ಮೋದಿಗೆ ಕೊಟ್ಟ ಈ ಗಿಫ್ಟ್ ಬಿಜೆಪಿ ಶಾಸಕರದ್ದೋ, ಡಿಕೆಶಿಯದ್ದೋ? ಇಲ್ಲಿದೆ ಅಸಲಿಯತ್ತು
ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಳ್ಳಿ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದ್ರೆ, ಅದು ಅದು, ಬಿಜೆಪಿ ಶಾಸಕರೊಬ್ಬರು ಪ್ರಧಾನಿಗೆ ನೀಡಲು ತಂದಿದ್ದು, ಆದರೆ, ಕೊಟ್ಟಿದ್ದು ಮಾತ್ರ ಡಿಕೆ ಶಿವಕುಮಾರ್ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್ ಆಗುತ್ತಿದೆ. ಇದರ ಬೆನ್ನಲ್ಲೇ ಸ್ವತಃ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಸ್ಪಷ್ಟನೆ ನೀಡಿದ್ದು, ಬೆಳ್ಳಿ ಗಣೇಶನ ಪ್ರತಿಮೆ ವಿವಾದಕ್ಕೆ ತೆರೆ ಬಿದ್ದಿದೆ. ಹಾಗಾದ್ರೆ, ಅಸಲಿಗೆ ಗಣೇಶ ವಿಗ್ರಹ ಯಾರುದ್ದು? ಎಲ್ಲಾ ಅಂತೆ ಕಂತೆಗಳಿಗೆ ಇಲ್ಲಿದೆ ಉತ್ತರ.

ಬೆಂಗಳೂರು, (ಆಗಸ್ಟ್ 12): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಬೆಳ್ಳೆ ಗಣೇಶನ ಪ್ರತಿಮೆ (Ganesh Idol) ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕ ಎಂ ಕೃಷ್ಣಪ್ಪ (M Krishnappa) ಅವರು ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಲು ತಂದಿದ್ದರು. ಆದ್ರೆ, ಅದನ್ನು ಡಿಕೆ ಶಿವಕುಮಾರ್ ತಮ್ಮದು ಎನ್ನುವ ರೀತಿಯಲ್ಲಿ ಮೋದಿಯವರಿಗೆ ನೀಡಿದ್ದಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ಡಿಸಿಎಂ ಅವರೇ ಈ ಬೆಳ್ಳಿ ಗಣಪತಿ ವಿಗ್ರಹವನ್ನು ಅವರ ಮನೆಯಿಂದ ತೆಗೆದುಕೊಂಡು ಬಂದದ್ದು. ಅವರ ಕಚೇರಿ ಸಿಬ್ಬಂದಿಯೇ ಪ್ರಧಾನಿ ಭದ್ರತೆ ಹೊಣೆ ಹೊತ್ತ ಎಸ್ಪಿಜಿಯವರಿಗೆ ಕೊಟ್ಟು ತಪಾಸಣೆ ನಡೆಸಿದ್ದು, ಬಳಿಕ ಎಸ್ಪಿಜಿ ಸಿಬ್ಬಂದಿಯೇ ಈ ವಿಗ್ರಹವನ್ನು ಪ್ರಧಾನಿ ಅವರಿಗೆ ಡಿಸಿಎಂ ಅವರು ನೀಡಲು ನೆರವಾದದ್ದು ಎನ್ನುವುದು ಸತ್ಯಾಂಶ ಗೊತ್ತಾಗಿದೆ. ಇನ್ನು ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಬೇರೆಯವರ ಉಡುಗೊರೆ ನೀಡುವ ದುಸ್ಥಿತಿ ತಮಗಿಲ್ಲ. ಅದು ಬೇರೆಯವರ ಉಡುಗೊರೆಯಲ್ಲ, ತಮ್ಮ ಸ್ವಂತ ಹಣದಿಂದ ಖರೀದಿಸಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹರಿದಾಡುತ್ತಿದ್ದ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕವೇ ಡಿಕೆಶಿ ಸ್ಪಷ್ಟನೆ
ಬಿಜೆಪಿ ಶಾಸಕ ತಂದಿರುವ ಬೆಳ್ಳಿ ಗಣಪತಿ ಪ್ರತಿಯಮೆಯನ್ನು ಡಿಕೆ ಶಿವಕುಮಾರ್ ಮೋದಿಗೆ ಕೊಟ್ಟು ಕ್ರೆಡಿಟ್ ತೆಗೆದುಕೊಂಡಿದ್ದಾರೆ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆಗುತ್ತಿವೆ. ಇದಕ್ಕೆ ಇದೀಗ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ. ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ. ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು. ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು ಎಂದಿದ್ದಾರೆ. ಈ ಮೂಲಕ ಗಣೇಶನ ಪ್ರತಿಮೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ!
ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು.
ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ… pic.twitter.com/uPTYQNcSI7
— DK Shivakumar (@DKShivakumar) August 12, 2025
ಸುಳ್ಳು ವರದಿಯಲ್ಲೇನಿತ್ತು?
