TV9 Kannada News highlights: ಟಿ.ನರಸೀಪುರ ಗಣೇಶ ಗಲಾಟೆ: ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಮತ್ತೊಂದು ಎಫ್ಐಆರ್

Karnataka News Today Live Updates: ವಿಧಾನಮಂಡಲ ಅಧಿವೇಶನದ 2ನೇ ದಿನದ ರಾಜಕೀಯ ಕಾವಿನ ಸಂಪೂರ್ಣ ವಿವರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಭಾರಿ ಮಳೆ ಮುನ್ಸೂಚನೆ ಮತ್ತು ಪಶ್ಚಿಮ ಬಂಗಾಳ ನಂದಿಗ್ರಾಮ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಬಂಧನದ ಬ್ರೇಕಿಂಗ್ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ.

TV9 Kannada News highlights: ಟಿ.ನರಸೀಪುರ ಗಣೇಶ ಗಲಾಟೆ: ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಮತ್ತೊಂದು ಎಫ್ಐಆರ್
Pratap Simha
Edited By:

Updated on: Sep 22, 2026 | 11:11 PM

Breaking News Today Live in Kannada: ರಾಜ್ಯದ ತೀವ್ರ ಬರ ಮತ್ತು ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರೆಯಲಾದ 3 ದಿನಗಳ ವಿಧಾನಮಂಡಲ ಅಧಿವೇಶನದ 2ನೇ ದಿನ ಇಂದು . ಮೊದಲ ದಿನ ಕಸ್ತೂರಿರಂಗನ್ ವರದಿ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಸುದೀರ್ಘ ಚರ್ಚೆ ನಡೆಸಿದರು. ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ಸೆ.23ರಂದು ಕರಾವಳಿ ಹಾಗೂ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆಯಾಗಲಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ರನ್ನು 19 ವರ್ಷ ಹಳೆಯ ಪ್ರಕರಣದಲ್ಲಿ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಅಕ್ಟೋಬರ್ 6ರಂದು ಚುನಾವಣೆ ನಡೆಯಲಿದ್ದು, ಇದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

LIVE NEWS & UPDATES

The liveblog has ended.
  • 22 Sep 2026 11:09 PM (IST)

    ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಮತ್ತೊಂದು ಎಫ್ಐಆರ್

    ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಧು ನೀಡಿದ ದೂರಿನ ಆಧಾರದ ಮೇಲೆ ಜಾತಿ ನಿಂದನೆ ಆರೋಪದಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ಸಪೆಕ್ಟರ್ ಧನಂಜಯ ಜಾತಿಯ ಬಗ್ಗೆ ಅವಹೇಳನಕಾರಿ ಮಾತು ಜೊತೆಗೆ ಧನಂಜಯಗೆ ಜಾತಿ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

  • 22 Sep 2026 10:07 PM (IST)

    ಸಿಎಲ್‌ಪಿ ಸಭೆಯಲ್ಲಿ ತಾ.ಪಂ ಹಾಗೂ ಜಿ.ಪಂ ಚುನಾವಣೆ ಬಗ್ಗೆ ಪ್ರಸ್ತಾಪ

    ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಬಗ್ಗೆ ಪ್ರಸ್ತಾಪವಾಗಿದ್ದು, ಶಾಸಕರಿಗೆ ಸಿಎಂ ಡಿಕೆ ಶಿವಕುಮಾರ್ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಚುನಾವಣೆಗೆ ಬೇಕಾದ ಸಿದ್ಧತೆಗಳು ಜಿಲ್ಲಾಮಟ್ಟದಲ್ಲಿ ಶುರು ಮಾಡಬೇಕು. ಗ್ರಾಮ‌ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಗಟ್ಟಿಗೊಳಿಸಿ ಚುನಾವಣೆ ನಡೆಸಲೇಬೇಕು, ನಾವು ನಮ್ಮ ಕಡೆಯಿಂದ ರೆಡಿ ಇರಬೇಕು. ಜೊತೆಗೆ ಹಿರಿಯೂರು ವಿಧಾನಸಭಾ ಉಪ ಚುನಾವಣೆ ಬರಲಿದೆ. ಚುನಾವಣೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಶಾಸಕರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.

