
Breaking News Today Highlights in Kannada: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ನಾಯಕರ ಲಭ್ಯತೆ ಇಲ್ಲದ ಕಾರಣ ಪ್ರಕ್ರಿಯೆ ವಿಳಂಬವಾಗಿದ್ದು, ವಾರಾಂತ್ಯದಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಕರಾವಳಿ ಹಾಗೂ ವಿವಿಧೆಡೆ ಇಂದಿನಿಂದ (ಜುಲೈ 22) ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ 40-50 ಕಿ.ಮೀ ವೇಗದ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ನೀಟ್ ಪರೀಕ್ಷೆ ಸೋರಿಕೆ ಖಂಡಿಸಿ 32ನೇ ದಿನವೂ ಪ್ರತಿಭಟನೆ ಕಾಯ್ದುಕೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದಂತೆ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸಂಸತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ, ಕೃಷಿ ಬಿಕ್ಕಟ್ಟು ಹಾಗೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮಹತ್ವದ ಚರ್ಚೆ ನಡೆಸಿದರು. ಲೋಕಸಭೆ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ಪ್ರಧಾನಿ ಕಚೇರಿಯಲ್ಲಿ ನಡೆದ ಈ ಭೇಟಿಯ ಕುರಿತು ಶರದ್ ಪವಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ವಿಷಯ ಮತ್ತು ಪರೀಕ್ಷಾ ಅಕ್ರಮಗಳನ್ನು ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡಲು ಹೊರಟಿದೆ ಹೊರತು ಅವರಿಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಾಳಜಿಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಸ್ತುತ ಪರಿಸ್ಥಿತಿಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಸಮರ ತೀವ್ರಗೊಂಡಿದ್ದು, ವಿಧಾನಮಂಡಲದ ವಿಪಕ್ಷ ನಾಯಕರು ಸೇರಿದಂತೆ ಪ್ರಮುಖ ಬಿಜೆಪಿ ನಾಯಕರ ವಾಹನಗಳಲ್ಲಿ ಮಾರಕಾಸ್ತ್ರಗಳು ಹಾಗೂ ಆಯುಧಗಳಿವೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಪಾದಾಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಮೋಟಾರು ವಾಹನಗಳನ್ನು ಚಲಾಯಿಸುವ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ. ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರಿಗೆ ಪ್ರಸ್ತುತ ಇರುವ 500 ರೂ.ನಿಂದ ದಂಡದ ಮೊತ್ತವನ್ನು ಬರೋಬ್ಬರಿ 5,000 ರೂ. ಗೆ ಹೆಚ್ಚಿಸುವಂತೆ ಒತ್ತಾಯಿಸಿ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಹಾಗೂ ಮುಂಗಾರು ಮಳೆಯ ಕೊರತೆಯ ಹಿನ್ನೆಲೆಯಲ್ಲಿ, ಸದ್ಯಕ್ಕೆ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಿರಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಮಳೆಯ ಅಭಾವವಿರುವುದರಿಂದ ಈ ಹಂತದಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕದ ವಾದಕ್ಕೆ ಸ್ಪಂದಿಸಿರುವ ಪ್ರಾಧಿಕಾರವು ಈ ನಿಲುವು ತಳೆದಿದೆ.
ಭಾರಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ತಳೆದಿದ್ದು, ಪ್ರಕರಣದ ಮರುತನಿಖೆಗೆ ಒಪ್ಪಿಗೆ ಸೂಚಿಸಿದೆ. ಮರುತನಿಖೆಯನ್ನು ಯಾವ ರೀತಿ ಹಾಗೂ ಯಾವ ಏಜೆನ್ಸಿ ಮೂಲಕ ನಡೆಸಬೇಕು ಎಂಬುದರ ಕುರಿತು ವಾದ-ಪ್ರತಿವಾದಗಳನ್ನು ಆಲಿಸಿದ ದೇಶದ ಅತ್ಯುನ್ನತ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಸಂಪೂರ್ಣ ಸಿದ್ಧವಿರುವುದಾಗಿ ತಿಳಿಸಿದೆ. ಮತ್ತೊಂದೆಡೆ, ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇರ ಉಸ್ತುವಾರಿಯಲ್ಲಿಯೇ ಈ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ತನಿಖಾ ಸಂಸ್ಥೆ ಹಾಗೂ ತನಿಖೆಯ ಸ್ವರೂಪದ ಕುರಿತು ನ್ಯಾಯಾಲಯವು ತನ್ನ ಅಂತಿಮ ಆದೇಶದಲ್ಲಿ ವಿಸ್ತೃತವಾದ ನಿರ್ದೇಶನಗಳನ್ನು ನೀಡಲಿದೆ.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆದ ಘಟನೆ ಹಾಗೂ ಬಿಜೆಪಿ ನಾಯಕರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿ ನಿಯೋಗವು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಗಂಭೀರ ಆರೋಪಗಳೊಂದಿಗೆ ದೂರು ನೀಡಿದೆ.
ಬಿಹಾರದ ರಾಜಧಾನಿ ಪಟ್ನಾ ಬುಧವಾರ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ನಗರದ ಪ್ರಮುಖ ಭಾಗಗಳು ರಣರಂಗವಾಗಿ ಮಾರ್ಪಟ್ಟವು. ಒಂದೆಡೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಕೈಗೊಂಡಿದ್ದ ಪ್ರತಿಭಟನೆ ವೇಳೆ ಗಾಂಧಿ ಮೈದಾನ ಹಾಗೂ ಡಾಕ್ ಬಂಗ್ಲಾ ಚೌಕದಲ್ಲಿ ತೀವ್ರ ಹಂಗಾಮಾ ನಡೆದರೆ, ಮತ್ತೊಂದೆಡೆ ಕಾಂಗ್ರೆಸ್ ರಾಜ್ಯ ಕಚೇರಿ (ಸದಾಕತ್ ಆಶ್ರಮ) ಮುಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿ ಭೀಕರ ಘರ್ಷಣೆ ನಡೆಸಿದರು.
ಸಿಜೆಪಿ ಪ್ರತಿಭಟನೆ ಹಿನ್ನೆಲೆ ಭದ್ರತಾ ಹಿತದೃಷ್ಟಿಯಿಂದ ದೆಹಲಿ ಮೆಟ್ರೋ ಬಂದ್ ಮಾಡಲಾಗಿದೆ. ಡಿಎಂಆರ್ ಸಿಯಿಂದ 16 ಮೆಟ್ರೋ ನಿಲ್ದಾಣಗಳ ಬಂದ್ ಮಾಡಲಾಗಿದ್ದು, ಇದರಿಂದ ಪ್ರಯಾಣಿಕರ ಪರದಾಟುವಂತಾಗಿದೆ.
ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ತೀವ್ರ ಹೈಡ್ರಾಮಾ ನಡೆದಿದೆ. ಕಚೇರಿ ಮುಂದೆ ಬಂದ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಅವಹೇಳನಕಾರಿ ಹಾಗೂ ಅಸಂಸದೀಯ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಶ್ರೀರಾಮಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಲೋಕಸಭೆಯಿಂದ ಅಮಾನತು (ಸಸ್ಪೆಂಡ್) ಮಾಡಲಾಗಿದೆ.
