ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ತುಮಕೂರಿನಲ್ಲಿ ಕೋತಿಯ ಕಿತಾಪತಿಯಿಂದ ಹೆಜ್ಜೇನು ದಾಳಿ ನಡೆದು ಕಾರು ಶೋರೂಂ ಮೇಲ್ವಿಚಾರಕ ದಾರುಣವಾಗಿ ಸಾವನ್ನಪ್ಪಿದ್ದಾರೆ. ಜೊತೆಗೆ ಈ ದುರ್ಘಟನೆಯಲ್ಲಿ ನಾಲ್ಕೈದು ಜನ ಅಸ್ವಸ್ಥರಾಗಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದ ಇವರ ಮೇಲೆ 50ಕ್ಕೂ ಹೆಚ್ಚು ಜೇನುನೊಣಗಳು ದಾಳಿ ಮಾಡಿದ್ದವು. ಈ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!
ಮೃತ ವ್ಯಕ್ತಿ
Image Credit source: Tv9 Kannada
Edited By:

Updated on: Mar 20, 2026 | 3:47 PM

ತುಮಕೂರು/ ರಾಯಚೂರು, ಮಾರ್ಚ್​​ 20: ಕೋತಿಯೊಂದು ಮಾಡಿದ ಕಿತಾಪತಿಗೆ ಓರ್ವ ಮೃತಪಟ್ಟಿದ್ದು ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್(65) ಘಟನೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದು, ಕೆಲಸ ಮುಗಿಸಿ ನಿನ್ನೆ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಹಲವರ ಜೊತೆ ಇವರ ಮೇಲೂ ದಾಳಿ ನಡೆಸಿತ್ತು.

ಬೈಕ್​​ನಲ್ಲಿ ಬರುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಲು ಆರಂಭಿಸಿದ ಕಾರಣ ಅವುಗಳಿಂದ ತಪ್ಪಿಸಿಕೊಳ್ಳಲು ವಿಜಯ್ ಪ್ರಕಾಶ್ ಹರಸಾಹಸ ಪಟ್ಟಿದ್ದರು. ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಐವತ್ತಕ್ಕೂ ಅಧಿಕ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆಯ ಸಾವಿಗೆ ಕಂಗಾಲಾಗಿರುವ ಮಗಳು ಕಣ್ಣೀರಿಟ್ಟಿದ್ದಾರೆ. ನಮ್ಮ ಅಪ್ಪನಿಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬಾರದಿರಲಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​ ವೇಳೆ ಹೈಡ್ರಾಮಾ; ಚುನಾವಣಾ ಅಧಿಕಾರಿಯಿಂದಲೇ ಕಳ್ಳ ಮತದಾನ?

ಮನೆ ಮೇಲ್ಚಾವಣಿ ಕುಸಿದು ಮಹಿಳೆ ಸಾವು

ಮಳೆಗೆ ಮನೆ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ 14ನೇ ವಾರ್ಡ್​​ನಲ್ಲಿ ಮಹಿಳೆಯೋರ್ವರು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಈಶಮ್ಮ(60) ಮೃತಳಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಈಶಮ್ಮ ಮಸ್ಕಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:46 pm, Fri, 20 March 26

Follow Us