ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್​ ಕಟ್: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ ಬಿಜೆಪಿ

ತುಂಗಾಭದ್ರ ಜಲಾಶಯದ ಕ್ರಸ್ಟ್ ಗೇಟ್ 19 ಕಟ್​ ಆಗಿ ನೀರಿನಲ್ಲಿ ಕಳಚಿ ಹೋಗಿದೆ. ಇದರಿಂದ ಆತಂಕ ಮನೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ನಾಯಕರು ಮುಗಿಬಿದಿದ್ದಾರೆ. ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ. ಈ ವಿಚಾರವಾಗಿ ಅಧಿಕಾಗಳ ವಿರುದ್ದ ಬಿವೈ ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್​ ಕಟ್: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ ಬಿಜೆಪಿ
ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್​ ಕಟ್: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ ಬಿಜೆಪಿ
Follow us
|

Updated on:Aug 11, 2024 | 4:55 PM

ಬೆಂಗಳೂರು, ಆಗಸ್ಟ್​ 11: ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ (tungabhadra dam) ಅಣೆಕಟ್ಟಿನ 19ನೇ ಗೇಟ್‌ ಚೈನ್‌ ಲಿಂಕ್ ಮುರಿದು ಬಿದ್ದಿದ್ದು, ಡ್ಯಾಂನ ಹೊರ ಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashoka) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯುೂ ಸಹ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಳೆದ ವರ್ಷವೆಲ್ಲ ಬರಗಾಲದಿಂದ ತತ್ತರಿಸಿದ್ದ ರೈತರು ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿರುವುದರಿಂದ ಎರಡು ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈಗ ಬಿತ್ತನೆಯಾಗಿರುವ ಒಂದು ಬೆಳೆಯುೂ ಸಹ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದಾರೆ.

ಆರ್ ಅಶೋಕ್ ಟ್ವೀಟ್​

ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ. ಪ್ರಜೆಗಳ ಹಿತಕ್ಕಿಂತ, ಪಕ್ಷದ ಹಿತವೇ ಆದ್ಯತೆಯಾಗಿದೆ. ಭ್ರಷ್ಟಾಚಾರ, ರಾಜಕೀಯ ಮೇಲಾಟ, ಬಣ ಬಡಿದಾಟ, ಪಕ್ಕದ ರಾಜ್ಯಗಳ ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿಗಳಿಗೆ ಇಲಾಖೆಯ ಕರ್ತವ್ಯ ನಿರ್ವಹಿಸಲು ಪಾಪ ಸಮಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಗೇಟ್ ಕಟ್: ರೈತರ ಬೆಳೆಗೆ ನೀರಿನ ಸಂಕಷ್ಟ, ಒಂದೇ ಬೆಳೆ ಸುಳಿವು ನೀಡಿದ ಡಿಕೆಶಿ

ಕಾಲಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಡ್ಯಾಂನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನ ಹರಿಸದಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ಬರಗಾಲದಿಂದ ಜಲಾಶಯ ಖಾಲಿಯಾಗಿದ್ದಾಗ ಡ್ಯಾಂನ ದುರಸ್ತಿ ಕಾರ್ಯ ಮಾಡಲು ಸಮಯವೂ ಇತ್ತು, ಅವಕಾಶವೂ ಇತ್ತು. ಆದರೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಸದಾಕಾಲ ಬ್ಯುಸಿಯಾಗಿರುವ ಡಿಸಿಎಂ ಸಾಹೇಬರಿಗೆ ಡ್ಯಾಂ ರಿಪೇರಿ ಮಾಡಿಸಲು ಸಮಯ ಎಲ್ಲಿದೆ? ಆಸಕ್ತಿ ಎಲ್ಲಿದೆ?

ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಅಧಿಕಾರದ ತೆವಲಿಗೆ ರೈತರ ಬದುಕಿನ ಜೊತೆ ಇನ್ನೆಷ್ಟು ದಿನ ಹೀಗೆ ಚೆಲ್ಲಾಟವಾಡುತ್ತೀರಿ? ನಿಮ್ಮ ದುರಾಡಳಿತದಿಂದ ಉತ್ತಮ ಮಳೆಯಾಗಿದ್ದರೂ ಇವತ್ತು ನಾಡಿನ ರೈತರು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ನಿಮ್ಮ ದುರಾಡಳಿತದಿಂದ ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ ಬೇಕಿದೆ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕ್ರಸ್ಟ್ ಗೇಟ್ ಸರಿಪಡಿಸಲು ಕ್ರಮಕ್ಕೆ ಒತ್ತಾಯಿಸಿದ ವಿಜಯೇಂದ್ರ