  • 22 Sep 2026 10:04 PM (IST)

    ಆರ್ಥಿಕ ಇಲಾಖೆ ಟಿಪ್ಪಣಿ ಬಹಿರಂಗಗೊಳಿಸದಕ್ಕೆ ಸಿಎಂ ಗರಂ

    ಆರ್ಥಿಕ ಇಲಾಖೆ ಟಿಪ್ಪಣಿ ಬಹಿರಂಗಗೊಳಿಸದಕ್ಕೆ ಸಿಎಸ್‌ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಗರಂ ಆಗಿದ್ದಾರೆ. ಎರಡೇ ಕಚೇರಿಯಿಂದ ಮಾಹಿತಿ ಸೋರಿಕೆ ಆಗಿರುವ ಸಾಧ್ಯತೆ ಇದ್ದು, ಸೋರಿಕೆ ಮಾಡಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಮಾಧ್ಯಮಗಳಿಗೆ, ವಿಪಕ್ಷಗಳಿಗೆ ಟಿಪ್ಪಣಿ ಸಿಕ್ಕಿದೆ ಎಂದರೆ ಅಧಿಕಾರಿಗಳು ಗೌಪ್ಯತೆ ಕಾಪಾಡುತ್ತಿಲ್ಲ. ಇದನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • 22 Sep 2026 08:00 PM (IST)

    ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳ ಮನವಿ

    ನಂದಿನಿ ಹಾಲು ಖರೀದಿ ಮತ್ತು ಮಾರಾಟ ದರ ಹೆಚ್ಚಿಸಬೇಕೆಂದು ಹಾಲು ಉತ್ಪಾದಕರ ಒಕ್ಕೂಟಗಳು ಸಿಎಂ ಡಿಕೆ ಶಿವಕುಮಾರ್ ಬಳಿ ಮನವಿ ಮಾಡಿದ್ದಾರೆ. ಹಾಲು ಉತ್ಪಾದಕರ ನಿಯೋಗವು ಇಂದು (ಸೆ.22) ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಪ್ರತಿ ಲೀಟರ್ ಹಾಲಿಗೆ 8ರಿಂದ 10 ಹೆಚ್ಚಿಸಲು ಮನವಿ ಮಾಡಿದೆ. ಹಾಲು ಉತ್ಪಾದನೆಗೆ ತಗಲುವ ವೆಚ್ಚ ಸೇರಿದಂತೆ ಸಮಗ್ರ ಮಾಹಿತಿ ಒದಗಿಸಲು ಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ.

  • 22 Sep 2026 06:53 PM (IST)

    ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ನಾಳೆ ಮುಂದೂಡಿಕೆ

    ಬರ ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ವಿಶೇಷ ಅಧಿವೇಶನದ 2ನೇ ದಿನದ ಕಲಾಪ ಅಂತ್ಯವಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ನಾಳೆ (ಸೆಪ್ಟೆಂಬರ್ 22) ಬೆಳಗ್ಗೆ 11ಕ್ಕೆ ಮುಂದೂಡಿಕೆಯಾಗಿದೆ.

  • 22 Sep 2026 06:38 PM (IST)

    ಉಪ್ಪು ಸೇವನೆ ಕಡಿತಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕ್ರಮ

    ಉಪ್ಪಿನ ಸೇವನೆ ಕಡಿತಕ್ಕೆ ಕರ್ನಾಟಕ ಸರ್ಕಾರದಿಂದ ಹೊಸ ಕ್ರಿಯಾ ಯೋಜನೆ ಬಿಡುಗಡೆ ಮಾಡಿದೆ. ಆರೋಗ್ಯ ಸಚಿವ ಯು.ಟಿ. ಖಾದರ್‌ರಿಂದ ಕರ್ನಾಟಕ ರಾಜ್ಯ ಉಪ್ಪು ಸೇವನೆ ಕಡಿತ ಕ್ರಿಯಾ ಯೋಜನೆ ಬಿಡುಗಡೆ ಮಾಡಿದರು. ರಾಜ್ಯಾದ್ಯಂತ ಆರೋಗ್ಯಕರ ಆಹಾರ ಪದ್ಧತಿ ಉತ್ತೇಜಿಸಲು ಸಮನ್ವಯಿತ ಕ್ರಮಕ್ಕೆ ಕರೆ ನೀಡಲಾಗಿದ್ದು, ಅತಿಯಾದ ಉಪ್ಪಿನ ಸೇವನೆ ಕಡಿತದ ಮೂಲಕ ಅಸಾಂಕ್ರಾಮಿಕ ರೋಗಗಳ (NCDs) ತಡೆಗೆ ಒತ್ತು ನೀಡಲು ಮುಂದಾಗಿದೆ. ಅಧಿಕ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಹಾಗೂ ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಹೆಚ್ಚಳ. ಹೀಗಾಗಿ ಉಪ್ಪಿನ ಸೇವನೆ ಕಡಿತಕ್ಕೆ ಸರ್ಕಾರ ಮುಂದಾಗಿದೆ.

