ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ತುಮಕೂರನ್ನು ಬೆಂಗಳೂರು ಉತ್ತರಕ್ಕೆ ಸೇರ್ಪಡೆಗೊಳಿಸುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪ್ರಸ್ತಾಪ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿಗಾಗಿ ದೆಹಲಿ ಎನ್‌ಸಿಆರ್ ಮಾದರಿ ಪರಿಕಲ್ಪನೆ ನೀಡಲಾಗಿದ್ದರೂ, ಜಿಲ್ಲೆಯ ಅಸ್ತಿತ್ವ ಮತ್ತು ಗುರುತಿಗೆ ಧಕ್ಕೆ ಬರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿದೆ. ಈ ವಿಚಾರವನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸಿದ್ದು, ತುಮಕೂರನ್ನು ತುಮಕೂರಿನಂತೆಯೇ ಅಭಿವೃದ್ಧಿಪಡಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?
ತುಮಕೂರು
Image Credit source: tv9 kannada
Edited By:

Updated on: May 20, 2026 | 8:25 PM

ತುಮಕೂರು, ಮೇ 20: ಜಿಲ್ಲೆಯ ಹೆಸರು ಬದಲಾಗುತ್ತದೆಯೇ, ಬೆಂಗಳೂರು ಉತ್ತರಕ್ಕೆ ಸೇರ್ಪಡೆಗೊಂಡು ಅದರ ಅಸ್ತಿತ್ವ ಕಣ್ಮರೆಯಾಗುತ್ತದೆಯೇ ಎಂಬ ಚರ್ಚೆ ಇದೀಗ ಜಿಲ್ಲೆಯಲ್ಲಿ ಜೋರಾಗಿದೆ. ತುಮಕೂರು (tumakuru) ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G Parameshwara) , ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ತುಮಕೂರು ಬೆಂಗಳೂರಿಗೆ ಸಮೀಪವಿದ್ದು, ಅಭಿವೃದ್ಧಿಗಾಗಿ ದೆಹಲಿ ಎನ್‌ಸಿಆರ್ ಮಾದರಿ ಕಾನ್ಸೆಪ್ಟ್ ಅಗತ್ಯ ಎಂದು ಅವರು ಹೇಳಿದರು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್​ ಸಾಧನಾ ಸಮಾವೇಶದ ವೇದಿಕೆಯಲ್ಲಿ ಸೃಷ್ಟಿಯಾಯ್ತು ಹೊಸ ಚರ್ಚೆ!
  • ಅಭಿವೃದ್ಧಿ ಕಾನ್ಸೆಪ್ಟ್ ಬೆನ್ನಲ್ಲೇ ಎದ್ದಿತು ವಿರೋಧದ ಬಿರುಗಾಳಿ
  • ಗೃಹ ಸಚಿವರ ಪ್ರಸ್ತಾಪಕ್ಕೆ ಆರ್ ಅಶೋಕ್ ವ್ಯಂಗ್ಯ

ತುಮಕೂರು ಬೆಂಗಳೂರಿಗೆ ಸಮೀಪವಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಹೀಗಾಗಿ ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಗೃಹ ಸಚಿವ ಹಾಗೂ ತುಮಕೂರು ಉಸ್ತುವಾರಿ ಸಚಿವ ಜಿ. ಪರಮೇಶ್ವರ್​​ ಒತ್ತಾಯಿಸಿದ್ದಾರೆ. ಇದು ಇದೀಗ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಯಾವುದೇ ಕಾರಣಕ್ಕೂ ತುಮಕೂರು ಹೆಸರು ಬದಲಾಯಿಸುವುದಿಲ್ಲ: ಜಿ. ಪರಮೇಶ್ವರ್

