ನೈಋತ್ಯ ರೈಲ್ವೆ ಇಲಾಖೆಗೆ ವಂಚನೆ: ಮೂವರು ಅಧಿಕಾರಿಗಳಿಗೆ ದಂಡ ಸೇರಿ 4 ವರ್ಷ ಜೈಲು ಶಿಕ್ಷೆ
ನೈಋತ್ಯ ರೈಲ್ವೆಯ ಮೂವರು ಅಧಿಕಾರಿಗಳು 18 ಲಕ್ಷ ರೂ. ವಂಚನೆಯಲ್ಲಿ ಭಾಗಿಯಾಗಿದ್ದಾರೆಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಸಿಬಿಐ ನ್ಯಾಯಾಲಯವು ಅವರಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2,35,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೆಂಗಳೂರು, ನವೆಂಬರ್ 08: ವಂಚನೆಯಿಂದ ರೈಲ್ವೆ ಇಲಾಖೆಗೆ ಉಂಟಾದ ನಷ್ಟ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆಯ (south western railway) ಮೂವರು ಅಧಿಕಾರಿಗಳಿಗೆ 2,35,000 ರೂ. ದಂಡದೊಂದಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಸಿಬಿಐ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ. ದಕ್ಷಿಣ-ಪಶ್ಚಿಮ ರೈಲ್ವೆಯ ರವಾನೆ ವಿಭಾಗದ ಅಧೀಕ್ಷಕ ಎಂ. ನಾಗರಾಜ್, ಪರ್ಸನಲ್ ಬ್ರಾಂಚ್ ಕ್ಲರ್ಕ್ ಶಾದಾಬ್ ಖಾನ್ ಮತ್ತು ನಿವೃತ್ತ ಅಕೌಂಟ್ಸ್ ಅಸಿಸ್ಟೆಂಟ್ ಆಗಿದ್ದ ಶ್ರೀಮತಿ. ಪದ್ಮಿನಿ ಶಿಕ್ಷೆಗೊಳಗಾದವರು.
ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಸಿಬಿಐ ಅಧಿಕಾರಿಗಳು 2016 ನವೆಂಬರ್ 21 ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಸಿಬಿಐ ವಿಶೇಷ ನ್ಯಾಯಾಧೀಶರು ವಿಚಾರಣೆ ನಡೆಸಿ, ಆರೋಪಿಗಳು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆ ಅದಕ್ಕೆ ಅನುಗುಣವಾಗಿ ಅವರಿಗೆ ಶಿಕ್ಷೆ ವಿಧಿಸಿದ್ದಾರೆ.
ಸಿಬಿಐ ಟ್ವೀಟ್
DESIGNATED CBI COURT SENTENCES THREE OFFICIALS OF SOUTH WESTERN RAILWAY, BENGALURU TO 4 YEARS’ RIGOROUS IMPRISONMENT WITH FINE OF Rs. 2,35,000/- IN A CASE OF FRAUDULENT PAYMENTS CAUSING LOSS TO RAILWAYS pic.twitter.com/OPZ97JtITa
— Central Bureau of Investigation (India) (@CBIHeadquarters) November 8, 2024
ಪೆನುಕೊಂಡದ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವಂಚನೆ ಮಾಡುವ ಮೂಲಕ ಅಧಿಕಾರಿಗಳು ರೈಲ್ವೆ ಇಲಾಖೆಗೆ ನಷ್ಟವನ್ನುಂಟು ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು 2016 ಏಪ್ರಿಲ್ 27 ರಂದು ಬೆಂಗಳೂರಿನ ನೈಋತ್ಯ ರೈಲ್ವೆಯ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಅವರು ಯಾವುದೇ ಬಿಲ್ಗಳು, ರಸೀದಿಗಳು ಮತ್ತು ಅರ್ಜಿಗಳನ್ನು ಎಡಿಟ್ ಲಿಸ್ಟ್ ಮತ್ತು ಸಂಬಳ ಬಿಲ್ಗಳಲ್ಲಿ ಸೇರಿಸದೆ, ಸದರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 16 ಉದ್ಯೋಗಿಗಳ ಹೆಸರುಗಳ ವಿರುದ್ಧ ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ಸಬ್ಸಿಡಿ ಮರುಪಾವತಿಯಲ್ಲಿ ವಂಚಿಸಲಾಗಿದೆ. ಆ ಮೂಲಕ ಆರೋಪಿಗಳು ಅಕ್ರಮವಾಗಿ ನೈಋತ್ಯ ರೈಲ್ವೆ ಇಲಾಖೆಗೆ 18 ಲಕ್ಷ ರೂ. ಮೋಸ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.