ಮೈಸೂರು ಚಲೋಗೆ ಬಿಜೆಪಿ ರೆಬೆಲ್ ನಾಯಕರ ಸೆಡ್ಡು. ಬಳ್ಳಾರಿ ಪಾದಯಾತ್ರೆಗೆ ಮುಹೂರ್ತ ಫಿಕ್ಸ್?
ಜೆಡಿಎಸ್ ಬಿಜೆಪಿ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಕೇಸರಿ ಪಾಳಯದಲ್ಲಿ ಭಿನ್ನಮತ ಸ್ಫೋಟವಾಗಿತ್ತು. ಅಲ್ಲದೇ ವಿಜಯೇಂದ್ರ ನಾಯತ್ವದ ವಿರುದ್ಧ ಸಮರ ಸಾರಿದ್ದು, ಪಾದಯಾತ್ರೆಗೂ ಮುನ್ನವೇ ಎಚ್ಚರಿಕೆ ಕೊಟ್ಟಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ನಾಯಕತ್ವವನ್ನ ಒಪ್ಪೋದಿಲ್ಲ, ನಾವೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇವೆ ಎಂದು ಶಾಸಕ ಯತ್ನಾಳ್, ರಮೇಶ್ ಜಾರಕಿಹೊಳಿ ಪ್ರತ್ಯೇಕ ಸಮರ ಸಾರುವ ಸುಳಿವು ಕೊಟ್ಟಿದ್ದರು. ಕೂಡಲ ಸಂಗಮ ಅಥವಾ ಹುಬ್ಬಳ್ಳಿಯಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಮುಂದುವರಿದ ಭಾಗದಲ್ಲಿ .ಮಹತ್ವದ ಬೆಳವಣಿಗೆ ಆಗಿದ್ದು, ಬೆಳಗಾವಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯ ಇನ್ಸೈಡ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
ಬೆಂಗಳೂರು/ಬೆಳಗಾವಿ (ಆಗಸ್ಟ್ 11): ಮುಡಾ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಪಾದಯಾತ್ರೆ ಮುಗಿಯೋದನ್ನೇ ಕಾದುಕುಳಿತ್ತಂತೆ ಇತ್ತು. ನಿನ್ನೆ (ಆ.10) ಮೈಸೂರಿನಲ್ಲಿ ಪಾದಯಾತ್ರೆ ಅಂತ್ಯವಾಗ್ತಿದ್ದಂತೆಯೇ ಇಂದು ಕೇಸರಿ ಮನೆಯಲ್ಲಿನ ರೆಬೆಲ್ಸ್ ಟೀಂ ಫುಲ್ ಆ್ಯಕ್ಟೀವ್ ಆಗಿದ್ದು, ಬಿಜೆಪಿ ಮನೆಯೊಳಿನ ಕಿಚ್ಚು ಮತ್ತೆ ಧಗಧಗಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಒಪ್ಪದಿರೋ ಟೀಂ ಇದೀಗ ಗೌಪ್ಯ ಸ್ಥಳದಲ್ಲಿ ಒಗ್ಗಟ್ಟಿನ ಪ್ರದರ್ಶನವೇ ಮಾಡಿದೆ. ಬೆಳಗಾವಿಯ ಹೊರವಲಯದಲ್ಲಿ 10ಕ್ಕೂ ಹೆಚ್ಚು ಬಿಜೆಪಿಯ ಘಟಾನುಘಟಿ ನಾಯಕರು ಗೌಪ್ಯ ಸಭೆ ನಡೆಸಿ, ಹೊಸ ಸಮರಕ್ಕೆ ಸಿದ್ಧರಾಗಿದ್ದಾರೆ.
ಬೆಳಗಾವಿಯ ಹೊರವಯಲದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಸಲಾಯ್ತು. ಅದರಲ್ಲೂ ಬಿಎಸ್ವೈ ಮಾಜಿ ಆಪ್ತ ಸಹಾಯಕ ಭಾಗಿಯಾಗಿರುವುದು ಕುತೂಹಲಕ್ಕೂ ಕಾರಣವಾಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಭಾಗಿಯಾಗಿದ್ದರು. ಹಾಗಾದ್ರೆ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಏನು? ಎನ್ನುವುದು ಈ ಕೆಳಗಿನಂತಿದೆ.
