ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಎಂದ ಸಿದ್ದರಾಮಯ್ಯ: ಹೊಟ್ಟೆಯುರಿ ಎಂದು ಅಶೋಕ್ ತಿರುಗೇಟು

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತಮ್ಮನ್ನು ಸಂಪರ್ಕಿಸದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸಿದೆ. 60 ವರ್ಷಗಳಲ್ಲಿ ಕಾಂಗ್ರೆಸ್​​ಗೆ ಸಾಧ್ಯವಾಗದ್ದನ್ನು ಮೋದಿ ಸರ್ಕಾರ ಮಾಡಿ ತೋರಿಸಿದ್ದಕ್ಕೆ ಸಿದ್ದರಾಮಯ್ಯಗೆ ಹೊಟ್ಟೆಯುರಿಯಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಎಂದ ಸಿದ್ದರಾಮಯ್ಯ: ಹೊಟ್ಟೆಯುರಿ ಎಂದು ಅಶೋಕ್ ತಿರುಗೇಟು
ಸಿಗಂದೂರು ಸೇತುವೆ ಉದ್ಘಾಟನೆ: ಶಿಷ್ಟಾಚಾರ ಉಲ್ಲಂಘನೆ ಎಂದ ಸಿಎಂಗೆ ಅಶೋಕ್ ತಿರುಗೇಟು

Updated on: Jul 14, 2025 | 12:33 PM

ಬೆಂಗಳೂರು, ಜುಲೈ 14: ಕರ್ನಾಟಕದ ಅತಿದೊಡ್ಡ ಹಾಗೂ ದೇಶದ ಎರನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿರುವ ಸಿಗಂದೂರು ಬ್ರಿಡ್ಜ್ (Sigandur Bridge) ಲೋಕಾರ್ಪಣೆ ವಿಚಾರವಾಗಿ ಉಂಟಾಗಿರುವ ರಾಜಕೀಯ ವಿವಾದ ಈಗ ಮತ್ತಷ್ಟು ಜೋರಾಗುತ್ತಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ತಮ್ಮನ್ನು ವಿಳಂಬವಾಗಿ ಆಹ್ವಾನಿಸಲಾಗಿದ್ದು, ಪೂರ್ವನಿಗದಿತ ಕಾರ್ಯಕ್ರಮದ ಕಾರಣ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ದಿನಾಂಕ ಮುಂದೂಡಿ ಎಂದು ಮನವಿ ಮಾಡಿದ್ದರು. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಫೇಸ್​​ಬುಕ್​​ನಲ್ಲಿಯೂ ಅಸಮಾಧಾನ ತೋಡಿಕೊಂಡ ಸಿಎಂ, ಕೇಂದ್ರ ಸಚಿವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದರು. ಇದೀಗ ಬೆಂಗಳೂರಿನಲ್ಲಿ ಮಾತನಾಡಿ, ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರಿಗೆ ಹೊಟ್ಟೆ ಉರಿ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಆಯೋಜನೆಗೂ ಮುನ್ನ ನಮ್ಮನ್ನು ಸಂಪರ್ಕಿಸಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನಾನು ಕರೆ ಮಾಡಿ ಕಾರ್ಯಕ್ರಮ ಮುಂದೂಡಿ ಎಂದು ಮನವಿ ಮಾಡಿದ್ದೆ. ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ, ಇಲ್ಲಿನ ಬಿಜೆಪಿ ನಾಯಕರ ಒತ್ತಡಕ್ಕೆ‌ ಮಣಿದು ಕಾರ್ಯಕ್ರಮ ಮಾಡುತ್ತಿದ್ದಾರೆ. ರೈಲ್ವೇ ಯೋಜನೆಗಳಿಗೂ ನಾವು ಸಹಕಾರ ಕೊಡುತ್ತೇವೆ. ಅವರು ನಮ್ಮನ್ನು ಆಹ್ವಾನ ಮಾಡುತ್ತಾರೆ. ಆದರೆ, ಇಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದರು.

