ಉದ್ಘಾಟನೆಯಾಗಿ 10 ತಿಂಗಳಾದರೂ ಆರಂಭವಾಗದ ತುಮಕೂರು ಕ್ಯಾನ್ಸರ್ ಆಸ್ಪತ್ರೆ: ಬಡ ರೋಗಿಗಳಿಗೆ ತಪ್ಪದ ಬೆಂಗಳೂರು ಅಲೆದಾಟ!

110 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾಗಿ 10 ತಿಂಗಳು ಕಳೆದರೂ ತುಮಕೂರಿನ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆ ಇಂದಿಗೂ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಜರ್ಮನಿಯಿಂದ ಯಂತ್ರೋಪಕರಣಗಳು ಬರದಿರುವುದು ಮತ್ತು ಆಸ್ಪತ್ರೆ ಕೊಠಡಿಗಳು ಹಾಳಾಗುತ್ತಿರುವ ಕುರಿತಾದ ಎಕ್ಸ್‌ಕ್ಲೂಸಿವ್ ವರದಿ ಇಲ್ಲಿದೆ. ರೋಗಿಗಳು ಚಿಕಿತ್ಸೆಗೆ ಅಲೆಯುವಂತಾಗಿದೆ.

ಉದ್ಘಾಟನೆಯಾಗಿ 10 ತಿಂಗಳಾದರೂ ಆರಂಭವಾಗದ ತುಮಕೂರು ಕ್ಯಾನ್ಸರ್ ಆಸ್ಪತ್ರೆ: ಬಡ ರೋಗಿಗಳಿಗೆ ತಪ್ಪದ ಬೆಂಗಳೂರು ಅಲೆದಾಟ!
ಉದ್ಘಾಟನೆಯಾಗಿ 10 ತಿಂಗಳಾದರೂ ಆರಂಭವಾಗದ ತುಮಕೂರು ಕ್ಯಾನ್ಸರ್ ಆಸ್ಪತ್ರೆ
Edited By:

Updated on: Aug 22, 2026 | 3:00 PM

ಮುಖ್ಯಾಂಶಗಳು

  • ಉದ್ಘಾಟನೆಯಾಗಿ ಹತ್ತು ತಿಂಗಳಾದರೂ ತುಮಕೂರು ಕ್ಯಾನ್ಸರ್ ಆಸ್ಪತ್ರೆ ಕಾರ್ಯಾರಂಭ ಮಾಡಿಲ್ಲ.
  • ಜರ್ಮನಿಯಿಂದ ಪ್ರಮುಖ ಚಿಕಿತ್ಸಾ ಯಂತ್ರೋಪಕರಣಗಳು ಬರಬೇಕಿದ್ದು ಅಧಿಕಾರಿಗಳು ಕಾಯುತ್ತಿದ್ದಾರೆ.
  • ಆಸ್ಪತ್ರೆ ಆರಂಭವಾಗದೆ ಬಡ ರೋಗಿಗಳು ಬೆಂಗಳೂರಿನ ಕಿದ್ವಾಯಿಗೆ ಅಲೆಯುವುದು ತಪ್ಪಿಲ್ಲ.

ಬೆಂಗಳೂರು, ಆಗಸ್ಟ್ 22: ಲೋಕಾರ್ಪಣೆಗೊಂಡು ಬರೋಬ್ಬರಿ ಹತ್ತು ತಿಂಗಳು ಕಳೆದರೂ ತುಮಕೂರಿನ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆ ಇಂದಿಗೂ ಸಾರ್ವಜನಿಕರ ಸೇವೆಗೆ ಲಭ್ಯವಾಗದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 110 ಕೋಟಿ ರೂ. ಬೃಹತ್ ವೆಚ್ಚದಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ಈ ಅತ್ಯಾಧುನಿಕ ಆಸ್ಪತ್ರೆ ತೆರೆದಿದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಬಡ ರೋಗಿಗಳು ದಿನ ದೂಡುವಂತಾಗಿದೆ.