ಇದನ್ನೂ ಓದಿ: ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲ: ಬಹಿರಂಗವಾಗಿಯೇ ಅಸಹಾಯಕತೆ ಹೊರಹಾಕಿದ ಅಶೋಕ್
BJP ರೆಬೆಲ್ ನಾಯಕರಿಂದ ಪಾದಯಾತ್ರೆ
ಮೈಸೂರು ಪಾದಯಾತ್ರೆಗೆ ಟಕ್ಕರ್ ನೀಡಲು ಬಿಜೆಪಿ ರೆಬೆಲ್ ಟೀಂ ಮುಂದಾಗಿದೆ. ಪ್ರತ್ಯೇಕ ಪಾದಯಾತ್ರೆ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಬಳ್ಳಾರಿ ಪಾದಯಾತ್ರೆಗೆ BJP ರೆಬೆಲ್ ಮುಖಂಡರಿಂದ ಮುಹೂರ್ತವೂ ಫಿಕ್ಸ್ ಮಾಡಿದಂತಿದೆ. ಸೆಪ್ಟೆಂಬರ್ 17ರಿಂದಲೇ ರೆಬೆಲ್ ಮುಖಂಡರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡೋ ಸಾಧ್ಯತೆಯೂ ಇದೆ. ವಾಲ್ಮೀಕಿ ನಿಗಮ ಹಗರಣ, SC, ST ಅನುದಾನ ದುರ್ಬಳಕೆಗೆ ವಿರೋಧ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ. ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಮುಖಂಡರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಹೈಕಮಾಂಡ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ತೀರ್ಮಾನ ಮಾಡಲಿದ್ದಾರೆ. ಮುಡಾ ಪಾದಯಾತ್ರೆ ಕೇವಲ ಮೈಸೂರಿಗೆ ಮಾತ್ರ ಸೀಮಿತ ಹೋರಾಟ ಆಗಿತ್ತು. ಆದ್ರೆ ವಾಲ್ಮೀಕಿ ನಿಗಮದ ಹಗರಣ, ಎಸ್ಸಿ, ಎಸ್ಟಿ ಹಣ ದುರ್ಬಳಕೆ, ಇದೆಲ್ಲವೂ ರಾಜ್ಯಕ್ಕೆ ಸಂಬಂಧಿಸಿದ್ದು ಆಗಿದೆ. ಇದರ ವಿರುದ್ಧ ನಾವೂ ಹೋರಾಟ ಮಾಡಬೇಕಿದೆ. ಪ್ರತ್ಯೇಕ ಪಾದಯಾತ್ರೆಯ ಬಗ್ಗೆ ಕೇಂದ್ರ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ನೀಡಲು ತೀರ್ಮಾನ
ಬಿಜೆಪಿ ಸರ್ಕಾರದ ಅವಧಿಯಲ್ಲಿ SC, ST ಮೀಸಲಾತಿ ಹೆಚ್ಚಳ ಮಾಡಿದ್ವಿ ಇನ್ನು ಕಾಂಗ್ರೆಸ್‌ನವರು ಏನು ಮಾಡಿದ್ರು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿ ಈ ಬಗ್ಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಶೀಘ್ರದಲ್ಲೇ ಮತ್ತೊಮ್ಮೆ ಸಭೆ ಸೇರಲು ಬಿಜೆಪಿ ರೆಬೆಲ್ ನಾಯಕರು ನಿರ್ಧರಿಸಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನು ದೂರ ಇಟ್ಟು ಈ ಪಾದಯಾತ್ರೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ? ಅಥವಾ ಎಲ್ಲರನ್ನೂ ಒಟ್ಟಿಗೆ ಸೇರಿಕೊಂಡು ಪಾದಯಾತ್ರೆ ಮಾಡುವಂತೆ ರೆಬೆಲ್ ನಾಯಕರಿಗೆ ಸಲಹೆ ನೀಡುತ್ತಾ? ಎನ್ನುವುದೇ ಮುಂದಿರುವ ಪ್ರಶ್ನೆ. ಹೀಗಾಗಿ ಬಿಜೆಪಿ ರೆಬೆಲ್ ನಾಯಕರು ಇದೀಗ ಹೈಕಮಾಂಡ್ ಮೊರೆ ಹೋಗಲು ತೀರ್ಮಾನಿಸಿದ್ದು, ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Sun, 11 August 24