ಶಿಷ್ಟಾಚಾರ ಉಲ್ಲಂಘನೆಯ ಪ್ರತಿಭಟನಾರ್ಥವಾಗಿ ನಾವ್ಯಾರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಅಲ್ಲಿನ ಕಾಂಗ್ರೆಸ್ ಶಾಸಕರು, ಜಿಲ್ಲಾ ಮಂತ್ರಿ, ಲೋಕೋಪಯೋಗಿ ಸಚಿವರು ಯಾರೂ ಭಾಗವಹಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ತಿಕ್ಕಾಟ ಉಂಟು ಮಾಡುತ್ತಿರುವುದೇ ಬಿಜೆಪಿಯವರು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ
ಡ್ರಗ್ಸ್ ಸಾಗಾಟ ಆರೋಪ: ಕಲಬುರಗಿ ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರದಲ್ಲಿ ಬಂಧನ
ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 1006 ಆಟೋಗಳ ವಿರುದ್ದ ಕೇಸ್, 233 ಸೀಜ್
ಉಗ್ರ ನಾಸಿರ್​ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್​
ಭಟ್ಕಳ​ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಕೇಸ್​: ಆರೋಪಿಯ ಅಡಗುತಾಣ ಪತ್ತೆ

ಸಿದ್ದರಾಮಯ್ಯ ಟ್ವೀಟ್


ಸಿದ್ದರಾಮಯ್ಯ ಆರೋಪಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ. ‘‘ತಾನು ಕೊಡ, ಪರರನ್ನು ಕೊಡಲು ಬಿಡ! ಶರಾವತಿ ಹಿನ್ನೀರು ಭಾಗದ ಜನರ 60 ವರ್ಷಗಳ ಕನಸು ಈಡೇರುತ್ತಿರುವ ಇವತ್ತಿನ ಸಂತೋಷದ ದಿನವನ್ನ ಅಲ್ಲಿನ ಜನಸಾಮಾನ್ಯರು ತಮ್ಮ ಮನೆಯ ಹಬ್ಬದಂತೆ ತೋರಣ ಕಟ್ಟಿ, ಹೂವುಗಳಿಂದ ಅಲಂಕಾರ ಮಾಡಿ ಸಂಭ್ರಮ ಪಡುತ್ತಿದ್ದಾರೆ. ಆದರೆ ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಎನ್ನುವಂತೆ ನಾಡಿನ ಮುಖ್ಯಮಂತ್ರಿಗಳಾಗಿ ಇಂತಹ ಐತಿಹಾಸಿಕ ಸುದಿನದಂದು ಅಲ್ಲಿನ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬದಲು ಇಲ್ಲಸಲ್ಲದ ಕ್ಯಾತೆ ತೆಗೆದಿದ್ದೀರಲ್ಲ ಸ್ವಾಮಿ, ನಿಮ್ಮ ಭಂಡತನಕ್ಕೆ ಏನು ಹೇಳೋಣ ಎಂದು ಅಶೋಕ್’’ ಪ್ರಶ್ನಿಸಿದ್ದಾರೆ.

ನಿಮಗೆ ಹೊಟ್ಟೆಯುರಿಯೇ: ಅಶೋಕ್ ಪ್ರಶ್ನೆ


60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಾಧ್ಯವಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿ ತೋರಿಸಿತು ಎನ್ನುವ ಹೊಟ್ಟೆ ಉರಿನಾ? ಅಥವಾ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ರಾಹುಲ್ ಗಾಂಧಿ ಅವರು ಆದೇಶ ಮಾಡಿದ್ದಾರಾ? ಹೈಕಮಾಂಡ್ ನಾಯಕರು ಕರೆದರೆ ಕುರ್ಚಿ ಉಳಿಸಿಕೊಳ್ಳಲು ಎಲ್ಲಾ ಕೆಲಸ ಬಿಟ್ಟು ವಿಶೇಷ ವಿಮಾನದಲ್ಲಿ ದೆಹಲಿಗೆ ಓಡಿ ಹೋಗುತ್ತೀರಿ, ಸಿಗಂದೂರು ಸೇತುವೆ ಉದ್ಘಾಟನೆಗೆ ಹೋಗಲು ಮನಸ್ಸಿಲ್ಲವಾ ಎಂದು ಸಿದ್ದರಾಮಯ್ಯನವರನ್ನು ಅಶೋಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಹೊತ್ತಲ್ಲೇ ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಪತ್ರ

ನಿಮ್ಮಂತಹವರನ್ನು ಮುಖ್ಯಮಂತ್ರಿಗಳಾಗಿ ಪಡೆದ ಕನ್ನಡಿಗರು ನಿಜಕ್ಕೂ ನತದೃಷ್ಟರು ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಅಶೋಕ್ ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 12:00 pm, Mon, 14 July 25