ನರಹಂತಕ ಚಿರತೆಗಾಗಿ ಮೆಗಾ ತಲಾಶ್, ಟ್ರ್ಯಾಪ್ ಕ್ಯಾಮರಾದಲ್ಲಿ 4 ವನ್ಯಮೃಗಗಳು ಪತ್ತೆ
ತುಮಕೂರು: ಅಲ್ಲಿ ನಾಲ್ಕೈದು ಊರಿನ ಜನರೇ ಬೆಚ್ಚಿಬಿದ್ದಿದ್ದಾರೆ. ಹೊಲಗದ್ದೆಗಳ ಕೆಲಸಕ್ಕೆ ಹೋಗೋದನ್ನೇ ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ 60 ಸಿಬ್ಬಂದಿ ಸರ್ಚಿಂಗ್ ನಡೆಸ್ತಿದ್ದಾರೆ. ಊರ ಜನ ಕೈಯಲ್ಲಿ ಬಡಿಗೆ ಹಿಡಿದು ಹಗಲುರಾತ್ರಿ ಕಾಯುತ್ತಿದ್ದಾರೆ. ಕೈಯಲ್ಲಿ ದೊಣ್ಣೆ ಹಿಡಿದು ಹುಡುಕಾಟ.. ಬಂದೂಕು ಹೆಗಲಿಗೇರಿಸಿಕೊಂಡು ಕಾಡುಮೇಡುಗಳಲ್ಲಿ ಅಲೆದಾಟ.. ಕಂಡ ಕಂಡ ಜಮೀನಿನಲ್ಲೂ ತಲಾಶ್ ನಡೆದಿದೆ. ಹಳ್ಳಿ ಹಳ್ಳಿಯಲ್ಲೂ ಸರ್ಚಿಂಗ್ ನಡೀತಿದೆ. ಊರವರೆಲ್ಲಾ ಬೆದರಿ ನಿಂತಿದ್ದಾರೆ. ಅಷ್ಟಕ್ಕೂ ಇವರೆಲ್ಲರಿಗೆ ಕಂಟಕವಾಗಿರೋದು, ಇಷ್ಟೆಲ್ಲಾ ಕಾರ್ಯಾಚರಣೆ ನಡೆಯುತ್ತಿರೋದು ನರಹಂತಕ ಚಿರತೆಗಾಗಿ. ನರಹಂತಕ ಚಿರತೆಗಾಗಿ ಸರ್ಚಿಂಗ್! ತುಮಕೂರಿನ […]

ತುಮಕೂರು: ಅಲ್ಲಿ ನಾಲ್ಕೈದು ಊರಿನ ಜನರೇ ಬೆಚ್ಚಿಬಿದ್ದಿದ್ದಾರೆ. ಹೊಲಗದ್ದೆಗಳ ಕೆಲಸಕ್ಕೆ ಹೋಗೋದನ್ನೇ ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ 60 ಸಿಬ್ಬಂದಿ ಸರ್ಚಿಂಗ್ ನಡೆಸ್ತಿದ್ದಾರೆ. ಊರ ಜನ ಕೈಯಲ್ಲಿ ಬಡಿಗೆ ಹಿಡಿದು ಹಗಲುರಾತ್ರಿ ಕಾಯುತ್ತಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಹುಡುಕಾಟ.. ಬಂದೂಕು ಹೆಗಲಿಗೇರಿಸಿಕೊಂಡು ಕಾಡುಮೇಡುಗಳಲ್ಲಿ ಅಲೆದಾಟ.. ಕಂಡ ಕಂಡ ಜಮೀನಿನಲ್ಲೂ ತಲಾಶ್ ನಡೆದಿದೆ. ಹಳ್ಳಿ ಹಳ್ಳಿಯಲ್ಲೂ ಸರ್ಚಿಂಗ್ ನಡೀತಿದೆ. ಊರವರೆಲ್ಲಾ ಬೆದರಿ ನಿಂತಿದ್ದಾರೆ. ಅಷ್ಟಕ್ಕೂ ಇವರೆಲ್ಲರಿಗೆ ಕಂಟಕವಾಗಿರೋದು, ಇಷ್ಟೆಲ್ಲಾ ಕಾರ್ಯಾಚರಣೆ ನಡೆಯುತ್ತಿರೋದು ನರಹಂತಕ ಚಿರತೆಗಾಗಿ.
ನರಹಂತಕ ಚಿರತೆಗಾಗಿ ಸರ್ಚಿಂಗ್!