  • 22 Sep 2026 05:28 PM (IST)

    ಅನಂತ್ ನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

    ಗುಜರಾತಿನ ಕೆವಾಡಿಯಲ್ಲಿ 72ನೇ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಚಿತ್ರರಂಗಕ್ಕೆ 50ವರ್ಷಗಳ ಸುದಿರ್ಘ ಸೇವೆ ಸಲ್ಲಿಸಿರೋ ನಟ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

  • 22 Sep 2026 05:22 PM (IST)

    ‘ಮಿಥ್ಯ’ ಕನ್ನಡದ ಅತ್ಯುತ್ತಮ ಪ್ರಶಸ್ತಿ

    ರಕ್ಷಿತ್ ಶೆಟ್ಟಿ ನಿರ್ಮಿಸಿರು ‘ಮಿಥ್ಯ’ ಕನ್ನಡದ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಇಂದು (ಸೆ.22) ಚಿತ್ರ ನಿರ್ದೇಶಕ ಸುಮಂತ್‌ ಭಟ್‌ ಪ್ರಶಸ್ತಿ ಸ್ವೀಕರಿಸಿದರು.

  • 22 Sep 2026 05:11 PM (IST)

    ತುಳು ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

    ತುಳು ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ದೈವ ನರ್ತಕರ ಬದುಕಿನ ಕುರಿತ ಪಿಚ್ಚರ್ ಸ್ಟುಡಿಯೋ ಬ್ಯಾನರ್​ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಇಂಬು’ ಚಿತ್ರ ಅತ್ಯುತ್ತಮ ತುಳು ಚಲನಚಿತ್ರ ಗೌರವ ಎನಿಸಿಕೊಂಡಿದ್ದು, ಗುಜರಾತ್​​​​​​ನಲ್ಲಿ ನಡೆಯುತ್ತಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಶಿವಧ್ವಜ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು

  • 22 Sep 2026 04:17 PM (IST)

    ಕಸ್ತೂರಿ ರಂಗನ್ ಅಧಿಸೂಚನೆ ಮರು ಪರಿಶೀಲಿಸಬೇಕೆಂದು ನಿರ್ಣಯ ಮಂಡನೆ

    ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಗೆ ರಾಜ್ಯ ಸರ್ಕಾರದ ಉತ್ತರ ನೀಡಿದ ಸಿಎಂ ಡಿಕೆ ಶಿವಕುಮಾರ್, ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪುವುದಿಲ್ಲ ಎಂದು ಹೇಳಿ ಅಧಿಸೂಚನೆಯನ್ನು ಮರು ಪರಿಶೀಲಿಸಬೇಕೆಂದು ನಿರ್ಣಯ ಮಂಡಿಸಿದರು. ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಭೌತಿಕ ಸರ್ವೇಗೆ ಒಂದು ವರ್ಷದ ಕಾಲಾವಕಾಶ ಕೊಡಬೇಕು ಎಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.

  • 22 Sep 2026 03:16 PM (IST)

    ಕೆಪಿಸಿಸಿಗೆ ಹೊಸ ರೂಪ ನೀಡಲು ಮುಂದಾದ ಬಿಕೆ ಹರಿಪ್ರಸಾದ್

    ಮುಂಬುರವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಕೆಪಿಸಿಸಿಗೆ ಹೊಸ ರೂಪ ನೀಡಲು ಬಿಕೆ ಹರಿಪ್ರಸಾದ್ ಮುಂದಾಗಿದ್ದಾರೆ. ಹೌದು… ನೂತನ ಡಿಸಿಸಿ ಅಧ್ಯಕ್ಷರ ಬಳಿಕ ಇದೀಗ ಕಾರ್ಯದರ್ಶಿಗಳ ನೇಮಕಕ್ಕೆ ನಿರ್ಧಾರಿದ್ದಾರೆ.ಕೆಪಿಸಿಸಿಗೆ ಕೆಲಸ ಮಾಡಲು ಕಾರ್ಯದರ್ಶಿಗಳು ಹಾಗೂ ಸಂಯೋಜಕರ ನೇಮಕಕ್ಕೆ ತಯಾರಿ ನಡೆದಿದ್ದು, ನೇಮಕಕ್ಕೆ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಡಾ.ಜಿ ಪರಮೇಶ್ವರ್, ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದು, ದಿನೇಶ್ ಗುಂಡೂರಾವ್ ಆಯ್ಕೆ ಸಮಿತಿ ಸಹ ಅಧ್ಯಕ್ಷರಾಗಿದ್ದಾರೆ. ಇನ್ನು ಡಾ. ಬಿ ಎಲ್ ಶಂಕರ್, ನಸೀರ್ ಅಹಮದ್, ರಾಣಿ ಸತೀಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