ಆಸರೆಯಾಗಬೇಕಿದ್ದ ಆಸ್ಪತ್ರೆ

ತುಮಕೂರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕರ್ನಾಟಕ ಸರ್ಕಾರದಿಂದ ಈ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 2025ರ ನವೆಂಬರ್ 7ರಂದು ಈ ಆಸ್ಪತ್ರೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿತ್ತು. ತುಮಕೂರು, ಚಿತ್ರದುರ್ಗ, ಶಿರಾ, ಮಧುಗಿರಿ ಸೇರಿದಂತೆ ಸುತ್ತಮುತ್ತಲಿನ ಭಾಗದ ರೋಗಿಗಳಿಗೆ ಸ್ಥಳೀಯವಾಗಿಯೇ ಉನ್ನತ ಮಟ್ಟದ ಚಿಕಿತ್ಸೆ ಸಿಗಲಿ ಮತ್ತು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ (KMIO) ಅಲೆಯುವುದು ತಪ್ಪಲಿ ಎನ್ನುವುದು ಇದರ ಮುಖ್ಯ ಉದ್ದೇಶವಾಗಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳ ಪ್ರಯಾಣದ ಭಾರ ಕಡಿಮೆಯಾಗಿಲ್ಲ.

ಜರ್ಮನಿ ಯಂತ್ರಗಳಿಗೆ ಕಾಯುತ್ತಿರುವ ಅಧಿಕಾರಿಗಳು

ಆಸ್ಪತ್ರೆ ಕಾರ್ಯಾರಂಭ ಮಾಡದಿರಲು ಮುಖ್ಯ ಕಾರಣ ಚಿಕಿತ್ಸೆಗೆ ಅಗತ್ಯವಿರುವ ಪ್ರಮುಖ ಯಂತ್ರೋಪಕರಣಗಳ ಕೊರತೆ. ಚಿಕಿತ್ಸೆಗೆ ಬೇಕಾದ ಅತ್ಯಾಧುನಿಕ ಯಂತ್ರಗಳು ಜರ್ಮನಿಯಿಂದ ಬರಬೇಕಿದ್ದು, ಅದಕ್ಕಾಗಿ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಸೂಕ್ತ ಯಂತ್ರೋಪಕರಣಗಳು ತಲುಪದ ಹೊರತು ಪೂರ್ಣಪ್ರಮಾಣದಲ್ಲಿ ಆಸ್ಪತ್ರೆ ಆರಂಭಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಸಬೂಬು.

ಬೀಡಿ ತುಂಡು, ಮದ್ಯದ ಪ್ಯಾಕೇಟ್‌ಗಳ ತಾಣ!

ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಆಸ್ಪತ್ರೆಯ ಕೋಣೆಗಳು ಈಗ ನಿರ್ವಹಣೆಯಿಲ್ಲದೆ ಹಾಳಾಗುತ್ತಿವೆ. ಆಸ್ಪತ್ರೆಯ ಆವರಣ ಹಾಗೂ ಕೊಠಡಿಗಳಲ್ಲಿ ಶುಚಿತ್ವ ಸಂಪೂರ್ಣವಾಗಿ ಮಾಯವಾಗಿದ್ದು, ಖಾಲಿ ಮದ್ಯದ ಪ್ಯಾಕೇಟ್‌ಗಳು ಹಾಗೂ ಬೀಡಿ ತುಂಡುಗಳು ಬಿದ್ದಿರುವುದು ಕಣ್ಣಿಗೆ ಬೀಳುತ್ತಿದೆ. ರೋಗಿಗಳಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆ ಆವರಣ ಕಿಡಿಗೇಡಿಗಳ ಅಡ್ಡಾಯಾಗುತ್ತಿರುವುದು ದುರಂತ. ಬಡ ರೋಗಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಸ್ಪಂದಿಸಿ ಆಸ್ಪತ್ರೆಯನ್ನು ಕಾರ್ಯಾರಂಭ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sat, 22 August 26

Loading...
Unable to load recommendations.
Follow Us