Siddaramaiah Health: ಸಿಎಂ ಸಿದ್ದರಾಮಯ್ಯಗೆ ನಿಜಕ್ಕೂ ಆಗಿದ್ದೇನು? ಈಗ ಹೇಗಿದ್ದಾರೆ? ಇಲ್ಲಿದೆ ಮಾಹಿತಿ
ಬೆಳಗಾವಿಯಲ್ಲಿ 8 ದಿನ ಅಧಿವೇಶನ ಮುಕ್ತಾಯ ಆಗಿ ಇಂದು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಆರೋಗ್ಯ ದಿಢೀರ್ ಏರುಪೇರಾಗಿ ಸರ್ಕ್ಯೂಟ್ ಹೌಸ್ನಲ್ಲಿ ಉಳಿದುಕೊಂಡಿದ್ದರು. ಸದ್ಯ ಸಿಎಂ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹಾಗಾದರೆ, ಸಿದ್ದರಾಮಯ್ಯಗೆ ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ.

ಬೆಳಗಾವಿ, ಡಿಸೆಂಬರ್ 18: ವಿಪಕ್ಷ ನಾಯಕರ ಏಟಿಗೆ ಏದಿರೇಟು, ಆರೋಪಗಳಿಗೆ ಪ್ರತ್ಯುತ್ತರ ಕೊಡುತ್ತಾ ಬೆಳಗಾವಿ ಅಧಿವೇಶನದಲ್ಲಿ ಸಕ್ರಿಯರಾಗಿದ್ದ ಸಿಎಂ ಸಿದ್ದರಾಮಯ್ಯಗೆ (Siddaramaiah) ಬುಧವಾರ ಹಠಾತ್ತಾಗಿ ಆರೋಗ್ಯ ಕೈಕೊಟ್ಟಿದೆ. ಕೇಂದ್ರಸರ್ಕಾರದ ವಿರುದ್ಧ ಸುವರ್ಣಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಮಂಕಾಗಿದ್ದಾರೆ. ನಂತರ ಸರ್ಕ್ಯೂಟ್ ಹೌಸ್‌ಗೆ ತೆರಳಿದ್ದಾರೆ. ಮಧ್ಯಾಹ್ನದಿಂದ ಕೊಠಡಿ ಬಿಟ್ಟು ಹೊರ ಬರದಿದ್ದಾಗ ಗೊತ್ತಾಗಿದ್ದು ಅವರಿಗೆ ಅನಾರೋಗ್ಯ ಎಂಬ ವಿಚಾರ. ಮಂಗಳವಾರ ರಾತ್ರಿ ಊಟ ಮಾಡಿದ ಮೇಲೆ ಸಿಎಂಗೆ ಆರೋಗ್ಯ ಕೆಟ್ಟಿತ್ತು. ಫುಡ್‌ಪಾಯಿಸನ್ ಆಗಿ ಹೊಟ್ಟೆ ನೋವು ಕೂಡ ಶುರುವಾಗಿತ್ತು. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಕೂಡ ಆಗಿರಲಿಲ್ಲ. ಬೆಳಗ್ಗೆಯಾದರೂ ಆರೋಗ್ಯ ಸರಿಯಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೇ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಸಿಲಿನಲ್ಲಿ ಕುಳಿತರು. ಇದಾದ ಸ್ವಲ್ಪ ಹೊತ್ತಿಗೆ ಸುಸ್ತಾದ ಸಿಎಂ ನೇರವಾಗಿ ಸರ್ಕ್ಯೂಟ್ ಹೌಸ್‌ಗೆ ತೆರಳಿದರು.
ಕೂಡಲೇ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಕೂಡ ಪಡೆದುಕೊಂಡರು. ವೈದ್ಯರು ಸಿಎಂಗೆ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ ಹಿನ್ನೆಲೆ ಸಿಎಂ ರೂಮ್‌ನಲ್ಲೇ ಮಧ್ಯಾಹ್ನದಿಂದ ವಿಶ್ರಾಂತಿ ಪಡೆದರು. ಈ ಮಧ್ಯೆ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿಟಿ ದೇವೇಗೌಡ ಸೇರಿ ಹಲವು ನಾಯಕರು ಸರ್ಕ್ಯೂಟ್ ಹೌಸ್‌ಗೆ ತೆರಳಿದರು. ತಂದೆಜತೆ ಕೆಲಹೊತ್ತು ಚರ್ಚಿಸಿ ಬಳಿಕ ಹೊರಬಂದ ಯತೀಂದ್ರ, ತಂದೆಯವರ ಆರೋಗ್ಯ ಚೆನ್ನಾಗಿದೆ, ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ. ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ, ಡೈರಿಯಾ ಸಮಸ್ಯೆ ತರಾ ಆಗಿದೆ. ಸದ್ಯ ಆರೋಗ್ಯವಾಗಿದ್ದು ಇಂದಿನಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಉತ್ತರ ಕೊಡಬೇಕಿದೆ. ಹಾಗಾಗಿ ಎಲ್ಲಾ ಮಾಹಿತಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಇನ್ನು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಸಿಎಂ ಆರೋಗ್ಯ ವಿಚಾರಿಸಲು ಬಂದಿದ್ದೆ. ಇದರಲ್ಲಿ ರಾಜಕೀಯ ಏನು ಇಲ್ಲ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು, ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ದೌಡಾಯಿಸಿದ ನಾಯಕರು
ಬೆಳಗಾವಿ ಅಧಿವೇಶನ ಇಂದಿಗೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಸಾಕಷ್ಟು ಪ್ರಶ್ನೆಗಳಿದ್ದು ಇದಕ್ಕೆ ಸಿಎಂ ಅವರೇ ಉತ್ತರ ಕೊಡಬೇಕಾಗಿದೆ. ಇಂದು ಮತ್ತೆ ಸದನಕ್ಕೆ ಹಾಜರಾಗುತ್ತಿದ್ದು ಸ್ವಪಕ್ಷೀಯರಿಗೆ ಹೆಚ್ಚು ಬಲ ತಂದಂತಾಗಿದೆ. ವಿರೋಧ ಪಕ್ಷದವರು ಕೂಡ ಸಿಎಂ ಅವರನ್ನು ಎದುರಿಸಲು ಸಜ್ಜಾಗಿದ್ದು ಇಂದು ಯಾವ ರೀತಿ ವಾಗ್ಯುದ್ಧ ನಡೆಯಲಿದೆ ಎಂಬ ಕುತೂಹಲ ಮೂಡಿದೆ.



