Breaking News Today Highlights: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರ ದಿಗ್ವಿಜಯ
Karnataka News Today Highlights Updates: ಸಾಕಷ್ಟು ಕುತೂಹಲ ಮೂಡಿಸಿದ್ದ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೊತೆಗೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅತ್ತ ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಇತ್ತ ವಿವಾದದ ಹಿನ್ನೆಲೆಯಲ್ಲಿ 'ದೃಶ್ಯಂ 3' ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆ ಮುಕ್ತಾಯಗೊಂಡಿದ್ದು, ಇದೀಗ ಫಲಿತಾಂಶ ಕೂಡ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಜಯಗಳಿಸಿದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಸೋಲು ಕಂಡಿದ್ದಾರೆ. ಶಾಸಕರು ಬೆಳಗ್ಗೆ 8.30ಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕಚೇರಿಗೆ ಆಗಮಿಸಿ ಮತದಾನ ನಡೆದಿತ್ತು. ಎನ್.ರವಿಕುಮಾರ್ ಚುನಾವಣಾ ಏಜೆಂಟ್ ಆಗಿದ್ದರು. ಇನ್ನು ಜಾಗತಿಕವಾಗಿ, 110 ದಿನಗಳ ಸಂಘರ್ಷಕ್ಕೆ ಅಂತ್ಯ ಹಾಡಿ ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಅನುಷ್ಠಾನ ಪರೀಕ್ಷಿಸುವ ಸಮಯ ಎಂದು ಇರಾನ್ ಹೇಳಿದೆ. ಇತ್ತ ‘ದೃಶ್ಯಂ 3’ ತೆಲುಗು ಆವೃತ್ತಿಯ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ದೇಶಕಿ ಶ್ರೀಪ್ರಿಯಾ ಸಂಸ್ಥೆಯ ರಿಮೇಕ್ ಹಕ್ಕುಗಳ ವಿವಾದದ ಹಿನ್ನೆಲೆಯಲ್ಲಿ ಜೂನ್ 18ರ ಸ್ಟ್ರೀಮಿಂಗ್‌ಗೆ ಕೋರ್ಟ್ ಬ್ರೇಕ್ ಹಾಕಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
LIVE NEWS & UPDATES
-
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಡಿಸಿಎಂ ಪರಮೇಶ್ವರ್ ಅಭಿನಂದನೆ
ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ವಿನಯ್ ಕಾರ್ತಿಕ್ ಅವರಿಗೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ. ಪಕ್ಷದ ನೂತನ ಸದಸ್ಯರಾದ ಇವರೆಲ್ಲರೂ ತಮ್ಮ ಅನುಭವ ಮತ್ತು ಬದ್ಧತೆಯೊಂದಿಗೆ ಜನಪರ ಕಾಳಜಿಯ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಪರಮೇಶ್ವರ್ ಹೇಳಿದ್ದಾರೆ.
-
ಬಿಜೆಪಿಯವರು ಈಗಲಾದರೂ ಬುದ್ಧಿ ಕಲಿತುಕೊಳ್ಳಬೇಕಿದೆ: ಹರಿಪ್ರಸಾದ್
ಬಿಜೆಪಿಯವರು ಈಗಲಾದರೂ ಬುದ್ಧಿ ಕಲಿತುಕೊಳ್ಳಬೇಕಿದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ನಮಗೆ ಆತ್ಮಸಾಕ್ಷಿ ವೋಟ್ ಕೊಡಿ ಎಂದು ಕೇಳಿದ್ದೇವೆ. ಅದರಂತೆ ಅವರು ಮತ ನೀಡಿದ್ದಾರೆ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹೇಳಿದ್ದಾರೆ.