  • 22 Sep 2026 02:59 PM (IST)

    ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮೀ ರಿಟ್ ಅರ್ಜಿ

    ದರ್ಶನ್ ಆ್ಯಂಡ್ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಮತ್ತೆ ಹೈಕೋರ್ಟ್​ಗೆ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. A2 ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮೀ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸ್ವಾರ್ಥಕ್ಕಾಗಿ, ಬೇರೆಯವರ ಚಿತಾವಣೆಯಿಂದ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದಾರೆ.ದರ್ಶನ್ ವಿರೋಧಿಗಳ ಪ್ರಭಾವದಿಂದ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. 2 ವರ್ಷಗಳಿಂದ ಅರ್ಜಿ ಸಲ್ಲಿಸದೇ ಈಗ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಅನಧಿಕೃತ ಮೊಬೈಲ್ ಬಳಸಿ ಪ್ರದೋಷ್ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಪ್ರದೋಷ್ ರಾವ್ ವಿರುದ್ಧ ಎನ್‌ಸಿಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಅಪ್ರೂವರ್ ಆಗಲು ಈ ಮೊಬೈಲ್ ಬಳಸಿದ್ದಾರೆಂಬ ಶಂಕೆ ಇದೆ. ಈ ಬಗ್ಗೆ ಕೋರ್ಟ್​ಗೆ ಮೆಮೋ ಪರಿಗಣಿಸಿದ್ದರೂ ಅದನ್ನು ಪರಿಗಣಿಸಿಲ್ಲ. ಮಾಡಹೀಗಾಗಿ ಮಾಫಿ ಸಾಕ್ಷಿ ಆದೇಶ ರದ್ದುಪಡಿಸಲು ಮನವಿ ಮಾಡಿದ್ದಾರೆ.

  • 22 Sep 2026 02:40 PM (IST)

    ಕೆವಾಡಿಯಾದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ!

    ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೆಹಲಿಯಿಂದ ಹೊರಗೆ ಆಯೋಜನೆಗೊಂಡ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದರು.

  • 22 Sep 2026 02:36 PM (IST)

    ನೆಲಮಂಗಲ ಬಳಿ ಭೀಕರ ರಸ್ತೆ ಅಪಘಾತ: ಲಾರಿ ಹರಿದು ಸಿಐಎಸ್ಎಫ್ ಯೋಧ ದುರ್ಮರಣ!

    ನೆಲಮಂಗಲದ ದಾಬಸ್‌ಪೇಟೆ ಬಳಿ ಬೈಕ್‌ನಲ್ಲಿ ಇಲಾಖಾ ಸಾಮಗ್ರಿ ತರಲು ತೆರಳುತ್ತಿದ್ದ ಸಿಐಎಸ್‌ಎಫ್ ಯೋಧ ಪ್ರಿನ್ಸಿಪಲ್ ಸಿಂಗ್ (35) ಅವರಿಗೆ ಲಾರಿ ಡಿಕ್ಕಿಯಾಗಿದೆ. ಚಕ್ರ ಹರಿದು ಪಂಜಾಬ್ ಮೂಲದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 22 Sep 2026 02:28 PM (IST)

    ವಿಧಾನಸೌಧದಲ್ಲಿ ಡಿಸಿಪಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ!

    ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕಾರು ಪಶ್ಚಿಮ ದ್ವಾರದಿಂದ ಪಾರ್ಕಿಂಗ್‌ಗೆ ತೆರಳಿದ್ದರಿಂದ ಕೆಲಕಾಲ ಕಾಯಬೇಕಾಯಿತು. ಕಾರು ತೆಗೆಸಿದ ಡಿಸಿಪಿ ಯೋಗೇಶ್ ವಿರುದ್ಧ ಗರಂ ಆದ ಅವರು, ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು.

  • 22 Sep 2026 02:12 PM (IST)

    ಹಾಲಿನ ದರ 10 ರೂ. ಏರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ!

    ಪ್ರತಿ ಲೀಟರ್ ಹಾಲಿಗೆ 10 ರೂ. ಹೆಚ್ಚಿಸುವಂತೆ ಆಗ್ರಹಿಸಿ 16 ಒಕ್ಕೂಟಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಡೆಯುತ್ತಿರುವ ಅಧಿವೇಶನದಲ್ಲೇ ದರ ಏರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಸಚಿವರಾದ ಲಕ್ಷ್ಮಣ್ ಸವದಿ, ಪುಟ್ಟರಂಗಶೆಟ್ಟಿ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

  • 22 Sep 2026 01:23 PM (IST)

    ವಿಧಾನಪರಿಷತ್‌ನಲ್ಲಿ ಬರ ಚರ್ಚೆ ವೇಳೆ ಕಲಾಪ ಗದ್ದಲ: ಬಿಜೆಪಿ-ಜೆಡಿಎಸ್ ಸದಸ್ಯರ ಸಭಾತ್ಯಾಗ!

