ಹಾವೇರಿ ಬಳಿಕ ತುಮಕೂರಿನಲ್ಲೂ SLV ಮಹಿಳಾ ಮಾರ್ಟ್ ಭಾರೀ ವಂಚನೆ: ಮಹಿಳೆಯರಿಗೆ ಲಕ್ಷ ಲಕ್ಷ ವಂಚನೆ
ಹಾವೇರಿ ಬೆನ್ನಲ್ಲೇ ತುಮಕೂರಿನ ಜಯನಗರದಲ್ಲೂ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್’ ಗೃಹ ಉದ್ಯೋಗದ ನೆಪದಲ್ಲಿ ನೂರಾರು ಮಹಿಳೆಯರಿಗೆ 5 ಲಕ್ಷದಿಂದ ಕೋಟಿ ರೂ.ವರೆಗೂ ವಂಚಿಸಿದೆ. ಮನೆಯ ಪತ್ರ ಅಡವಿಟ್ಟು ಹಣ ಹೂಡಿದ್ದ ಮಹಿಳೆಯರು ಈಗ ಬೀದಿಗೆ ಬಿದ್ದಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತುಮಕೂರು, ಜೂನ್ 11: ಹಾವೇರಿಯಲ್ಲಿ ಸ್ವಯಂ ಉದ್ಯೋಗದ ಹೆಸರಿನಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಸದ್ದು ಮಾಡಿದ್ದ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್’ (SLV Mahila Mart) ಕಂಪನಿಯ ವಂಚನಾ ಜಾಲ ರಾಜ್ಯದಾದ್ಯಂತ ವಿಸ್ತರಿಸಿದೆ ಎನ್ನಲಾಗಿತ್ತು. ಇದೀಗ ತುಮಕೂರು ಜಿಲ್ಲೆಯಲ್ಲಿಯೂ ಮಹಾ ಮೋಸ ನಡೆದಿರುವುದು ಗೊತ್ತಾಗಿದೆ. ತುಮಕೂರು ನಗರದ ಜಯನಗರದಲ್ಲಿ ಶಾಖೆ ತೆರೆದಿದ್ದ ಈ ಸಂಸ್ಥೆಯು, ಗೃಹಿಣಿಯರು ಹಾಗೂ ವಿದ್ಯಾವಂತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಆಮಿಷ ಒಡ್ಡಿ 5 ಲಕ್ಷ ರೂಪಾಯಿಯಿಂದ ಹಿಡಿದು ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ರಾತ್ರೋರಾತ್ರಿ ವಂಚಿಸಿ ಕೈಕೊಟ್ಟಿದೆ. ಹಾವೇರಿ ಮಾದರಿಯಲ್ಲೇ ಇಲ್ಲೂ ನೂರಾರು ಮಹಿಳೆಯರು ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಮುಖ್ಯಾಂಶಗಳು
- ಹಾವೇರಿ ಬೆನ್ನಲ್ಲೇ ತುಮಕೂರಿನಲ್ಲೂ ಮಹಾ ವಂಚನೆ.
- ಸ್ವಯಂ ಉದ್ಯೋಗ ಹೆಸರಲ್ಲಿ ಡೆಪಾಸಿಟ್ ಲೂಟಿ.
- ಜಯನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲು.
ಹಣ ಡಬಲ್ ಆಗುವ ಆಸೆಗೆ ಬಿದ್ದ ಮಹಿಳೆಯರು
ಈ ಕಂಪನಿಯು ಮನೆಯಲ್ಲಿಯೇ ಇರುವ ಗೃಹಿಣಿಯರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ವಂಚನಾ ಜಾಲ ಹೆಣೆದಿತ್ತು. ಕಂಪನಿಯ ನಿಯಮದ ಪ್ರಕಾರ, ಮಹಿಳೆಯರು ಆರಂಭದಲ್ಲಿ ಮುಂಗಡವಾಗಿ (Security Deposit) ಲಕ್ಷ ಲಕ್ಷ ಹಣವನ್ನು ಡೆಪಾಸಿಟ್ ಮಾಡಬೇಕಿತ್ತು. ಈ ಡೆಪಾಸಿಟ್ ಮೊತ್ತಕ್ಕೆ ಅನುಗುಣವಾಗಿ ಕಂಪನಿಯು ಮನೆಯಲ್ಲೇ ಪ್ಯಾಕಿಂಗ್ ಮಾಡಲು ಅಗರಬತ್ತಿ, ಕಸದ ಪೊರಕೆ ಹಾಗೂ ಮೇಣದಬತ್ತಿ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುತ್ತಿತ್ತು. ಮಹಿಳೆಯರು ಇವುಗಳನ್ನು ಪ್ಯಾಕ್ ಮಾಡಿ ಕಂಪನಿಗೆ ವಾಪಸ್ ನೀಡಬೇಕಿತ್ತು. ಪ್ರತಿ ತಿಂಗಳು ಹೂಡಿಕೆ ಮಾಡಿದ ಹಣಕ್ಕೆ ತಕ್ಕಂತೆ ಇಂತಿಷ್ಟು ಸಾವಿರ ರೂಪಾಯಿ ಸಂಬಳ ಹಾಗೂ ಕಂತುಗಳಲ್ಲಿ ಡೆಪಾಸಿಟ್ ಹಣವನ್ನು ವಾಪಸ್ ನೀಡುವುದಾಗಿ ಕಂಪನಿ ನಂಬಿಸಿತ್ತು. ಅಲ್ಲದೆ, ಕಂತುಗಳು ಮುಗಿದ ತಕ್ಷಣ ಪೂರ್ಣ ಡೆಪಾಸಿಟ್ ಹಣ ವಾಪಸ್ ಸಿಗಲಿದೆ, ಇದರಿಂದ ಹೂಡಿಕೆ ಮಾಡಿದ ಹಣ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟಾಗಲಿದೆ (Double) ಎಂದು ನಂಬಿಸಲಾಗಿತ್ತು.
