ಬಿಜೆಪಿ 3 MLC ಸ್ಥಾನಕ್ಕೆ ಅಭ್ಯರ್ಥಿಗಳು ಫೈನಲ್, ಮಂಡ್ಯ ಬಿಟ್ಟು ಕೊಟ್ಟ ಸುಮಲತಾಗೆ ಬಂಪರ್ ಗಿಫ್ಟ್?
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮೂರು ಪಕ್ಷದಲ್ಲೂ ರಂಗತಾಲೀಮು ಜೋರಾಗಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಸಿಗುತ್ತೆ? ಯಾರು ಮೇಲ್ಮನೆ ಪ್ರವೇಶಿಸುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಕಾಂಗ್ರೆಸ್ನಲ್ಲಿ ಆಕಾಂಕ್ಷಿ ಪಟ್ಟಿ ಹನುಮಂತನ ಬಾಲದಂತೆ ಇದ್ದರೆ, ಇತ್ತ ಬಿಜೆಪಿ ತನ್ನ ಪಾಲಿನ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾದ್ರೆ, ಬಿಜೆಪಿಯಿಂದ ಮೇಲ್ಮನೆಗೆ ಹೋಗುವವರು ಯಾರು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮೇ 31): ಜೂನ್ 3ರಂದು ವಿಧಾನಸಬೆಯಿಂದ (vidhana sabha) ವಿಧಾನ ಪರಿಷತ್‌ಗೆ (vidhana parishat) ಒಟ್ಟು 13 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ (MLC Election) ಬಿಜೆಪಿಯಿಂದ (BJP) ಅಭ್ಯರ್ಥಿಗಳನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ. ಒಟ್ಟು 13ರ ಪೈಕಿ ತನ್ನ ಪಾಲಿನ 3 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಇದರಲ್ಲಿ ಸುಮಲತಾ ಅಂಬರೀಶ್ (Sumalatha Ambareesh) ಹೆಸರು ಇರುವುದು ತಿಳಿದುಬಂದಿದೆ. ಹೌದು…ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಕ್ಕೆ ಹೈಕಮಾಂಡ್, ಸುಮಲತಾ ಅವರನ್ನು ವಿಧಾನಪರಿಷತ್ ಆಯ್ಕೆ ಮಾಡಿದೆ ಎನ್ನಲಾಗಿದ್ದು, ನಾಳೆ(ಜೂನ್ 01) ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.
ಸಂಸದೆ ಸುಮಲತಾ ಅಂಬರೀಶ್, ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ. ನಾಗರಾಜು ಅವರಿಗೆ ಪರಿಷತ್ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಜೂನ್ 1ರ ರಾತ್ರಿ ವೇಳೆಗೆ ಅಧಿಕೃತವಾಗಿ ಹೈಕಮಾಂಡ್ ಘೋಷಿಸಲಿದೆ ಎಂದು ಹೇಳಲಾಗಿದೆ. ಸಂಪ್ರದಾಯದ ಅನುಸಾರ ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ರವಾನಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದರಂತೆ ರಾಜ್ಯ ಘಟಕ ನಡೆದುಕೊಂಡಿದ್ದು, ಕೋರ್ ಕಮಿಟಿಯಲ್ಲಿ ಚರ್ಚಿಸಲಾದ 15ಕ್ಕೂ ಹೆಚ್ಚು ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನಿಗೆ ಎಂಎಲ್ಸಿ ಟಿಕೆಟ್ ಪಕ್ಕಾ: ಖುದ್ದು ಸುಳಿವು ನೀಡಿದ ಯತೀಂದ್ರ
ಇನ್ನು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಂತೆಯೂ ರಾಜ್ಯ ನಾಯಕರು ಕೇಂದ್ರದ ಮುಖಂಡರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್, ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ಸುಮಲತಾ ಅಂಬರೀಶ್ ಹೆಸರು ಮುನ್ನೆಲೆಗೆ ತಂದಿದೆ ಎಂದು ತಿಳಿದುಬಂದಿದೆ. ಇನ್ನು ಎನ್ ರವಿ ಕುಮಾರ್ ಅವರ ಪಕ್ಷ ಸಂಘಟನೆ ಹಾಗೂ ಪಕ್ಷ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಸಿಟಿ ರವಿ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಬಗ್ಗೆ ಪರೋಕ್ಷವಾಗಿ ಇತ್ತೀಚೆಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೇಳಿದ್ದರು. ಅಲ್ಲದೇ ಕೋರ್ ಕಮಿಟಿ ಸಭೆಯಲ್ಲೂ ಸಹ ಪಟ್ಟಿಯಲ್ಲಿ ಸಿಟಿ ರವಿ ಹಾಗೂ ಲೋಕಸಭಾ ಟಿಕೆಟ್ ವಂಚಿತ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್ಗೆ ಕಳುಹಿಸಲಾಗಿದೆ. ಆದ್ರೆ, ಇದೀಗ ಬಂದ ಮಾಹಿತಿ ಪ್ರಕಾರ ಹೈಕಮಾಂಡ್, ಎನ್ ರವಿ ಕುಮಾರ್, ಸುಮಲತಾ ಅಂಬರೀಶ್ ಮತ್ತು ಎಂ. ನಾಗರಾಜು ಹೆಸರು ಫೈನಲ್ ಮಾಡಿದೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 pm, Fri, 31 May 24