ತುಮಕೂರಿಗೆ ಭರಪೂರ ಕೊಡುಗೆಗಳು: ಜಿಲ್ಲೆಯ ಮೂರು ರೈಲ್ವೆ ಕಾಮಗಾರಿಗೆ ಕೇಂದ್ರ ಅಸ್ತು
ವಿ.ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗುತ್ತಿದ್ದಂತೆ ತುಮಕೂರಿಗೆ ಭರಪೂರ ಕೊಡುಗೆಗಳು ಹರಿದು ಬರುತ್ತಿವೆ. ಕಳೆದ ತಿಂಗಳಷ್ಟೇ ಜಿಲ್ಲೆಯ 5 ಮೇಲ್ಸೇತುವೆ ನಿರ್ಮಾಣಕ್ಕೆ ಬರೋಬ್ಬರಿ 350 ಕೋಟಿ ರೂ. ರೇಲ್ವೆ ಸಚಿವಾಲಯ ಅನುಮೋದನೆ ನೀಡಿತ್ತು. ಇದೀಗ ಮತ್ತೆ 60ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಮೂರು ರೈಲ್ವೆ ಕಾಮಗಾರಿಗಳ ನಿರ್ಮಾಣಕ್ಕೆ ಕೇಂದ್ರ ಅಸ್ತು ಎಂದಿದೆ.
ನವದೆಹಲಿ, ಆ.27: ತುಮಕೂರು ಜಿಲ್ಲೆಯ ಮೂರು ರೈಲ್ವೆ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವಾಲಯ ಹಣ ಮಂಜೂರು ಮಾಡಿದೆ. ಈ ಕುರಿತು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V. Somanna) ಅವರು ಮಾಹಿತಿ ನೀಡಿದ್ದು, ‘ತುಮಕೂರಿನ ಕಲ್ಲಿಪಾಳ್ಯ ರಸ್ತೆ ಕೆಳ ಸೇತುವೆಗೆ 13.44 ಕೋಟಿ ರೂ., ಬಂಡಿಹಳ್ಳಿ ರೋಡ್ ಗೇಟ್ ರಸ್ತೆ ಕೆಳ ಸೇತುವೆಗೆ 10.01 ಕೋಟಿ ರೂ., ತುಮಕೂರಿನ ಬೆಂಚಗೆರೆ ಗೇಟ್ ರಸ್ತೆ ಮೇಲ್ಸೇತುವೆಗೆ 36.62 ಕೋಟಿ ರೂ ಸೇರಿ ಒಟ್ಟು 60ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮೂರು ರೈಲ್ವೆ ಕಾಮಗಾರಿಗಳು ನಿರ್ಮಾಣವಾಗಲಿದೆ.
ಕಳೆದ ತಿಂಗಳು ಜಿಲ್ಲೆಯ 5 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದ ರೇಲ್ವೆ ಸಚಿವಾಲಯ
ಇನ್ನು ಕಳೆದ ಜುಲೈ.15 ರಂದು ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ಸ್ಟೇಷನ್ ಮೈದಾಳ ಗೇಟ್, ಬಡ್ಡಿಹಳ್ಳಿ ಗೇಟ್, ಬಟ್ಟವಾಡಿ, ಹಿರಿಯೂರು, ತುಮಕೂರು-ಮೈಸೂರು ಗೇಟ್ ಫ್ಲೈಓವರ್ ಸೇರಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೇಲ್ವೆ ಸಚಿವಾಲಯ ಅನುಮೋದನೆ ನೀಡಿತ್ತು. ಬರೋಬ್ಬರಿ 350 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ. ಈ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದರು. ಇದೀಗ 60 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೆ ಮೂರು ರೈಲ್ವೆ ಕಾಮಗಾರಿಗೆ ಕೇಂದ್ರ ಅಸ್ತು ಎಂದಿದೆ.
ಇದನ್ನೂ ಓದಿ:ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ
ಈ ಹಿಂದೆ ವಿ.ಸೋಮಣ್ಣ ಮಾತನಾಡಿ, ‘ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುತ್ತದೆ. ಆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರು ಕೂಡ ಈ ವಂದೇ ಭಾರತ್ ರೈಲಿನಲ್ಲಿ ಸಂಚರಿಸುವಂತೆ ಟಿಕೆಟ್ ದರ ಪರಿಷ್ಕರಣೆ ಮಾಡುತ್ತೇವೆ. ಈ ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ಮಾಡಿರುವುದಾಗಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Tue, 27 August 24