    ವಿಧಾನಪರಿಷತ್‌ನಲ್ಲಿ ಬರ ಪರಿಸ್ಥಿತಿ ಚರ್ಚೆ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಅಡ್ಡಿಪಡಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಮಾತನಾಡುವ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.

  • 22 Sep 2026 01:09 PM (IST)

    ಹಾಸನದಲ್ಲಿ ನವವಿವಾಹಿತೆ ನಿಗೂಢ ಕಣ್ಮರೆ: ವರದಕ್ಷಿಣೆಗಾಗಿ ಕೊಲೆ ಆರೋಪ!

    ಹಾಸನದ ಚನ್ನರಾಯಪಟ್ಟಣದಲ್ಲಿ ಕೆಎಎಸ್ ಆಕಾಂಕ್ಷಿ, ಎರಡುವರೆ ತಿಂಗಳ ಗರ್ಭಿಣಿ ಪ್ರಿಯಾಂಕ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಪತಿ ರಾಜಶೇಖರನೇ ಆಕೆಯನ್ನು ಹೇಮಾವತಿ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪತಿ ಹಾಗೂ ಅತ್ತೆ-ಮಾಮನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • 22 Sep 2026 12:59 PM (IST)

    ವಿಧಾನಪರಿಷತ್‌ನಲ್ಲಿ ಮೋದಿ ಕುರಿತು ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಆಕ್ರೋಶ

    ವಿಧಾನಪರಿಷತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಭಾರಿ ಗದ್ದಲ ಮತ್ತು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. “ಪ್ರಧಾನಿ ನರೇಂದ್ರ ಮೋದಿ ಅವರು 800 ಜನರ ರೈತರ ಪ್ರಾಣ ತೆಗೆದುಕೊಂಡಿದ್ದಾರೆ” ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಲ್ಲದೆ, ಏಕವಚನ ಬಳಸಿರುವುದು ಬಿಜೆಪಿ ಸದಸ್ಯರ ಕಂಗಾಲಿಗೆ ಕಾರಣವಾಯಿತು.

  • 22 Sep 2026 12:55 PM (IST)

    ಅರಣ್ಯವಾಸಿಗಳು ಕಾಡು ಹಾಳು ಮಾಡಿಲ್ಲ, ದೊಡ್ಡ ಕಂಪನಿಗಳು ಮಾಡಿದ್ದು: ಹೆಚ್.ಕೆ. ಪಾಟೀಲ್

    ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, “ವರದಿಯ ಪ್ರತಿಯೊಂದು ಅಂಶವನ್ನೂ ವಿರೋಧಿಸುವುದು ಸರಿಯಲ್ಲ. ಅರಣ್ಯವಾಸಿಗಳು ಕಾಡನ್ನು ರಕ್ಷಿಸಿದ್ದಾರೆ, ದೊಡ್ಡ ಕಂಪನಿಗಳು ಹಾಳುಮಾಡಿವೆ. ಇದರಿಂದ 4-5 ಲಕ್ಷ ಜನರಿಗೆ ತೊಂದರೆಯಾಗಲಿದ್ದು, ಸಾಂಸ್ಕೃತಿಕ ಪರಂಪರೆ ಹಾಗೂ ಬದುಕು ಕಾಯಲು ವರದಿಯನ್ನು ಸೂಕ್ಷ್ಮವಾಗಿ ಮರುಪರಿಶೀಲಿಸಬೇಕು,” ಎಂದರು.

  • 22 Sep 2026 12:22 PM (IST)

    ಬಿಡದಿ ಟೌನ್‌ಶಿಪ್ ಜಟಾಪಟಿ: ರಸ್ತೆಯಲ್ಲೇ ಗಣಪತಿ ಪ್ರತಿಷ್ಠಾಪಿಸಿ ರೈತರ ಉಪವಾಸ ಸತ್ಯಾಗ್ರಹ!

    ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೋರಾಟಕ್ಕೆ ಯಾವುದೇ ವಿಘ್ನ ಬಾರದಿರಲಿ ಎಂದು ರೈತರು ಪ್ರತಿಭಟನಾ ಸ್ಥಳವಾದ ರಸ್ತೆಯಲ್ಲೇ ವಿಘ್ನನಿವಾರಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೋರಾಟ ಮುಂದುವರಿಸಿದ್ದಾರೆ. ನಿರಂತರ ಉಪವಾಸ ಸತ್ಯಾಗ್ರಹದಿಂದಾಗಿ ಹೋರಾಟಗಾರರಾದ ವೀರೇಶ್ ಮತ್ತು ಕುಮಾರ್ ಎಂಬ ಇಬ್ಬರು ರೈತರು ತೀವ್ರ ಅಸ್ವಸ್ಥಗೊಂಡಿದ್ದಾರೆ.

  • 22 Sep 2026 12:22 PM (IST)

    108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರಕ್ಕೆ ಯು.ಟಿ. ಖಾದರ್ ಕಡಕ್ ಎಚ್ಚರಿಕೆ!

    108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ. ತುರ್ತು ಸೇವೆಗೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ. ಮುಷ್ಕರ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡದೆ, ಸಮಸ್ಯೆಗಳಿದ್ದರೆ ಆಂಬುಲೆನ್ಸ್ ನಿರ್ವಹಣಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಶೀಘ್ರ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.

     

  • 22 Sep 2026 12:08 PM (IST)

    ಬರ ಪರಿಹಾರ ಜಟಾಪಟಿ: ಪರಿಷತ್‌ನಲ್ಲಿ ಡಿಸಿಎಂ ಪರಮೇಶ್ವರ್ – ಸಿ.ಟಿ. ರವಿ ನೇರ ವಾಗ್ದಾಳಿ!

    ಪರಿಷತ್‌ನಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ವಿಷಯವಾಗಿ ಡಿಸಿಎಂ ಪರಮೇಶ್ವರ್, “ನಾವು ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುತ್ತೇವೆ, ಕೇಂದ್ರದಿಂದ ಪರಿಹಾರ ಕೊಡಿಸುತ್ತೀರಾ?” ಎಂದು ಸಿ.ಟಿ. ರವಿಗೆ ಸವಾಲೆಸೆದರು. ಇದಕ್ಕೆ ಪ್ರತಿಯಾಗಿ, “ದೇಶದಲ್ಲೇ ಅತಿ ಶ್ರೀಮಂತ ಸಿಎಂ ನಮ್ಮಲ್ಲಿದ್ದಾರೆ. ಕೇಂದ್ರದ ಬಳಿ ಭಿಕ್ಷಾಪಾತ್ರೆ ಹಿಡಿಯುವ ಅಗತ್ಯವಿಲ್ಲ,” ಎಂದು ರವಿ ತಿರುಗೇಟು ನೀಡಿದರು.

  • 22 Sep 2026 11:49 AM (IST)

    ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

    ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಚರ್ಚಿಸಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, “ಕಂಪ್ಯೂಟರ್ ಮುಂದೆ ಕೂತವರಿಗೆ ಪಶ್ಚಿಮ ಘಟ್ಟ ಸೆಲ್ಫಿ ಪಾಯಿಂಟ್, ಆದರೆ ನಮಗೆ ಬದುಕು. ಒಂದು ಸಾಲಿನ ನಿರ್ಣಯ ಪರಿಹಾರವಲ್ಲ; ಪರಿಸರ ಉಳಿವಿಗಿಂತ ಅಲ್ಲಿನ ಜನರ ಬದುಕು, ಸಂಸ್ಕೃತಿ ಮುಖ್ಯ” ಎಂದು ಸರ್ಕಾರವನ್ನು ಒತ್ತಾಯಿಸಿದರು.

  • 22 Sep 2026 11:45 AM (IST)

    ವಂದೇ ಮಾತರಂ 2 ಚರಣ ಹಾಡುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ನಲ್ಲಿ ಸವಾಲು!

    ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಿ ಹೊರಡಿಸಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದೆ. ಪ್ರತಿಯೊಂದು ರಾಜ್ಯ ಸರ್ಕಾರಗಳು ತಮ್ಮದೇ ಆದ ಪ್ರತ್ಯೇಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ನಲ್ಲಿ ವಾದಿಸಲಾಗಿದೆ.

  • 22 Sep 2026 11:43 AM (IST)

    ವಿಧಾನಪರಿಷತ್‌ನಲ್ಲಿ ಬರ ಚರ್ಚೆ: ಡಿಸಿಎಂ ಪರಮೇಶ್ವರ್ ತಮಾಷೆಯ ಕಮೆಂಟ್!