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿ ತೀವ್ರ ಹೈಡ್ರಾಮಾ ನಡೆದಿದ್ದು, ಪ್ರತಿಭಟನಾನಿರತ ಆರ್‌ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಡಾ. ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ಬಸ್‌ಗೆ ತುಂಬಿ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ನೀಟ್ ಅಕ್ರಮ ಖಂಡಿಸಿ ಸಂಸತ್ತಿನಲ್ಲಿ ವಿಪಕ್ಷಗಳ ತೀವ್ರ ಗದ್ದಲ ಹಾಗೂ ರಾಜೀನಾಮೆ ಆಗ್ರಹದ ನಡುವೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಲಾಪ ಮುಂದೂಡಿಕೆ ಬೆನ್ನಲ್ಲೇ ನಡೆದ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ನೀಟ್ ಅಕ್ರಮ ವಿರೋಧಿಸಿ ಹೋರಾಡುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (NTA) ರದ್ದುಪಡಿಸಬೇಕು, ಬಂಧಿತರನ್ನು ಬಿಡುಗಡೆಗೊಳಿಸಬೇಕು ಹಾಗೂ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಧರಣಿ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಮತ್ತು ಹೈಡ್ರಾಮಾ ನಡೆದಿದ್ದು, ಹಲವು ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೀಟ್ ಅಕ್ರಮದ ವಿರುದ್ಧದ ಹೋರಾಟ ತೀವ್ರಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ 5 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಧರ್ಮೇಂದ್ರ ಪ್ರಧಾನ್ ಹಾಗೂ ಅಮಿತ್ ಶಾ ರಾಜೀನಾಮೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಪ್ರಧಾನಿ ಕ್ಷಮೆಯಾಚನೆ, ಲಾಠಿಚಾರ್ಜ್ ನಡೆಸಿದ ಪೊಲೀಸರ ಮೇಲೆ ಕ್ರಮ, ಸಂಸತ್ತಿನಲ್ಲಿ ಚರ್ಚೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಆಗ್ರಹಿಸಲಾಗಿದೆ.
ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ರಾಜ್ಯಸಭೆಯಲ್ಲಿ ನಿಯಮ 267ರ ಅಡಿಯಲ್ಲಿ ಆಪ್ ಸಂಸದ ಸಂಜಯ್ ಸಿಂಗ್ ನಿಲುವಳಿ ಸೂಚನೆ ನೋಟೀಸ್ ನೀಡಿದ್ದಾರೆ. ಸದನದ ಕಲಾಪಗಳನ್ನು ರದ್ದುಗೊಳಿಸಿ ನೀಟ್ ಕುರಿತು ಚರ್ಚಿಸಬೇಕು ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಮಕರ ದ್ವಾರದಲ್ಲಿ ಪ್ರತಿಭಟನೆಗೆ ಸಜ್ಜಾಗಿವೆ.
ಸಂಸತ್ತಿನಲ್ಲಿ ನೀಟ್ ಕುರಿತು ಚರ್ಚೆಗೆ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನಿವಾಸದ ಎದುರು ನಡೆದ ಧರಣಿ ಬಳಿಕ, ರಾಹುಲ್ ಗಾಂಧಿ ಮಾತು ಬದಲಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿಯಮಗಳಂತೆ ಚರ್ಚೆಗೆ ಆಹ್ವಾನಿಸಿದ್ದರೂ ಕಾಂಗ್ರೆಸ್ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿದೆ.
ದೆಹಲಿ ಹಿಂಸಾಚಾರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಸಿಸಿಟಿವಿ, ಡ್ರೋನ್ ಹಾಗೂ ಮೊಬೈಲ್ ವಿಡಿಯೋಗಳ ಡಿಜಿಟಲ್ ವಿಶ್ಲೇಷಣೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರ ಸೀಕ್ರೆಟ್ ಚಾಟ್‌ಗಳು, ವಾಟ್ಸಾಪ್ ಸಂದೇಶಗಳು ಹಾಗೂ ಬ್ಲೂಟೂತ್ ಆಪ್ ಬಳಕೆಯ ಸುಳಿವು ಆಧರಿಸಿ, ಸೈಬರ್ ತಜ್ಞರ ನೆರವಿನಿಂದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ
ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು, “ನಾವು ಮಾಡಿದ್ದು ತಪ್ಪು, ಕಾನೂನು ಕೈಗೆತ್ತಿಕೊಳ್ಳಬಾರದು” ಎಂದು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋವನ್ನು ಬೆಂಗಳೂರು ಪೊಲೀಸರು ಹಂಚಿಕೊಂಡಿದ್ದಾರೆ. ಹಲ್ಲೆಕೋರರನ್ನು ‘ಸಮಾಜಘಾತುಕ ಶಕ್ತಿಗಳು’ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತೀವ್ರವಾಗಿ ಖಂಡಿಸಿದ್ದರು. ವೀಡಿಯೋ ನೋಡಿ
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಲು ಮಾತ್ರ ತಾವು ದೆಹಲಿಗೆ ತೆರಳಿದ್ದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೀಟ್ ಅಕ್ರಮದ ಬಗ್ಗೆ ತಕ್ಷಣ ಚರ್ಚೆಗೆ ಪಟ್ಟುಹಿಡಿದು ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆಗೆ ಸಿದ್ಧವೆಂದು ಕೇಂದ್ರ ಸರ್ಕಾರ ತಿಳಿಸಿ, ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರೂ ವಿಪಕ್ಷಗಳು ಗದ್ದಲ ಮುಂದುವರಿಸಿದವು.
