
ತುಮಕೂರು, ನವೆಂಬರ್ 21: ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿ, ಮನೆಯಲ್ಲಿದ್ದ ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕದ್ದಿದ್ದ ಮಹಿಳೆಯ ಕೃತ್ಯ ತುಮಕೂರಿನಲ್ಲಿ ಬಯಲಾಗಿದೆ. ಕದ್ದ ಚಿನ್ನಾಭರಣ ಮಾರಾಟ ಮಾಡಿ ಕಾರು, ಬೈಕ್, ಆಟೋ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದ್ದ ಆರೋಪಿತೆ, ಕಳ್ಳತನ ಬಯಲಾಗುವ ಭೀತಿಯಿಂದ ವೈದ್ಯರ ಕುಟುಂಬದ ಇಬ್ಬರನ್ನು ಕೊಲೆ ಮಾಡಿ, ಅದನ್ನು ಕಳ್ಳರ ಕೃತ್ಯ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಯನಗರ ನಿವಾಸಿಗಳಾದ ವೈದ್ಯ ದಂಪತಿ ಯಶವಂತ್ ಮತ್ತು ನಳಿನಿ ಅವರ ಮನೆಯಲ್ಲಿ ಸ್ನೇಹಾ ಎಂಬಾಕೆ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಯಿದೆ ಎಂದು ಬಂದಿದ್ದ ಸ್ನೇಹಾಗೆ ವೈದ್ಯ ದಂಪತಿ ಆಶ್ರಯ ನೀಡಿದ್ದರು. ಆಗ ಗರ್ಭಿಣಿಯಾಗಿದ್ದ ಆಕೆಗೆ ಹೆರಿಗೆ ಮಾಡಿಸಿ, ಮಗುವಿನೊಂದಿಗೆ ತಮ್ಮ ಮನೆಯಲ್ಲೇ ಉಳಿಯಲು ಅವಕಾಶ ಕಲ್ಪಿಸಿದ್ದರು.
ಸ್ನೇಹಾಳೊಂದಿಗೆ ಬಂದಿದ್ದ ಆಕೆಯ ಅತ್ತೆ, ದೊಡ್ಡಮ್ಮ ಮತ್ತು ಪತಿ ರಾಕೇಶ್ಗೂ ವೈದ್ಯ ದಂಪತಿ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಸ್ನೇಹಾಳಿಗೆ ಮನೆಯ ಕೆಲಸ ಹಾಗೂ ದೊಡ್ಡಮ್ಮನಿಗೆ ಆಸ್ಪತ್ರೆಯಲ್ಲಿ ಕೆಲಸ ನೀಡಿದ್ದರು. ಇಬ್ಬರಿಗೂ ಸಂಬಳದ ಜೊತೆಗೆ ಊಟ ಮತ್ತು ಮನೆಯಲ್ಲಿದ್ದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು. ಹೀಗೆ ವೈದ್ಯ ಕುಟುಂಬದ ವಿಶ್ವಾಸ ಗಳಿಸಿದ್ದ ಸ್ನೇಹಾ, ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು.
ವೈದ್ಯ ದಂಪತಿಯ ಮನೆಯ ವಿವಿಧ ಕೊಠಡಿಗಳಲ್ಲಿದ್ದ ಲಾಕರ್ಗಳ ಕೀಗಳನ್ನು ಕದ್ದು, ಅವುಗಳಲ್ಲಿದ್ದ ಚಿನ್ನಾಭರಣಗಳನ್ನು ಒಂದೊಂದಾಗಿ ಕಳವು ಮಾಡುತ್ತಿದ್ದಳು. ಕಳೆದ ಆರೇಳು ತಿಂಗಳ ಅವಧಿಯಲ್ಲಿ ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಬೆಳ್ಳಿ ಆಭರಣಗಳನ್ನೂ ಬಿಡದೆ ಕದ್ದಿದ್ದಳು. ಪೂರ್ವಜರಿಂದ ಬಂದಿದ್ದ ಆಭರಣಗಳು, ಮದುವೆ ಸಂದರ್ಭದಲ್ಲಿ ಖರೀದಿಸಿದ್ದ ಚಿನ್ನ ಹಾಗೂ ಪತಿ ಉಡುಗೊರೆಯಾಗಿ ನೀಡಿದ್ದ ಆಭರಣಗಳೂ ಕಳ್ಳತನವಾಗಿದ್ದವು.