-
-
ಕರ್ನಾಟಕದ ಪಾಲಿಗೆ ಇಂದು ಐತಿಹಾಸಿಕ ದಿನ: ಸುರ್ಜೇವಾಲ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಗೆದ್ದಿದ್ದಾರೆ. ಕರ್ನಾಟಕದ ಪಾಲಿಗೆ ಇಂದು ಐತಿಹಾಸಿಕ ದಿನ. ಪ್ರಥಮ ಸುತ್ತಿನ ಮತಗಳಲ್ಲೇ ಎಲ್ಲಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್‌ಗೆ 11 ಮತಗಳು ಹೆಚ್ಚುವರಿಯಾಗಿ ಬಂದಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
-
ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ: ಆರ್.ಅಶೋಕ್
ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಮ್ಮ ಮೂರು ಮತಗಳು ಕ್ರಾಸ್ ಆಗಿದೆ ಅಂತಾ ಮಾಹಿತಿ ಬಂದಿದೆ. ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ. ಮುಂದೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
-
30 ಮತಗಳನ್ನ ಪಡೆದ ತಿಪ್ಪಣ್ಣಪ್ಪ ಕಮಕನೂರು ಫುಲ್ ಹ್ಯಾಪಿ
ಕಾಂಗ್ರೆಸ್ ಅಭ್ಯರ್ಥಿ ತಿಪ್ಪಣ್ಣ ಕಮಕನೂರು ಅವರು ಭಾರಿ ಬಹುಮತದಿಂದ ವಿಧಾನ ಪರಿಷತ್ಗೆ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. 30ಕ್ಕೆ 30 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿರುವ ಅವರು, ಬಡವರಿಗೆ ಮತ್ತು ನಿರ್ದಿಷ್ಟ ಸಮಾಜಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
-
-
ಬಿಕೆ ಹರಿಪ್ರಸಾದ್ ಸ್ಫೋಟಕ ರಿಯಾಕ್ಷನ್
ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದಾಗಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಕ್ರಾಸ್ ವೋಟಿಂಗ್ ಆಗಿದೆ. ಎರಡೂ ಪಕ್ಷಗಳ ತಲಾ ಮೂವರು ಮತದಾರರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
-
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತಗಳು ಲಭಿಸಿವೆ. ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಹೊರತುಪಡಿಸಿ ಉಳಿದ ಬಿಜೆಪಿ ಶಾಸಕರಿಂದ ಮತ ಹಾಕಲಾಗಿದೆ. ಜೆಡಿಎಸ್‌ನ 6 ಶಾಸಕರು ಕೂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ.
-
ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟ
ಸಾಕಷ್ಟು ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಸೋಲು ಕಂಡಿದ್ದಾರೆ.
ಪರಿಷತ್ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು, ಸೋಲುಂಡ ಜೆಡಿಎಸ್‌ನ ಗೋವಿಂದರಾಜು
-
ಮತಗಟ್ಟೆಗೆ ಬಂದ ಅಭ್ಯರ್ಥಿಗಳು, ಏಜೆಂಟ್‌ಗಳು
ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮತ ಎಣಿಕೆ ನಡೆಯುತ್ತಿರುವ ಮತಗಟ್ಟೆಯಲ್ಲಿ ಅಭ್ಯರ್ಥಿಗಳು ಮತ್ತು ಏಜೆಂಟ್‌ಗಳು ಉಪಸ್ಥಿತರಿದ್ದಾರೆ. ಈ ವೇಳೆ ಅಭ್ಯರ್ಥಿಗಳಾದ ರಘು ಕೌಟಿಲ್ಯ ಹಾಗೂ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಕೂಡ ಹಾಜರಿದ್ದರು. ವಿನಯ್ ಕಾರ್ತಿಕ್ ಅವರು ವಿಕ್ಟರಿ ಸಿಂಬಲ್ ತೋರಿಸಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
-
ಯತ್ನಾಳ್ ವೋಟಿಂಗ್ ಚುನಾವಣೆ ಹಾಲ್‌ನಲ್ಲಿ ನಡೆದಿದ್ದೇನೆಂದು ಹೇಳಿದ ಪೊನ್ನಣ್ಣ
ಯತ್ನಾಳ್ ವೋಟಿಂಗ್ ಮಾಡುವಾಗ ಚುನಾವಣೆ ಹಾಲ್‌ನಲ್ಲಿ ನಡೆದಿದ್ದೇನು ಎಂದು ಪೊನ್ನಣ್ಣ ಹೇಳಿದ್ದಾರೆ ವಿಡಿಯೋ ನೋಡಿ.