ಅಸಲಿಗೆ ಗೃಹ ಸಚಿವರು ತುಮಕೂರನ್ನು ಬೆಂಗಳೂರು ಉತ್ತರ ಮಾಡುವ ಮಾತು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2025ರ ಜೂನ್​​ನಲ್ಲಿ ಸಹ ಪ್ರಸ್ತಾಪಿಸಿದ್ದರು. ಆ ವೇಳೆ ತುಮಕೂರು ಜಿಲ್ಲೆಯ ಹೆಸರೇ ಬೆಂಗಳೂರು ಉತ್ತರ ಎಂದು ಮರುನಾಮಕರಣ ಆಗಲಿದೆ ಎನ್ನುವ ಮಾತು ಆರಂಭವಾಗಿತ್ತು. ಇದಕ್ಕೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟೀಕರಣ ನೀಡುವ ಮೂಲಕ ಜಿ. ಪರಮೇಶ್ವರ್, ಗೊಂದಲಕ್ಕೆ ತೆರೆ ಎಳೆದಿದ್ದರು. ಆದರೆ ಇದೀಗ ಮತ್ತೆ ಬೆಂಗಳೂರು ಉತ್ತರ ವಿಚಾರ ಪ್ರಸ್ತಾಪಿಸಿದ್ದು, ತುಮಕೂರು ಅಭಿವೃದ್ಧಿಗಾಗಿ ದೆಹಲಿಯ ಎನ್​ಸಿಆರ್ ಮಾದರಿ ಬೆಂಗಳೂರಿಗೆ ಸೇರ್ಪಡೆ ಮಾಡುವ ಪರಿಕಲ್ಪನೆ ಇದಾಗಿದ್ದು, ಯಾವುದೇ ಕಾರಣಕ್ಕೂ ತುಮಕೂರು ಹೆಸರು ಬದಲಾಯಿಸುವುದಿಲ್ಲ ಎಂದಿದ್ದಾರೆ.

ಇಡೀ ಕರ್ನಾಟಕಕ್ಕೆ ನೀವು ಬೆಂಗಳೂರು ಎಂದು ಹೆಸರಿಟ್ಟು ಬಿಡಿ: ಆರ್​​ ಅಶೋಕ್

ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡುವ ಈ ವಿಚಾರಕ್ಕೆ ಬಿಜೆಪಿ ಸಹ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯ ವಿಪಕ್ಷ ನಾಯಕ ಆರ್​​ ಅಶೋಕ್ ಪ್ರತಿಕ್ರಿಯಿಸಿದ್ದು, ಬೆಂಗಳೂರು ಹೆಸರು ಸೇರಿಸಿಕೊಳ್ಳುವುದು ಈಗ ಸ್ಪರ್ಧೆಯಾಗಿ ಬಿಟ್ಟಿದೆ. ಇಡೀ ಕರ್ನಾಟಕಕ್ಕೆ ನೀವು ಬೆಂಗಳೂರು ಎಂದು ಹೆಸರಿಟ್ಟು ಬಿಡಿ. ಬೆಂಗಳೂರು ಹೆಸರನ್ನು ಬೇರೆ ಕಡೆ ಹಂಚಿದರೆ ಬೆಂಗಳೂರು ಜನ ನಿಮಗೆ ಶಾಪ ಹಾಕುತ್ತಾರೆ. ಅಷ್ಟೇ ಅಲ್ಲ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸೋತು ಹೋಗುತ್ತೀರಾ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರಿಗೆ ಬೆಂಗಳೂರು ಉತ್ತರ ಅಂತ ಮರುನಾಮಕರಣಕ್ಕೆ ಭಾರಿ ವಿರೋಧ

ಇನ್ನು ತುಮಕೂರನ್ನು ಬೆಂಗಳೂರು ಉತ್ತರವಾಗಿ ಸೇರ್ಪಡೆ ಮಾಡುವ ವಿಚಾರದಲ್ಲಿ ತುಮಕೂರು ಜನರ ವಿರೋಧವಿದ್ದು, ಅಭಿವೃದ್ಧಿ ನೆಪದಲ್ಲಿ ಬೆಂಗಳೂರಿಗೆ ಸೇರಿಸುವುದು ಸರಿಯಲ್ಲ. ತುಮಕೂರನ್ನು ತುಮಕೂರಾಗಿಯೇ ಅಭಿವೃದ್ಧಿ ಮಾಡಿ ಎಂದು ಒತ್ತಾಯಿಸುವುದರ ಜೊತೆಗೆ ಬೆಂಗಳೂರು ಉತ್ತರ ಎಂಬ ಚಿಂತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ತುಮಕೂರನ್ನು ಬೆಂಗಳೂರು ನಾರ್ಥ್ ಘೋಷಣೆಗೆ ಒತ್ತಾಯಿಸುವ ಮೂಲಕ ಹೊಸ ಚರ್ಚೆಗೆ ದಾರಿ ಮಾಡಿದ್ದು, ಇದು ಮುಂದೆ ಯಾವ ಬೆಳವಣಿಗೆಗೆ ಕಾರಣವಾಗತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us