
ತುಮಕೂರು, ನವೆಂಬರ್ 27: ಉದ್ಯಮದ ಪಾಲುದಾರಿಕೆ ಸಿಗುತ್ತೆಂದು ನಂಬಿ ಸಾಲ ಮಾಡಿ ಒಂದೂವರೆ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ ತುಮಕೂರಿನ (Tumakuru) ಕುಟುಂಬವೊಂದು ಈಗ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದೆ. ಬೆಂಗಳೂರಿನ ಕೆಂಗೇರಿಯ ಪೆಟ್ರೋಲ್ ಬಂಕ್‌ನಲ್ಲಿ ಪಾಲುದಾರಿಕೆಗೆಂದು ತುಮಕೂರು ಮೂಲದ ಪ್ರಭು ಎಂಬವರು ಹಣ ಹೂಡಿಕೆ ಮಾಡಿದ್ದರು. ಆದರೆ ಮಧ್ಯವರ್ತಿಗಳ ಜೊತೆಗೂಡಿ ಹಣ ಮತ್ತು 100 ಗ್ರಾಂ ಚಿನ್ನ ಪಡೆದಿದ್ದ ಬೆಂಗಳೂರಿನ ಕುಟುಂಬ ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ವೀಣಾ ಮತ್ತು ಆಕೆಯ ಮಗ ನಮಿತ್ ಸಿಂಗ್ ಬಂಧಿತರಾಗಿದ್ದು, ಕಿಂಗ್ಪಿನ್ ಯಶವಂತ್ ಸಿಂಗ್ ನಾಪತ್ತೆಯಾಗಿದ್ದಾನೆ. ಪ್ರಕರಣ ಸಂಬಂಧ ಬ್ರೋಕರ್ಗಳಾದ ಉಮಾಪತಿ ಮತ್ತು ರಮೇಶ್ ಎಂಬವರನ್ನೂ ತುಮಕೂರು ನಗರದ ಹೊಸ ಬಡಾವಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ತುಮಕೂರಿನ ನಿವಾಸಿ ಫ್ರಭು ಭೇಟಿಯಾಗಿದ್ದ ಮಧ್ಯವರ್ತಿಗಳು, ಎರಡು ಕೋಟಿಗೆ ಬೆಂಗಳೂರಿನ ಕೆಂಗೇರಿಯ ಖಾಸಗಿ ಪೆಟ್ರೋಲ್ ಬಂಕ್‌ನಲ್ಲಿ ಪಾಲುದಾರಿಕೆ ಸಿಗಲಿದೆ. ಹೂಡಿಕೆ ಮಾಡಿದರೆ ಪ್ರತಿ ತಿಂಗಳ ಲಾಭದ ಶೇ. 30ರಷ್ಟು ಹಣ ಬರುತ್ತದೆ ಎಂದು ಆಮಿಷ ತೋರಿಸಿದ್ದರು. ಇದನ್ನು ನಂಬಿ ಯಶವಂತ್ ಮತ್ತು ವೀಣಾರನ್ನು ಪ್ರಭು ಭೇಟಿಯಾಗಿದ್ದರು. ಈ ವೇಳೆ ಬಂಕ್ನ ಪಾಲುದಾರಿಕೆಯಲ್ಲಿ ಶೇಕಡ 70ರಷ್ಟು ನಮ್ಮದಿದ್ದರೆ ಉಳಿದ ಶೇಕಡಾ 30ನ್ನು ನಿಮಗೆ ನೀಡುತ್ತೇವೆ ಎಂದು ನಂಬಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ‘ಟಿ-ಶರ್ಟ್ ಖರೀದಿಸಿದರೆ ಐಫೋನ್ ಉಚಿತ’: ವಂಚಕರ ಮಾತು ನಂಬಿ 1.6 ಲಕ್ಷ ಕಳೆದುಕೊಂಡ ಮಂಗಳೂರಿನ ಯುವಕ
ಮಗ ಮತ್ತು ಸೊಸೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಹಿನ್ನಲೆ ಹೂಡಿಕೆಯ ಬಗ್ಗೆ ಪ್ರಭು ಅವರು ಕೂಡ ಚಿಂತಿಸಿದ್ದರು. ಅದರಂತೆ ಮೊದಲಿಗೆ 100 ಗ್ರಾಂ ಚಿನ್ನ ನೀಡಿದ್ದ ಅವರು, ಬಳಿಕ ಹಂತ ಹಂತವಾಗಿ ಒಂದುವರೆ ಕೋಟಿ ಹಣವನ್ನು ಬ್ಯಾಂಕ್ ಮುಖಾಂತರ ವರ್ಗಾಯಿಸಿದ್ದರು. ಎಲ್ಲವೂ ಪಕ್ಕ ಎಂಬಂತೆ ದಾಖಲೆ, ಆಡಿಟರ್ ಜೊತೆ ಚರ್ಚೆ ಸೇರಿ ಪೆಟ್ರೋಲ್ ಬಂಕ್ ವಿಸಿಟ್ ಸಹ ನಡೆದಿತ್ತು. ನಂತರ ಯಶವಂತ್ ಹಾಗೂ ವೀಣಾ ದಂಪತಿ ಅಂಗ್ರಿಮೆಂಟ್ ಸಹ ಮಾಡಿಸಿದ್ದರು. ಈ ನಡುವೆ ಈ ಹಿಂದೆ ಅಶೋಕ್ ಎಂಬವರು ನಿಮ್ಮ ರೀತಿ ಬಂಕ್ ಪಾಲುದಾರರಾಗಿದ್ದರು ಎಂದು ವೀಣಾ ದಂಪತಿ ತಿಳಿಸಿದ್ದರು. ವೀಣಾ ದಂಪತಿ ಮಾತು ಕೇಳಿ ಗೊಂದಲಗೊಂಡ ಪ್ರಭು ಅವರು ಅಸಲಿ ಸಂಗತಿ ಪತ್ತೆಗೆ ಪ್ರಯತ್ನಿಸಿದ್ದಾರೆ. ಹೀಗಿರುವಾಗಲೇ ಪ್ರತಿ ತಿಂಗಳು ಲಾಭಾಂಶ ನೀಡೋದಾಗಿದಾಗಿ ಹೇಳಿದ್ದವರು ಅಲ್ಪ ಹಣ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬೆದರಿಸಿದ್ದಾರೆ ಎನ್ನಲಾಗಿದೆ.
ಇವೆಲ್ಲದರ ನಡುವೆಯೇ ಯಶವಂತ್ ಮತ್ತು ವೀಣಾ ದಂಪತಿಯಿಂದ ವಂಚನೆಗೊಳಗಾಗಿರುವ ಬಗ್ಗೆ ಆರ್. ಸಿ. ಜಯರಾಂ, ವಿಜಯಲಕ್ಷ್ಮೀ, ಭಗವಾನ್, ಶಿವಣ್ಣ, ಸಿದ್ದಲಿಂಗಯ್ಯ ಎಂಬವರು ಪೊಲೀಸ್ ದೂರು ನೀಡಿರುವ ಮಾಹಿತಿ ಸಿಕ್ಕಿದೆ. ವೀಣಾ ವಿರುದ್ಧ ಬೆಂಗಳೂರಿನ ಕಾಡುಗೊಂಡನಹಳ್ಳಿ, ಸುಬ್ರಹ್ಮಣ್ಯಪುರ, ಬಸವೇಶ್ವರ ನಗರ, ಸುಬ್ರಮಣ್ಯ ನಗರದಲ್ಲಿ ವಿವಿಧ ಮಾದರಿಯ ವಂಚನೆ ಪ್ರಕರಣ ದಾಖಲಾಗಿರೊದು ಗೊತ್ತಾಗಿದೆ. ಅಲ್ಲದೆ ಮೆಲ್ನೋಟಕ್ಕೆ ಪೆಟ್ರೋಲ್ ಬಂಕ್ಗೆ ನಾಲ್ವರು ಪಾಲುದಾರರಿದ್ದಾರೆ. ಆ ಪೈಕಿ ವೀಣಾ ಕೂಡ ಒಬ್ಬರು ಎಂಬ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:26 am, Fri, 27 November 26