ತುಮಕೂರಿನ ಬೈಚೇನಹಳ್ಳಿಯಲ್ಲಿ ಮೂರು ವರ್ಷದ ಬಾಲಕಿ ಚಿರತೆ ಬಾಯಿಗೆ ಆಹಾರವಾಗ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಅಷ್ಟಕ್ಕೂ ನರಹಂತಕ ಚಿರತೆ ಕೊಲ್ಲಲು ಅರಣ್ಯ ಸಚಿವರು ಮೌಖಿಕವಾಗಿ ಹೇಳಿದ್ದರು. ಆದ್ರೆ ಸರ್ಕಾರದಿಂದ ಇದುವರೆಗೂ ಆದೇಶ ಬಂದಿಲ್ಲವಂತೆ. ಹೀಗಾಗಿ ಜೀವಂತವಾಗಿಯೇ ಅದನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ತಲಾಶ್ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಸಿ.ಎಸ್.ಪುರ, ಮಣಿಕುಪ್ಪೆ, ಹೆಬ್ಬೂರು, ಬೈಚೇನಹಳ್ಳಿ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಆಪರೇಷನ್ ಸಮರ್ಥ್ ಕೂಂಬಿಂಗ್ ನಡೆಯುತ್ತಿದೆ. ಬಂಡಿಪುರ, ಹಾಸನ ಹಾಗೂ ತುಮಕೂರು ಜಿಲ್ಲೆಯ ಅರಣ್ಯಾಧಿಕಾರಿಗಳು, ಅರವಳಿಕೆ ತಜ್ಞರು ನರಹಂತಕನಿಗಾಗಿ ಸರ್ಚ್ ಮಾಡ್ತಿದ್ದಾರೆ.
ಇನ್ನು ಸಿ.ಎಸ್.ಪುರ ಹೋಬಳಿ ಸುತ್ತಮುತ್ತ ಒಟ್ಟು 25 ಬೋನುಗಳನ್ನ ಇರಿಸಲಾಗಿದೆ. ಚಿರತೆಯ ಪ್ರತಿ ದಾಳಿಯೂ ರಾತ್ರಿಯೇ ನಡೆಯುತ್ತಿರೋ ಹಿನ್ನೆಲೆಯಲ್ಲಿ ರಾತ್ರಿ ಹೊತ್ತಲ್ಲೂ ಕೂಂಬಿಂಗ್ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ಜತೆ 60 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅರಣ್ಯ ಇಲಾಖೆ ಇಟ್ಟಿರೋ ಟ್ರ್ಯಾಪ್ ಕ್ಯಾಮರಾದಲ್ಲಿ ಒಂದು ಹೆಣ್ಣು ಚಿರತೆ, ಒಂದು ಗಂಡು ಚಿರತೆ, ಎರಡು ಚಿರತೆ ಮರಿಗಳ ಪೋಟೋಗಳು ದಾಖಲಾಗಿದ್ದು, ಇದೇ ನಾಲ್ಕು ಚಿರತೆಗಳು ಪದೇ ಪದೇ ಗ್ರಾಮಕ್ಕೆ ಲಗ್ಗೆ ಹಾಕ್ತಿರೋ ಅನುಮಾನ ಶುರುವಾಗಿದೆ. ಕೆಲವೆಡೆ ಚಿರತೆ ಹೆಜ್ಜೆಗುರುತು ಪತ್ತೆಯಾಗಿದ್ದು, ಅದ್ರ ಆಧಾರದಲ್ಲಿ ಹುಡುಕಾಟ ನಡೆದಿದೆ.
ನರಹಂತಕ ಚಿರತೆಗಳಿಗಾಗಿ ಅರಣ್ಯ ಇಲಾಖೆ ಇಷ್ಟೊಂದು ಸರ್ಚ್ ನಡೆಸುತ್ತಿದ್ರೆ, ಇತ್ತ ಮಣಿಕುಪ್ಪೆ, ಬೈಚೇನಹಳ್ಳಿ, ಹೆಬ್ಬೂರು ಭಾಗದ ಜನ ಹಗಲಲ್ಲೂ ಹೊಲಗದ್ದೆಗಳಿಗೆ ಹೋಗಲು ಭಯ ಪಡ್ತಿದ್ದಾರೆ. ನರಭಕ್ಷಕ ಚಿರತೆ ಯಾವಾಗ ಮೈಮೇಲೆ ಎರಗುತ್ತೋ ಅನ್ನೋ ಆತಂಕದಲ್ಲಿದ್ದಾರೆ.
Published On - 3:07 pm, Tue, 3 March 20