್ರೆಯ ಮೂವರು ವೈದ್ಯರ ತಂಡ ಆಪರೇಷನ್ ಮಾಡುವ ಮೂಲಕ ಆತನ ಹೊಟ್ಟೆಯಲ್ಲಿದ್ದ ಪುಟ್ಟ ಬೇಸಿಕ್ ಸೆಟ್ ಮೊಬೈಲ್ ಅನ್ನು ಹೊರಗೆ ತೆಗೆಯುತ್ತಾರೆ. ಆಪರೇಷನ್ ಬಳಿಕ ದೌಲತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜು. 8 ರಂದು ಚಿಕಿತ್ಸೆ ಪಡೆದು ಗುಣಮುಖನಾಗಿರುವ ಖೈದಿ ವಾಪಸ್ ಮತ್ತೆ ಜೈಲು ಸೇರಿದ್ದಾನೆ. ಇದು ಶಿಕ್ಷೆಗೆ ಒಳಪಟ್ಟಿರುವ ದೌಲತ್ನ ಹೊಟ್ಟೆ ಒಳಗಿದ್ದ ಒಂದು ಮೊಬೈಲ್ನ ಕಥೆ.
ಯಾರು ಈ ದೌಲತ್?
ಈತ 2021ರಲ್ಲಿ ತುಂಗಾ ನಗರ ಪೊಲೀಸರು ದೊಡ್ಡ ಬೇಟೆಯಾಡಿದ್ದರು. ಈ ವೇಳೆ ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದ. ಆರೋಪಿ ದೌಲತ್ಗೆ ಶಿವಮೊಗ್ಗ ಕೋರ್ಟ್ 2024 ರಂದು 10 ವರ್ಷ ಶಿಕ್ಷೆ ವಿಧಿಸಿತ್ತು. ಹೀಗಾಗಿ ಖೈದಿ ದೌಲತ್ ಶಿವಮೊಗ್ಗದ ಜೈಲಿನಲ್ಲಿದ್ದ.
ಇನ್ನೂ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಸೇರಿದಂತೆ ಇತರೆ ಐಷಾರಾಮಿ ವಸ್ತುಗಳ ಬಳಕೆಗೆ ನಿಷೇಧವಿದೆ. ಈ ನಡುವೆ ಕೇಂದ್ರ ಕಾರಾಗೃಹದಲ್ಲಿ ಸುಲಭವಾಗಿ ಖೈದಿಗಳಿಗೆ ಮೊಬೈಲ್ ಸೇರಿದಂತೆ ಇತರೆ ವಸ್ತುಗಳು ಕೈಸೇರುತ್ತವೆ. ಈ ಸಂಗತಿ ಜೈಲಿನ ಮೇಲೆ ನಡೆದ ಅನೇಕ ದಾಳಿಯಿಂದ ಬಯಲಾಗಿದೆ. ಜೈಲಿನಲ್ಲಿ ಮೊಬೈಲ್ ಸೇರಿದಂತೆ ಅನೇಕ ಐಷಾರಾಮಿ ವಸ್ತುಗಳು ಸಿಗುವುದು ಇತ್ತೀಚೆಗೆ ಕಾಮನ್ ಆಗಿ ಬಿಟ್ಟಿದೆ. ಪೊಲೀಸರು ಎಷ್ಟೇ ಕ್ರಮ ತೆಗೆದುಕೊಂಡರು ಜೈಲಿನಲ್ಲಿ ಮಾತ್ರ ಈ ಖೈದಿಗಳ ಕಳ್ಳಾಟ ನಿಲ್ಲುತ್ತಿಲ್ಲ.
ಇದನ್ನೂ ಓದಿ: ಜೈಲಲ್ಲಿ ದರ್ಶನ್ಗೆ ಮೊಬೈಲ್, ಸಿಮ್ ನೀಡಿದ್ದವರು ಕೊನೆಗೂ ಪತ್ತೆ! ರಹಸ್ಯವಾಗಿ ಸಿಮ್ ಕೊಟ್ಟಿದ್ಹೇಗೆ ಗೊತ್ತೇ?
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ವ್ಯವಸ್ಥೆ ಕೂಡ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಶಿಕ್ಷೆಗೊಳಪಟ್ಟಿರುವ ಖೈದಿ ದೌಲತ್ ಜೈಲಿನಲ್ಲಿ ಬಳಕೆ ಮಾಡುತ್ತಿದ್ದ ಮೊಬೈಲ್ ನುಂಗಿದ್ದಾನೆ. ಈತ ಮೊಬೈಲ್ ಏಕೆ ಮತ್ತು ಹೇಗೆ ನುಂಗಿದ್ದ ಎನ್ನುವುದು ಮಾತ್ರ ಅಧಿಕಾರಿಗಳಿಗೆ ಗೊತ್ತಾಗಿಲ್ಲ. ಯಾವಾಗ ಆತ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ದಾಖಲು ಆಗಿ ಪರೀಕ್ಷೆಗೊಳಪಡಿಸಿದಾಗ ಆತನ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ವೈದ್ಯರು ಆಪರೇಷನ್ ಮಾಡಿ ಮೊಬೈಲ್ ಹೊರಗೆ ತೆಗೆದಿದ್ದಾರೆ. ಹೀಗೆ ಮೊಬೈಲ್ ಮತ್ತು ಇತರೆ ಗಟ್ಟಿ ವಸ್ತುಗಳನ್ನು ನುಂಗಿ ಬದುಕು ಉಳಿಯುವುದು ಕಷ್ಟ. ಆದರೆ ದೌಲತ್ ಅದೃಷ್ಟವಶಾತ್ ಪಾರಾಗಿದ್ದಾನೆ.
ಖೈದಿಯೊಬ್ಬನು ಮೊಬೈಲ್ ನುಂಗಿ ತನ್ನ ಜೀವನಕ್ಕೆ ಕುತ್ತು ತಂದುಕೊಂಡಿದ್ದು, ಸೂಕ್ತ ಸಮಯದಲ್ಲಿ ಆಪರೇಷನ್ನಿಂದಾಗಿ ಬಚಾವ್ ಆಗಿದ್ದಾನೆ. ಆದರೆ ಖೈದಿ ಕೈಗೆ ಸುಲಭವಾಗಿ ಮೊಬೈಲ್ ಸೇರುತ್ತಿರುವುದು ಜೈಲು ವ್ಯವಸ್ಥೆ ಬಗ್ಗೆ ಮತ್ತೆ ನೂರೆಂಟು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Sun, 13 July 25