ವೈದ್ಯ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರು. ಬಳಿಕ ಸ್ವಂತ ಆಸ್ಪತ್ರೆ ನಿರ್ಮಿಸಿದ್ದರು. ಸುಮಾರು ಎರಡು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೂ ಕೆಲ ದಿನಗಳ ಮೊದಲು ವೈದ್ಯ ದಂಪತಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಲಾಕರ್ಗಳನ್ನು ತೆರೆಯಲು ಮುಂದಾಗಿದ್ದರು. ಆದರೆ ಲಾಕರ್ ಕೀಗಳು ಸಿಗದ ಹಿನ್ನೆಲೆಯಲ್ಲಿ ಕೀ ತಯಾರಿಸುವ ವ್ಯಕ್ತಿಯನ್ನು ಕರೆಸಿ ಲಾಕರ್ಗಳನ್ನು ತೆರೆಸಿದ್ದರು. ಈ ವೇಳೆ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.
ಮನೆಯಲ್ಲಿದ್ದ ಆಭರಣಗಳನ್ನು ಯಾರೋ ಕದ್ದಿರಬಹುದು ಎಂದು ಶಂಕಿಸಿದ ವೈದ್ಯ ದಂಪತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಸ್ನೇಹಾಳ ಕೃತ್ಯ ಬಯಲಾಗಿದೆ. ಕದ್ದ ಆಭರಣಗಳನ್ನು ಸೌಮ್ಯ ಎಂಬಾಕೆಯ ಮೂಲಕ ಮಾರಾಟ ಮಾಡಲಾಗಿತ್ತು. ಸದ್ಯ ಸ್ನೇಹಾ ಮತ್ತು ಸೌಮ್ಯಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ವೈದ್ಯ ದಂಪತಿ ಹೇಳಿರುವ ಮತ್ತೊಂದು ವಿಚಾರ ಪೊಲೀಸರ ತನಿಖೆಯ ಮಹತ್ವವನ್ನು ಹೆಚ್ಚಿಸಿದೆ. ಕಳ್ಳತನದ ವಿಚಾರ ಮುಂದೊಂದು ದಿನ ಬಯಲಾಗಬಹುದು ಎಂಬ ಆತಂಕದಲ್ಲಿ ಸ್ನೇಹಾ ಮತ್ತೊಂದು ಸಂಚು ರೂಪಿಸಿದ್ದಳು. ವೈದ್ಯರ ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆ ಮಾಡಿ, ಮನೆಗೆ ಬಂದ ಅಪರಿಚಿತ ಕಳ್ಳರೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಂಬಿಸುವ ಯೋಜನೆ ರೂಪಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಸಂಚು ಕಾರ್ಯರೂಪಕ್ಕೆ ಬರುವ ಮೊದಲೇ ಕಳ್ಳತನದ ರಹಸ್ಯ ಬಯಲಾಗಿದೆ ಎಂದು ವೈದ್ಯ ದಂಪತಿ ತಿಳಿಸಿದ್ದಾರೆ.
ಸ್ನೇಹಾಳಿಂದ ಕಳ್ಳತನಕ್ಕೆ ಬಳಸಿದ್ದ ಅಥವಾ ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ ಒಂದು ಕಾರು, ಎರಡು ಬೈಕ್ಗಳು, ಒಂದು ಆಟೋ, ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಹಾಗೂ 220 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಕೆಲಸವನ್ನೂ ಒದಗಿಸಿದ್ದ ಮಹಿಳೆ ಇಂತಹ ಕೃತ್ಯ ಎಸಗಿರುವುದು ವೈದ್ಯ ದಂಪತಿಗೆ ಆಘಾತ ಉಂಟುಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