ದಾವಣಗೆರೆಯಲ್ಲಿ ಹಫ್ತಾ ವಸೂಲಿ, ಸೈಟ್ ದಂಧೆಯಂತಹ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದ 145 ರೌಡಿಶೀಟರ್‌ಗಳನ್ನು ಎಸ್‌ಪಿ ಡಾ. H.T. ಶೇಖರ್ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಇತ್ತೀಚೆಗೆ ಜಿಮ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲೆಯ ಜಿಮ್‌ಗಳಿಗೆ ಭೇಟಿ ನೀಡಿ ಮಹಿಳೆಯರ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ 6 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ನೇತೃತ್ವದಲ್ಲಿ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಶೇ.80 ರಷ್ಟು ಸ್ವದೇಶಿ ತಂತ್ರಜ್ಞಾನ ಹೊಂದಿರುವ ‘ಮಾಲ್ವಾಣ್’ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡ ಈ ನೌಕೆ, ಅಭಯ್ ಸೋನಾರ್ ವ್ಯವಸ್ಥೆ ಹಾಗೂ ಜಲಾಂತರ್ಗಾಮಿ ನಿರೋಧಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಸಮುದ್ರದಲ್ಲಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಪಡೆದಿದೆ. ವೀಡಿಯೋ ನೋಡಿ
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಕೋಲಾರಕ್ಕೆ ಆಗಮಿಸಲಿದ್ದು, ಬರಗಾಲ ಹಾಗೂ ಪ್ರಮುಖ ಕಂದಾಯ ವಿಷಯಗಳ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ, ಸಂಕಷ್ಟದಲ್ಲಿರುವ ಬರಪೀಡಿತ ಪ್ರದೇಶಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ರೈತ ಸೋಮನಗೌಡ ಮುದಿಗೌಡರ (44) ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಗಾರು ಕೈಕೊಟ್ಟು ಬೆಳೆ ನಾಶವಾಗಿದ್ದರಿಂದ ಹಾಗೂ 10 ಲಕ್ಷ ರೂ. ಅಧಿಕ ಸಾಲ ತೀರಿಸುವಂತೆ ಬ್ಯಾಂಕ್ ನೋಟಿಸ್ ಬಂದಿದ್ದರಿಂದ ಮನನೊಂದು ಜಮೀನಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಗುತ್ತಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲಮಂಗಲದ ಕುಲುವನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ಲೋರೈಡ್ ಕೆಮಿಕಲ್ ಲಾರಿ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 1 ಕಿ.ಮೀ ಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಮಿಕಲ್ ಸೋರಿಕೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.
ಟಿ.ನರಸೀಪುರ ಪಟ್ಟಣದಲ್ಲಿ ಅನಾಮಿಕ ಯುವಕನೊಬ್ಬ ಕೈಯಲ್ಲಿ ಚಾಕು ಹಿಡಿದು ಓಡಾಡುತ್ತಾ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದಾನೆ. ತಕ್ಷಣ ಜಾಗೃತರಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
Published On - 8:48 am, Wed, 22 July 26