ಏಪ್ರಿಲ್ ವರೆಗೆ ಹಣ ವಸೂಲಿ ಮಾಡಿ ಬಾಗಿಲು ಹಾಕಿದ ಕಂಪನಿ
ಕಳೆದ ಒಂದು ವರ್ಷದಿಂದ ತುಮಕೂರಿನಲ್ಲಿ ಈ ಕಂಪನಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿತ್ತು. ಇತ್ತೀಚಿನ ಏಪ್ರಿಲ್ ತಿಂಗಳವರೆಗೂ ಮಹಿಳೆಯರಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಪಡೆದುಕೊಂಡಿದ್ದ ಕಂಪನಿ, ತದನಂತರ ದಿಢೀರನೆ ತನ್ನ ವಹಿವಾಟನ್ನು ಸ್ಥಗಿತಗೊಳಿಸಿ ಕಚೇರಿಗೆ ಬಾಗಿಲು ಹಾಕಿದೆ. ಮೋಸ ಹೋಗಿರುವುದು ಗೊತ್ತಾಗಿ ಮಹಿಳೆಯರು ಹಲವು ಬಾರಿ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ತೀವ್ರ ಆರ್ಥಿಕ ನಷ್ಟ ಉಂಟಾಗಿದ್ದರೂ, ಮರ್ಯಾದೆಗೆ ಅಂಜಿ ಆರಂಭದಲ್ಲಿ ದೂರು ನೀಡಲು ಮಹಿಳೆಯರು ಮೀನಾಮೇಷ ಎಣಿಸುತ್ತಿದ್ದರು. ಆದರೆ ಹಾವೇರಿ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಧೈರ್ಯ ತಂದಿಕೊಂಡ ಕೆಲವು ಸಂತ್ರಸ್ತರು ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ
ಹಣ ಕಳೆದುಕೊಂಡ ಮಹಿಳೆಯರ ಕಹಾನಿ ಬೆಚ್ಚಿಬೀಳಿಸುವಂತಿದೆ. ಕುಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಹಣ ಹೂಡಿಕೆ ಮಾಡಿದ್ದ ಹಲವು ಗೃಹಿಣಿಯರು, ತಮ್ಮ ಪತಿಗೆ ಗೊತ್ತಾಗದಂತೆ ಮನೆಯ ಅಸಲಿ ಆಸ್ತಿ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಲೋನ್ ಪಡೆದು ಕಂಪನಿಗೆ ತಂದುಕೊಟ್ಟಿದ್ದಾರೆ! ಇನ್ನು ಕೆಲವರು ತಾವಷ್ಟೇ ಅಲ್ಲದೆ ತಮ್ಮ ಆಪ್ತ ಸ್ನೇಹಿತೆಯರು ಹಾಗೂ ಸಂಬಂಧಿಕರಿಂದಲೂ ಲಕ್ಷ ಲಕ್ಷ ರೂಪಾಯಿ ಸಾಲ ಕೊಡಿಸಿ ಹೂಡಿಕೆ ಮಾಡಿಸಿದ್ದರು.
ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ
ಸದ್ಯ ವಂಚನೆಗೊಳಗಾದ ಮಹಿಳೆಯರು ಮುಖ ಮುಚ್ಚಿಕೊಂಡು ಕಚೇರಿಯ ಮುಂದೆ ಅಸಹಾಯಕರಾಗಿ ನಿಂತಿದ್ದಾರೆ. ಸದ್ಯ ಜಯನಗರ ಪೊಲೀಸರು ಈ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ಕಂಪನಿಯ ಹಿನ್ನೆಲೆ ಹಾಗೂ ವಂಚನೆಗೊಳಗಾದ ಮಹಿಳೆಯರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