    ವಿಧಾನಪರಿಷತ್‌ನಲ್ಲಿ ಬರ ಕುರಿತು ಚರ್ಚೆ ಆರಂಭಿಸಿದ ಕಂದಾಯ ಸಚಿವ, ಡಿಸಿಎಂ ಡಾ. ಜಿ. ಪರಮೇಶ್ವರ್, ಶಾಸಕ ಸಿ.ಟಿ. ರವಿ, ಬೋಜೆಗೌಡ ಮತ್ತು ನಾರಾಯಣಸ್ವಾಮಿ ಅವರ ಶಾಲುಗಳ ಬಣ್ಣವನ್ನು ಪ್ರಸ್ತಾಪಿಸಿ, “ಸಿ.ಟಿ. ರವಿ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರ ಮಾತುಗಳೂ ಸ್ಮಾರ್ಟ್ ಆಗಿರುತ್ತವೆ” ಎಂದು ಚರ್ಚೆಗೆ ಚಾಲನೆ ನೀಡಿದರು.

  • 22 Sep 2026 10:12 AM (IST)

    ಸದನದಲ್ಲಿಂದು ಭೀಕರ ಬರ ಚರ್ಚೆ: ವಿಪಕ್ಷಗಳಿಗೆ ಟಾಕ್ ವಾರ್ ತಿರುಗೇಟು ನೀಡಲು ಆಡಳಿತ ಪಕ್ಷ ಸಜ್ಜು!

    ಇಂದು ವಿಧಾನಮಂಡಲ ಅಧಿವೇಶನದಲ್ಲಿ ಬರ ಪರಿಸ್ಥಿತಿ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಕಂದಾಯ ಸಚಿವರಾದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ನಿನ್ನೆಯೇ 8 ಸಚಿವರೊಂದಿಗೆ ಕಂದಾಯ ಇಲಾಖೆ ಸಮೀಕ್ಷೆ ವರದಿ ಆಧರಿಸಿ ಸಭೆ ನಡೆಸಿದ್ದು, ವಿಪಕ್ಷಗಳ ಆರೋಪಗಳಿಗೆ ಅಂಕಿಅಂಶ ಸಹಿತ ಸೂಕ್ತ ತಿರುಗೇಟು ನೀಡಲು ಆಡಳಿತ ಪಕ್ಷ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

  • 22 Sep 2026 10:11 AM (IST)

    ಬೆಂಗಳೂರು ಸೇರಿ ರಾಜ್ಯದ ಎಂಟು ಕಡೆ ಲೋಕಾಯುಕ್ತ ದಾಳಿ!

    ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಡ್ಯ, ಮಡಿಕೇರಿ, ಹುಬ್ಬಳ್ಳಿ, ಕಲಬುರಗಿ, ಬೀದರ್ ಹಾಗೂ ಚಿಕ್ಕಬಳ್ಳಾಪುರದ ಒಟ್ಟು 8 ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಭರ್ಜರಿ ದಾಳಿ ನಡೆಸಿದ್ದಾರೆ.

  • 22 Sep 2026 10:08 AM (IST)

    ಚಿತ್ರದುರ್ಗ ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಎಫ್​ಡಿಎ ಬಲೆಗೆ!

    ಆರ್​ಟಿಸಿ ತಿದ್ದುಪಡಿ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗ ಉಪವಿಭಾಗಾಧಿಕಾರಿ ಕಚೇರಿಯ ಎಫ್‌ಡಿಎ ಬಸವರಾಜು ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೆಲ್ಲೋಡು ಗ್ರಾಮದ ಹನುಮಂತಪ್ಪ ಎಂಬವರಿಂದ 40 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಎಸ್‌ಪಿ ಕವಲೇಪುರ ಹಾಗೂ ಡಿವೈಎಸ್‌ಪಿ ಕಲಾವತಿ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

  • 22 Sep 2026 10:04 AM (IST)

    ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಶ್ರೀದೇವಿ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ!

    ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ಬಸವನಗುಡಿಯ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಶ್ರೀದೇವಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಭರ್ಜರಿ ದಾಳಿ ನಡೆಸಲಾಗಿದೆ. ಶ್ರೀದೇವಿ ಅವರ ಯಲಹಂಕದಲ್ಲಿರುವ ಮನೆ, ಬಸವನಗುಡಿ ಕಚೇರಿ ಹಾಗೂ ಈ ಹಿಂದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ರಾಮನಗರದ ಕಚೇರಿಗಳ ಮೇಲೆಯೂ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪ್ರಮುಖ ದಾಖಲೆಗಳು ಮತ್ತು ಆಸ್ತಿ-ಪಾಸ್ತಿಗಳ ಪರಿಶೀಲನೆ ಕಾಯ್ದೆ ನಡೆಸುತ್ತಿದ್ದಾರೆ.

  • 22 Sep 2026 10:02 AM (IST)

    ಹೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ!

