ಶಾಲೆಗೆ ಹೋಗಬೇಕಾದರೆ ತೆಪ್ಪಗಳೇ ವಾಹನ, “ರಾಜ್ಯದಿಂದ ಕೈಬಿಡಿ, ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ”: ಜನಾಕ್ರೋಶ

TV9 Digital Desk

| Edited By: Rakesh Nayak Manchi

Updated on:May 25, 2022 | 10:53 AM

ರಾಯಚೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಈಗಲೂ ಕೃಷ್ಣಾ ನದಿ ದಾಟಲು ಸೇತುವೆ ಇಲ್ಲದೆ ತೆಪ್ಪಗಳ ಮೂಲಕ ಜೀವಭಯದಲ್ಲಿ ಸಾಗುತ್ತಾರೆ. 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದರೂ ಪ್ರಯೋಜನವಾಗದೆ ಇದೀಗ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

ಶಾಲೆಗೆ ಹೋಗಬೇಕಾದರೆ ತೆಪ್ಪಗಳೇ ವಾಹನ, ರಾಜ್ಯದಿಂದ ಕೈಬಿಡಿ, ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ: ಜನಾಕ್ರೋಶ
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿದುಬಿದ್ದಿರುವುದು

ರಾಯಚೂರು: ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ರಾಯಚೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಕೆಲವೊಂದು ಮೂಲಭೂತ ಸೌಕರ್ಯ (Infrastructure)ಗಳಿಂದ ವಂಚಿತವಾಗಿದೆ. ತೆಲಂಗಾಣ ರಾಜ್ಯದ ಗಡಿಯಲ್ಲಿರುವ ನಡುಗಡ್ಡೆಯಲ್ಲಿರೊ ಕುರುವಕುಲ, ಕುರುವಕುರದ, ನಾರದಗಡ್ಡೆ ಸೇರಿ ನಾಲ್ಕೈದು ಹಳ್ಳಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕಾದರೆ, ಕೃಷ್ಣಾ ನದಿಯನ್ನು ದಾಟಿಯೇ ಹೋಗಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ನದಿಗೆ ಸೇತುವೆ (Bridge) ಇಲ್ಲ. ತೆಪ್ಪಗಳ ಮೂಲಕವೇ ಹೋಗಬೇಕು. ನಾಲ್ಕೈದು ಹಳ್ಳಿಗಳ ಸುಮಾರು‌ 3 ಸಾವಿರಕ್ಕೂ ಹೆಚ್ಚು ಜನರ ಗೋಳು ಕೇಳುವವರು ಯಾರು ಎಂಬಂತಾಗಿದೆ.

ಶಾಲೆ ಆರಂಭವಾಯಿತು ಅಂದರೆ ಸಾಕು ಮಕ್ಕಳಿಗೆ ಹಾಗೂ ಪೋಷಕರಿಗೆ ಜೀವಭಯ ಕಾಡಲು ಆರಂಭವಾಗುತ್ತದೆ. ಮೊಸಳೆಗಳು, ಪ್ರವಾಹ, ಬಿರುಗಾಳಿ ಎಂಬ ಭಯದ ನಡುವೆ ತೆಪ್ಪಗಳ ಮೂಲಕ ಸಾಗುತ್ತಾರೆ. ಸದ್ಯ ಶಾಲಾ ಕಾಲೇಜುಗಳು ಅರಂಭವಾಗಿದ್ದು, ಮತ್ತೆ ಮಕ್ಕಳ ಸ್ಥಿತಿ ಕರಾಳತೆಗೆ ಜಾರಿದೆ. ತೆಪ್ಪಗಳ ಮೂಲಕವೇ ಶಾಲಾ ಕಾಲೇಜುಗಳಿಗೆ ಮಕ್ಕಳು ಓಡಾಡುತ್ತಿದ್ದಾರೆ. ಒಂದೆಡೆ ಸುರಕ್ಷಿತವಾಗಿ ಶಾಲಾ ಕಾಲೇಜುಗಳಿಗೆ, ಮನೆಗಳಿಗೆ ತಲುಪುತ್ತೇವೋ ಎಂಬ ಭಯ, ಇನ್ನೊಂದೆಡೆ ಐದು ನಿಮಿಷ ವಿಳಂಬವಾದರೂ ತರಗತಿಗಳು ತಪ್ಪಿಹೋಗುತ್ತವೆ. ಇವರ ಸ್ಥಿತಿ ಕೇಳುವವರು ಯಾರು?

ಇದನ್ನೂ ಓದಿ: Schizophrenia: ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿಗೆ ಸ್ಕಿಜೋಫ್ರೇನಿಯಾ

ರಾಜ್ಯದಿಂದ ಕೈಬಿಡಿ,ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ

ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಕ್ಷಿತವಾಗಿ ಸಾಗಲಿ ಎಂದು 2004ರಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಯಿತು. ಅದರಂತೆ ಕಾಮಗಾರಿಯೂ ಆರಂಭವಾಯಿತು. ಜುರೆಲಾ ಪ್ರೊಜೆಕ್ಟ್ ಅಡಿ ಬ್ರಿಡ್ಜ್ ಕಾಮಗಾರಿ ಆರಂಭವಾಯಿತು. ಆದರೆ ಅವೈಜ್ಞಾನಿಕ, ಕಳಪೆ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲೇ ಸೇತುವೆ ಕುಸಿದುಬಿದ್ದಿದೆ.

ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದರೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಳ್ಳಿ ಜನರು, “ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಟ್ತಿದ್ದಿವಿ ಸಾರ್, ರಾಜ್ಯದಿಂದ ಕೈಬಿಡಿ, ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ. ಕಳೆದ 20 ವರ್ಷಗಳಿಂದ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ. ಕೂಡಲೇ ಕ್ರಮಕ್ಕೆ ಮುಂದಾಗದಿದ್ದರೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು, ಮೊಸಳೆಗೆ ಆಹಾರ ಅನ್ನೊ ಚಳುವಳಿ ಆರಂಭಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Prithviraj Movie: ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಚಿತ್ರವನ್ನು ವೀಕ್ಷಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada