AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾದ ಆನೆ ಕಾರ್ಯಾಚರಣೆ

ಹಾಸನ ಮತ್ತು ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಕಾಡಾನೆ ಕಾರ್ಯಾಚರಣೆ ವಿಚಾರವಾಗಿ ಜಟಾಪಟಿ ಉಂಟಾಗಿದೆ. ಭದ್ರಾ ಅಭಯಾರಣ್ಯದತ್ತ ಓಡಿಸಲಾಗಿದ್ದ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರಿಗೆ ವಾಪಸಾಗಿದೆ. ಶಾಸಕಿ ನಯನಾ ಮೋಟಮ್ಮ ವಿರೋಧ ಹಾಗೂ ರಾಜೀನಾಮೆ ಎಚ್ಚರಿಕೆಯ ಬೆನ್ನಲ್ಲೇ ಕಾರ್ಯಾಚರಣೆಯೂ ಸ್ಥಗಿತಗೊಂಡಿದ್ದು, ಹಾಸನದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.

ಎರಡು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾದ ಆನೆ ಕಾರ್ಯಾಚರಣೆ
ಆನೆ ಕಾರ್ಯಾಚರಣೆಗೆ ಎರಡು ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಜಟಾಪಟಿ!
ಮಂಜುನಾಥ ಕೆಬಿ
| Edited By: |

Updated on: Nov 27, 2026 | 11:00 AM

Share

ಮುಖ್ಯಾಂಶಗಳು

  • ಭದ್ರಾ ಅಭಯಾರಣ್ಯದತ್ತ ತೆರಳಿದ್ದ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರಿಗೆ ವಾಪಸ್.
  • ನಯನಾ ಮೋಟಮ್ಮ ವಿರೋಧ, ರಾಜೀನಾಮೆ ಎಚ್ಚರಿಕೆಯಿಂದ ಆನೆ ಕಾರ್ಯಾಚರಣೆಗೆ ಹಿನ್ನಡೆ.
  • ಹಾಸನ-ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಕಾರ್ಯಾಚರಣೆ ವಿಚಾರಕ್ಕೆ ಜಟಾಪಟಿ.

ಹಾಸನ, ನವೆಂಬರ್ 27: ಕಾಡಾನೆಗಳ ಹಾವಳಿ ನಿಯಂತ್ರಿಸಲು ಆರಂಭಿಸಿದ್ದ ಕಾರ್ಯಾಚರಣೆ ಇದೀಗ ಎರಡು ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಚಿಕ್ಕಮಗಳೂರು ಭಾಗದ ಶಾಸಕರು ಮತ್ತು ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಂತಿದ್ದು, ಭದ್ರಾ ಅಭಯಾರಣ್ಯದತ್ತ ತೆರಳಿದ್ದ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರು ತಾಲ್ಲೂಕಿಗೆ ವಾಪಸಾಗಿದೆ. ಇದರಿಂದ ಹಾಸನ ಜಿಲ್ಲೆಯ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆಮಾಡಿದೆ.

ಭದ್ರಾ ಅಭಯಾರಣ್ಯ ಸೇರಬೇಕಿದ್ದ ಆನೆಗಳ ಹಿಂಡು ಮತ್ತೆ ಬೇಲೂರಿಗೆ!

ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ನವೆಂಬರ್ 14 ಮತ್ತು 16ರಂದು ಮೂರು ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ, ಬಿಕ್ಕೋಡು, ಅರಹಳ್ಳಿ ಸೇರಿದಂತೆ ಕಾಫಿ ತೋಟಗಳ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಒಟ್ಟುಗೂಡಿಸಿ ಭದ್ರಾ ಅಭಯಾರಣ್ಯದತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸುಮಾರು 38 ಕಾಡಾನೆಗಳ ಹಿಂಡನ್ನು ಚಿಕ್ಕಮಗಳೂರು ಜಿಲ್ಲೆಯ ತತ್ಕೊಳ ಮೀಸಲು ಅರಣ್ಯದವರೆಗೂ ಕರೆದೊಯ್ಯಲಾಗಿತ್ತು.

ಆದರೆ, ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ರೈತರು ಆನೆಗಳನ್ನು ತಮ್ಮ ಭಾಗಕ್ಕೆ ಸ್ಥಳಾಂತರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನವೆಂಬರ್ 21ರಿಂದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್ ಮತ್ತು ಡಿಎಫ್‌ಒ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಆನೆಗಳನ್ನು ಮತ್ತೆ ಬೇಲೂರು ಭಾಗದತ್ತ ಓಡಿಸಿದ್ದಾರೆ.

ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದರೂ, ಅದನ್ನು ಲೆಕ್ಕಿಸದೆ ಆನೆಗಳನ್ನು ಬೇಲೂರು ಭಾಗಕ್ಕೆ ಹಿಮ್ಮೆಟ್ಟಿಸಲಾಗಿದೆ. ಸದ್ಯ ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ, ಮಲ್ಲಾಪುರ, ಕಾನಳ್ಳಿ ಹಾಗೂ ಅರಣ್ಯದ ಸುತ್ತಮುತ್ತ 38 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ.

ಆನೆ ಕಾರ್ಯಾಚರಣೆಗೆ ಎರಡು ಜಿಲ್ಲೆಗಳ ಜಟಾಪಟಿ

ಹಾಸನದಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಇದೀಗ ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಮುಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಅರಣ್ಯ ಇಲಾಖೆ ಏಕಪಕ್ಷೀಯವಾಗಿ ಕಾರ್ಯಾಚರಣೆ ಆರಂಭಿಸಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾರ್ಯಾಚರಣೆ ನಿಲ್ಲಿಸಿ ಆನೆಗಳನ್ನು ಹಿಂದಕ್ಕೆ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ನವೆಂಬರ್ 23ರಂದು ವಿಧಾನಸಭೆ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದರು.

ಒಂದು ಜಿಲ್ಲೆಯ ಜನರ ಆತಂಕಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮತ್ತೊಂದು ಜಿಲ್ಲೆಯ ಜನರ ವಿರೋಧಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಇಡೀ ಕಾರ್ಯಾಚರಣೆಯೇ ಹಳ್ಳ ಹಿಡಿದಿದೆ. ಪರಿಣಾಮ, ಕಾಡಿಗೆ ಮರಳಬೇಕಿದ್ದ 38 ಆನೆಗಳ ಹಿಂಡು ಮತ್ತೆ ಬೇಲೂರು ಭಾಗಕ್ಕೆ ವಾಪಸಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಹಲವು ದಿನಗಳ ಶ್ರಮ ವ್ಯರ್ಥವಾಗಿದೆ. ಈಗ ಎರಡು ಜಿಲ್ಲೆಗಳ ಅಧಿಕಾರಿಗಳು ಒಮ್ಮತಕ್ಕೆ ಬಂದು ಆನೆಗಳ ಸ್ಥಳಾಂತರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರಾ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More