ಬೆಂಗಳೂರು: ಕುರುಬ ಸಮಾಜವನ್ನು ಒಡೆಯಲು ಆರ್ಎಸ್ಎಸ್ ಹುನ್ನಾರ ನಡೆಸುತ್ತಿದೆ. ಅದಕ್ಕಾಗಿ ಈಶ್ವರಪ್ಪನವರನ್ನು ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು ಎಂಬ ಹೋರಾಟದ ಹೆಸರಲ್ಲಿ ಈ ಜನಾಂಗವನ್ನು ದಾರಿ ತಪ್ಪಿಸಲಾಗುತ್ತಿದೆ. ಆರ್ಎಸ್ಎಸ್ನ ದತ್ತಾತ್ರೇಯ ಹೊಸಬಾಳೆ ಮತ್ತು ಸಂತೋಷ್ ಈಶ್ವರಪ್ಪನವರನ್ನು ಬಳಸಿಕೊಂಡು ಈ ಕೆಲಸ ಮಾಡುತ್ತಿದ್ದಾರೆ ಹೊರತು ಈಶ್ವರಪ್ಪ ಸ್ವಂತ ಬುದ್ಧಿಯಿಂದ ಈ ಹೋರಾಟ ನಡೆಸುತ್ತಿಲ್ಲ. ನಾವು ಕರೆದರೂ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಕರೆದೇ ಇಲ್ಲ ಎಂದಿದ್ದಾರೆ.
ಗೊಂಡ, ರಾಜಗೊಂಡ ಸಮುದಾಯದವರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಲ್ಲಿ ಕುರುಬರು ಎಂದು ಕರೆದುಕೊಳ್ಳುವವರೂ ಸೇರಿದ್ದಾರೆ. ಅವರನ್ನೆಲ್ಲ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಮೋದಿಯವರು ಪ್ರಧಾನಿಯಾಗಿ ಆರೂವರೆ ವರ್ಷಗಳಾದರೂ ಯಾಕೆ ಆದೇಶ ಮಾಡಿಸಲಿಲ್ಲ. ಇನ್ನು ಕೋಲಿ, ಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಕಾರ್ಯವೂ ನನೆಗುದಿಗೆ ಬಿದ್ದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಏನಿದರ ಮರ್ಮ? ಹೋರಾಟ ತಪ್ಪಲ್ಲ. ಆದರೆ 6 ವರ್ಷದಿಂದ ಸುಮ್ಮನಿದ್ದು, ಈಗ ಹೋರಾಟ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ಇದರ ಹಿಂದೆ ಆರ್ಎಸ್ಎಸ್ ಇರುವುದರ ಮರ್ಮವೇನು? ಯಾಕೆಂದರೆ ಬಿಜೆಪಿ ಹಾಗೂ ಆರ್ಎಸ್ಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಜನ ತೀರ್ಮಾನ ಮಾಡಬೇಕು. ಕುರುಬರನ್ನು ಎಸ್‍ಟಿಗೆ ಸೇರಿಸುವ ಮೊದಲು, ಎಸ್‍ಟಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.3 ರಿಂದ 20ಕ್ಕೆ ಹೆಚ್ಚಿಸಬೇಕು. ಅದಕ್ಕೂ ಹೋರಾಟ ನಡೆಸಬೇಕು. ಮೀಸಲು ಪ್ರಮಾಣ ಶೇ.3ರಷ್ಟೇ ಇದ್ದರೆ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಿದರೂ ಪ್ರಯೋಜನವಿಲ್ಲ ಎಂದಿದ್ದಾರೆ.
ಎಲ್ಲಿದ್ದರು ಈಶ್ವರಪ್ಪ? ಕುರುಬರ ಬಗ್ಗೆ ಈಶ್ವರಪ್ಪ ಅವರಿಗೆ ಇದ್ದಕ್ಕಿದ್ದಂತೆ ಕಾಳಜಿ ಬಂದಿದೆ. ಕಾಗಿನೆಲೆ ಮಠ ಸ್ಥಾಪನೆ ಸಂದರ್ಭದಲ್ಲಿ ಈಶ್ವರಪ್ಪ ಅವರು ಎಲ್ಲಿದ್ದರು? ಆಗ ಅವರು ಪತ್ತೆಯೇ ಇರಲಿಲ್ಲ. ಈಗ ಸ್ವಾಮೀಜಿಗಳನ್ನು ಕರೆದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಉಡುಪಿಯ ಕನಕ ಗೋಪುರ ಕೆಡವಿದಾಗ ಎಲ್ಲಿ ಹೋಗಿದ್ದರು? ರಾಜ್ಯ ಸಭಾ ಸದಸ್ಯರಾಗಿದ್ದ ರಾಮಾ ಜೋಯಿಸರು ಹಿಂದುಳಿದ ವರ್ಗದವರ ಮೀಸಲು ವಿರೋಧಿಸಿದಾಗ ಎಲ್ಲಿದ್ದರು? ಬಿಜೆಪಿಯಲ್ಲಿ ಆಗ ಈಶ್ವರಪ್ಪ ಅವರು ಇದ್ದರಲ್ಲವೇ? ಏಕೆ ವಿರೋಧ ಮಾಡಲಿಲ್ಲ. ಈಗ ಇದ್ದಕ್ಕಿದ್ದಂತೆ ಪ್ರೀತಿ ಬಂದಿದೆ. ಅವರು ಹೋರಾಟ ಮಾಡಲಿ. ಬೇಡ ಎನ್ನುವುದಿಲ್ಲ. ಮೊದಲು ಬೀದರ್, ಕಲಬರಗಿ, ಯಾದಗಿರಿಯ ಗೊಂಡ, ರಾಜಗೊಂಡ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆದೇಶ ಜಾರಿ ಮಾಡಿಸಲಿ. ಅದು ಬಿಟ್ಟು ಸ್ವಾರ್ಥಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ: ವಾಟಾಳ್ ನಾಗರಾಜ್
ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ -ಲವ್ ಜಿಹಾದ್ಗೆ ಸಿದ್ದರಾಮಯ್ಯ ಕೌಂಟರ್