ಈ ವಿಚಾರವಾಗಿ ಅಧಿಕಾಗಳ ವಿರುದ್ದ ಅಸಮಾಧಾನ ಹೊರಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮೊದಲೇ ನೊಂದಿರುವ ಜನಕ್ಕೆ ಜಲಬಾಧೆ ಆವರಿಸದಿರಲಿ. ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಡ್ಯಾಮ್​ನ ಕ್ರಸ್ಟ್ ಗೇಟ್ ಕಟ್ಟಾಗಿ ನದಿ ಪಾತ್ರದ 30ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಪ್ರವಾಹ ಎದುರಾಗುವ ಆತಂಕ ಜನರಲ್ಲಿ ಮನೆ ಮಾಡಿದೆ. ಬರಗಾಲದಿಂದ ನಿರಂತರ ತತ್ತರಿಸಿದ್ದ ಜನತೆಗೆ ಅಣೆಕಟ್ಟು ತುಂಬಿದ ಖುಷಿಯಲ್ಲಿರುವಾಗಲೇ ಕ್ರಸ್ಟ್ ಗೇಟ್ ಕಟ್ಟಾಗಿರುವುದರ ಪರಿಣಾಮ ಸಂಗ್ರಹಿತ ನೀರು ಹೊರಹೋದರೆ ಮುಂದೆ ಕೃಷಿಗೆ ತೊಂದರೆಯಾಗುವ ಆತಂಕ ಆರಂಭವಾಗಿದೆ.

ಇಂಥ ಬಹುದೊಡ್ಡ ಡ್ಯಾಮ್ ನಿರ್ವಹಣೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಿದ್ದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ನೆರೆ ಭೀತಿಯಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಿ ಕೂಡಲೇ ಜಲಾಶಯದ ಕ್ರಸ್ಟ್ ಗೇಟ್ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಿತ್ತುಹೋದ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್.. ಜಲಾಶಯ ಸಂಪೂರ್ಣ ಖಾಲಿ ಮಾಡ್ತಾರಾ?

ಇನ್ನು ನಾಳೆ ಮಧ್ಯಾಹ್ನ 12:30ಕ್ಕೆ ತುಂಗಭದ್ರಾ ಡ್ಯಾಮ್ ವೀಕ್ಷಿಸಲಿದ್ದಾರೆ. ಡ್ಯಾಮ್​ನ ಕ್ರಸ್ಟ್ ಗೇಟ್ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಮೃತ ಪಿಎಸ್ಐ ಪರಶುರಾಮ ಪತ್ನಿ, ಕುಟುಂಬಸ್ಥರನ್ನ ಭೇಟಿ ಮಾಡಲಿದ್ದಾರೆ.

ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ: ಜನಾರ್ದನ ರೆಡ್ಡಿ

ಕೊಪ್ಪಳದ ತುಂಗಭದ್ರಾ ಜಲಾಶಯ ಬಳಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದು, ತುಂಗಭದ್ರಾ ಜಲಾಶಯದ ನಿರ್ವಹಣೆಗೆ ಯಾರಿಗೆ ಕೊಟ್ಟಿದ್ದಾರೆ? ಡಿಕೆ ಶಿವಕುಮಾರ್​ ಅಚಾನಕ್ ಆಗಿದೆ ಅಂತ ಹೇಳ್ತಾರೆ. ಆದರೆ ಇದನ್ನ ಒಪ್ಪುವ ಪ್ರಶ್ನೆ ಬರಲ್ಲ. ಬೇಸಿಗೆ ಕಾಲದಲ್ಲಿ ಡ್ಯಾಂ ಪರಿಶೀಲನೆ ಮಾಡಿ, ನಿರ್ವಹಣೆ ಮಾಡಬೇಕು. ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಹಳೆ ಡ್ಯಾಂಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ತಂಡಗಳನ್ನು ಮಾಡಿದೆ. ಅದನ್ನ ಇವರು ಸಂಪರ್ಕ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದು ಮೂರು ರಾಜ್ಯಗಳ ಸರ್ಕಾರಕ್ಕೆ ಸಂಬಂಧಿಸಿದ್ದು, ಆದರೆ ಡ್ಯಾಂ ನಮ್ಮ ಸುಪರ್ದಿಯಲ್ಲಿದೆ. ನಾನು ಯಾವುದೆ ರಾಜಕಿಯ ಉದ್ದೇಶದಿಂದ ಮಾತನಾಡಿಲ್ಲ. ಭಗವಂತ ಒಳ್ಳೆ ಕರುಣೆ ತೋರಿಸಿದ್ರು ನಿರ್ವಹಣೆ ವೈಪಲ್ಯದಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕೂಡಲೆ ನಿರ್ವಹಣೆ ಮಾಡಲು ವಿಶ್ವದಲ್ಲಿ ಇರುವ ಎಲ್ಲಾ ಟೆಕ್ನಾಲಜಿ ಬಳಸಿ ಇದನ್ನ ಉಳಿಸುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:53 pm, Sun, 11 August 24