‘2013ರ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ’: ಜಿ. ಪರಮೇಶ್ವರ್

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತುಮಕೂರಿನಲ್ಲಿ ತಮಗೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿರುವ ಕುರಿತು ಅತ್ಯಂತ ಭಾವುಕರಾಗಿ ತಮ್ಮ ಮನದ ನೋವನ್ನು ತೋಡಿಕೊಂಡಿದ್ದಾರೆ. 2013ರಲ್ಲಿ ತಾವು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. 2018ರ ಮೈತ್ರಿ ಸರ್ಕಾರ ಹಾಗೂ ಪ್ರಸ್ತುತ 2026ರ ರಾಜಕೀಯ ವಿದ್ಯಮಾನಗಳಲ್ಲೂ ತಮಗೆ ಸಿಎಂ ಹುದ್ದೆಯ ಅವಕಾಶ ಸಿಗದೆ ವಂಚಿತರಾದ ಕುರಿತು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

2013ರ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ: ಜಿ. ಪರಮೇಶ್ವರ್
ಜಿ. ಪರಮೇಶ್ವರ್
Edited By:

Updated on: Jun 08, 2026 | 3:20 PM

ತುಮಕೂರು, ಜೂನ್ 08: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾವುಕರಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಸ್ಥಾನವು ಮೂರು ಬಾರಿ ಕೈತಪ್ಪಿದ ಕುರಿತು ನೋವು ತೋಡಿಕೊಂಡಿದ್ದಾರೆ. ಇದು ತಮ್ಮ ಬಹುಕಾಲದ ಕನಸಾಗಿದ್ದು, ರಾಜಕೀಯ ಸನ್ನಿವೇಶಗಳಿಂದಾಗಿ ಕೈಗೂಡಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

  • ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಬಗ್ಗೆ ಪರಮೇಶ್ವರ್ ಭಾವುಕರಾಗಿದ್ದಾರೆ.
  • ನಾನು ಗೆದ್ದಿದ್ದರೆ 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ ಎಂದಿದ್ದಾರೆ.
  • 2026 ರಲ್ಲೂ ಸಿಎಂ ಹುದ್ದೆಯ ನಿರೀಕ್ಷೆ ಇತ್ತು ಎಂದು ನೋವು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ

ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, 2013ರ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು, 2018ರಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದರೂ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಅವತ್ತು ನನ್ನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು, ಆದರೆ ಆ ಅವಕಾಶ ಸಿಗಲಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ.

ಈ ಬಾರಿ ಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಪರಮೇಶ್ವರ್

ಇನ್ನು 2026ರ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲೂ ತಮಗೆ ಸಿಎಂ ಹುದ್ದೆಯ ನಿರೀಕ್ಷೆ ಇತ್ತು, ಆದರೆ ವಿವಿಧ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲಎಂದು ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ ಜತೆಗಿನ ಚರ್ಚೆಯನ್ನು ಸ್ಮರಿಸಿದ ಅವರು, ನನಗೆ ಸಂಸ್ಥೆಯ ಶ್ರೇಯೋಭಿವೃದ್ಧಿ ಮುಖ್ಯ. ಕೊಡಲು ಸಾಧ್ಯವಿಲ್ಲ ಅಂದರೆ ನೇರವಾಗಿ ಹೇಳಿ, ನನಗೆ ಬಹಳ ದೊಡ್ಡ ಕೆಲಸಗಳಿವೆ, ನಾನು ವಾಪಸ್ ಹೋಗ್ತೀನಿ ಎಂದು ಹೇಳಿದ್ದೆ. ಕೊನೆಗೆ ಪಕ್ಷ ನನಗೆ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನೀಡಿದೆಎಂದರು.

ಇದನ್ನೂ ಓದಿ ಶಿಸ್ತಿನ ಸಿಪಾಯಿಗಳಿಗೆ ಒಲಿದ ಅದೃಷ್ಟ: ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯಗೆ ಪರಿಷತ್ ಟಿಕೆಟ್ ನೀಡಲು ಕಾರಣಗಳೇನು?

ಸದ್ಯ ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವುದಾಗಿ ಹೇಳಿದ ಪರಮೇಶ್ವರ್, ಜನರು ನಮ್ಮನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಆದ್ದರಿಂದ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರದಲ್ಲಿ ಯಾವುದೇ ಕುಂದುಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Mon, 8 June 26

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us