ಪ್ರಧಾನಿ ಮೋದಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ರಾಜಧಾನಿಯ ಬಿಜೆಪಿಯ ಶಾಸಕರೆಲ್ಲರೂ ಭಾಗವಹಿಸಿದ್ದರು. ಅದರಂತೆಯೇ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಕೂಡಾ ಭಾಗವಹಿಸಿದ್ದರು. ಆದರೆ, ಅವರಿಗೆ ವೇದಿಕೆಯ ಮೇಲೆ ಅವಕಾಶವಿರಲಿಲ್ಲ. ಇನ್ನು ಮೋದಿಯವರಿಗೆ ಗಿಫ್ಟ್ ನೀಡಲು ಕೃಷ್ಣಪ್ಪ ಅವರು ಬೆಳ್ಳಿ ಗಣೇಶನ ವಿಗ್ರಹವನ್ನು ತಂದಿದ್ದರು. ಮೋದಿಯವರ SPG ( Special Protection Group) ಸಿಬ್ಬಂದಿ ಈ ಗಿಫ್ಟ್ ಅನ್ನು ತಪಾಸಣೆ ಮಾಡಿ ಟೇಬಲ್ ಮೇಲೆ ಇಟ್ಟಿದ್ದರು. ಆದ್ರೆ, ಅಲ್ಲಿಗೆ ಬಂದ ಡಿಸಿಎಂ ಡಿಕೆ ಶಿವಕುಮಾರ್, ಆ ವಿಗ್ರಹವನ್ನು ಮೋದಿಯವರಿಗೆ ನೀಡಿದ್ದಾರೆ. ಕೊನೆಗೆ ಗಿಫ್ಟ್ ಎಲ್ಲಿ ಎಂದು ಹುಡುಕಿದ ಶಾಸಕ ಕೃಷ್ಣಪ್ಪ ಅವರು ನಿರಾಸೆ ಅನುಭವಿಸಿದ್ದಾರೆ ಎಂದು ವರದಿಯಾಗಿತ್ತು.
ಸಿಕ್ಕಾಪಟೆ ಟ್ರೋಲ್
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವು ಭಾರೀ ಟ್ರೋಲ್ ಆಗಿದೆ. ಅರುಣಾ ಎನ್ನುವವರು, ಸಾಮಾನ್ಯ ಜನರು ಅವಕಾಶಗಳಿಗಾಗಿ ಕಾಯುತ್ತಾರೆ. ಆದರೆ ಬುದ್ಧಿವಂತರು ಅವಕಾಶಗಳನ್ನು ಸೃಷ್ಟಿಸುತ್ತಾರೆ. ಇದು ಚೆನ್ನಾಗಿದೆ ಎಂದಿದ್ದಾರೆ. ಮತ್ತೊಬ್ಬರು ದಿ. ಪುನೀತ್ ರಾಜ್‌ಕುಮಾರ್ ಅವರ ಫೇಮಸ್ ಡೈಲಾಗ್ ಪಟಾಕಿ ಯಾರದ್ದಾದರೇನು ಹಚ್ಚೋರು ನಾವಾಗಿರಬೇಕು ಎನ್ನುವಂತೆ ಇದೆ ಇದು ಎಂದು ಹಲವರು ತಮಾಷೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಕ್ರಿಯೇಟಿವಿಟಿಗೆ ಮೆಚ್ಚ ಬೇಕು ಸಿಕ್ಕ ಸೈಕಲ್ ಗ್ಯಾಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ಬೆಂಗಳೂರಿನ ಬಗ್ಗೆ ಫೈಲ್ ತಗೊಂಡು ಹೋಗಿ ಚರ್ಚೆ ಮಾಡಿದರು. ಗಿಫ್ಟ್ ಅನ್ನೂ ಕೊಟ್ಟಿದ್ದಾರೆ ಎಂದಿದ್ದಾರೆ.
ಇನ್ನೂ ಕೆಲವರು ಈ ರೀತಿ ಬೇರೆ ಅವರ ಗಿಫ್ಟ್ ಕೊಡುವುದನ್ನು ಕ್ರಿಯೇಟಿವಿಟಿ ಅಂತಾರೆಯೇ. ಅವಕಾಶ ಬಳಕೆ ಅಂತಾ ಆಗಲ್ವಾ ಎಂದೂ ಹೇಳಿದ್ದಾರೆ. ಒಟ್ಟಾರೆ ಈ ವಿಷಯದ ಬಗ್ಗೆ ಪರ – ವಿರೋಧ ಚರ್ಚೆಗಳು ಜೋರಾಗಿದ್ದವು. ಆದ್ರೆ, ಇದೀಗ ಇದಕ್ಕೆ ಸ್ವತಃ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ, ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡುವ ಮೂಲಕ ಟ್ರೋಲ್ ಗಳ ಬಾಯಿ ಮುಚ್ಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Tue, 12 August 25