    ಹೆಸ್ಕಾಂ ಎಇಇ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿದೆ. ಮನೆಯಲ್ಲಿದ್ದ ಬಂಗಾರದ ನಿಖರ ತೂಕ ಹಾಗೂ ಮೌಲ್ಯ ಮಾಪನ ಮಾಡಲು ಲೋಕಾಯುಕ್ತ ಸಿಬ್ಬಂದಿ ಅಕ್ಕಸಾಲಿಗನನ್ನು ಸ್ಥಳಕ್ಕೆ ಕರೆತಂದಿದ್ದು, ಅಧಿಕಾರಿಗಳು ಸಂಪೂರ್ಣ ಆಸ್ತಿ ವಿವರ ಕಲೆಹಾಕುತ್ತಿದ್ದಾರೆ.
    YouTube video player

  • 22 Sep 2026 10:00 AM (IST)

    ಸುತ್ತಕಣಿವೆ ಬಳಿ ನಿರ್ಜನ ಪ್ರದೇಶದಲ್ಲಿ ಯುವಕನ ಶವ ಪತ್ತೆ!

    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸುತ್ತಕಣಿವೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಣಿಕಂಠ (35) ಎಂಬವರ ಶವ ಪತ್ತೆಯಾಗಿದೆ. ಮಣಿಕಂಠ ಅವರ ಸಾವಿಗೆ ನಿಖರ ಕಾರಣ ಏನೆಂಬುದನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಘಟನೆ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • 22 Sep 2026 09:57 AM (IST)

    ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

    ಸಾರ್ವಜನಿಕರ ದೂರು ಹಾಗೂ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಆಯುಕ್ತ ಹೆಚ್.ಆರ್. ರಮೇಶ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಶೋಧ ಕಾರ್ಯ ನಡೆಸಿರುವ ಅಧಿಕಾರಿಗಳು ಹಲವು ಪ್ರಮುಖ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

  • 22 Sep 2026 09:56 AM (IST)

    ನಿವೃತ್ತ ಅಧಿಕಾರಿ ಶಿವರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ!

    ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಡ್ಯ ಜಿಲ್ಲೆಯ ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ಶಿವರಾಜ್ ಅವರ ಮನೆ ಹಾಗೂ ಅವಸರಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ವ್ಯಾಪಕ ಶೋಧ ಕೈಗೊಂಡಿದೆ. ತನಿಖೆ ವೇಳೆ, ಹಾಸ್ಟೆಲ್ ಮಕ್ಕಳಿಗೆ ತಲುಪಬೇಕಿದ್ದ ಸಾಮಗ್ರಿಗಳನ್ನು ಅಕ್ರಮವಾಗಿ ಕದ್ದು ಸಂಗ್ರಹಿಸಿಟ್ಟಿರುವುದು ಬಯಲಾಗಿದೆ. ಅಲ್ಲದೆ, ಪರಿಶೀಲನೆ ಸಂದರ್ಭದಲ್ಲಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಸ್ಕಾಚ್ ಹಾಗೂ ಮದ್ಯದ ಬಾಟಲಿಗಳು, ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳು ಪತ್ತೆಯಾಗಿವೆ. ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಹಾಗೂ ದಾಖಲೆಗಳ ಜಾಲಾಟವನ್ನು ಮುಂದುವರಿಸಿದ್ದಾರೆ.

  • 22 Sep 2026 09:53 AM (IST)

    ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ವಿಡಿಯೋ ಮೂಲಕ ಕ್ಷಮೆಯಾಚಿಸಿದ ಶಾಸಕರ ಪುತ್ರಿ!

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಆಗಸ್ಟ್ 12ರಂದು ಲೇಡಿ ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಅವರ ಪುತ್ರಿ ಐಶ್ವರ್ಯಾ ಗೌಡ, ಇದೀಗ ವಿಡಿಯೋ ಬಿಡುಗಡೆ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

  • 22 Sep 2026 08:52 AM (IST)

    ಕೊಪ್ಪಳದಲ್ಲಿ ಮಳೆ ಅವಾಂತರ: ಹಾನಿಗೊಳಗಾದ ನಿವಾಸಿಗಳಿಂದ ಪ್ರತಿಭಟನೆ

    ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ಮಳೆ ನೀರ ಜೊತೆಗೆ ಚರಂಡಿ ನೀರು ಮನೆಗಳಿಗೆ ನುಗ್ಗಿ ದಿನಸಿ, ಪುಸ್ತಕಗಳು ಹಾಳಾಗಿವೆ. ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಶಾಶ್ವತ ಪರಿಹಾರಕ್ಕಾಗಿ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

Published On - 8:51 am, Tue, 22 September 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us