-
ಕೆಲವೇ ಕ್ಷಣಗಳಲ್ಲಿ ಪರಿಷತ್ ಚುನಾವಣೆ ಮತ ಎಣಿಕೆ
ಕರ್ನಾಟಕ ಪರಿಷತ್ ಚುನಾವಣೆಯ ಮತ ಎಣಿಕೆ ಇಂದು ಸಂಜೆ 5 ಗಂಟೆಗೆ ಆರಂಭವಾಗಲಿದೆ. 222 ಶಾಸಕರಿಂದ 100% ಮತದಾನವಾಗಿದ್ದು, ಏಳನೇ ಅಭ್ಯರ್ಥಿಯ ಫಲಿತಾಂಶ ಕುತೂಹಲ ಕೆರಳಿಸಿದೆ. ಕ್ರಾಸ್ ವೋಟಿಂಗ್ ಸಾಧ್ಯತೆ, ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಅತೃಪ್ತರ ಮತಗಳು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತ ಅಸಿಂಧುಗೊಳಿಸುವ ಪ್ರಯತ್ನಗಳು ಚುನಾವಣೆಯನ್ನು ಮತ್ತಷ್ಟು ಜಟಿಲಗೊಳಿಸಿವೆ. ಆರು ಗಂಟೆಯೊಳಗೆ ಫಲಿತಾಂಶ ನಿರೀಕ್ಷಿಸಲಾಗಿದೆ.
-
ಪರಿಷತ್ ಚುನಾವಣೆಯಲ್ಲಿ ಎಲ್ಲಾ 222 ಶಾಸಕರಿಂದ ಮತದಾನ
ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ 222 ಶಾಸಕರಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. 100% ಮತದಾನವಾದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ.
-
ಮತದಾನದ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ: ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಹೇಳಿಕೆ
ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮತದಾನದ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ವೋಟಿಂಗ್ ಇಲ್ಲ ಎಂದಾದರೆ ನಾವ್ಯಾಕೆ ಗ್ಯಾರಂಟಿ ಕೊಡಬೇಕು ಎಂದು ಪ್ರಶ್ನಿಸಿದ ಅವರು, ಶಕ್ತಿ ಯೋಜನೆಯಡಿ ಪ್ರಯಾಣಿಸಲು ಗುರುತಿನ ಚೀಟಿ ಕಡ್ಡಾಯವಾಗಿ ನೀಡಬೇಕು ಎಂದಿದ್ದಾರೆ.
-
2028ಕ್ಕೆ ನೋಡೋಣ, ಈಗ ತಲೆಕೆಡಿಸಿಕೊಳ್ಳುವುದು ಬೇಡ: ಶಾಸಕ ಎಚ್.ಡಿ.ರೇವಣ್ಣ ಹೇಳಿಕೆ
ವಿಧಾನಪರಿಷತ್ ಚುನಾವಣೆ ಮತದಾನದ ನಡುವೆ ವಿಧಾನಸೌಧದಲ್ಲಿ ಮಾತನಾಡಿದ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ, ಈ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಮುಂದಿನ 2028ರ ಚುನಾವಣೆಗೆ ಇಲ್ಲಿಂದಲೇ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
-
ಜೆಡಿಎಸ್‌ಗೆ ಹೆಚ್ಚುವರಿ ಮತಗಳ ಕೊರತೆ ಭೀತಿ
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಆರು ಮತಗಳ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ಗೆ ಕೊನೆ ಹಂತದಲ್ಲಿ ಲೆಕ್ಕಾಚಾರ ಕೈತಪ್ಪಿದೆ. ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಚಲಾಯಿಸಿದ್ದರಿಂದ ಜೆಡಿಎಸ್‌ಗೆ ಕೇವಲ ಎರಡು ಮತಗಳು ಮಾತ್ರ ಶಿಫ್ಟ್ ಆಗಿವೆ. ಇತ್ತ ಜಿ.ಟಿ. ದೇವೇಗೌಡರ ಮತ ಕೈತಪ್ಪುವ ಸಾಧ್ಯತೆಯ ನಡುವೆ, ಶಾಸಕ ಯತ್ನಾಳ್ ಬಿಜೆಪಿಗೆ ಮತ ಹಾಕುವುದಾಗಿ ಹೇಳಿರುವುದರಿಂದ ಜೆಡಿಎಸ್‌ಗೆ ಕೇವಲ 20 ಮತಗಳು ಮಾತ್ರ ಸಿಗುವ ಸಾಧ್ಯತೆಯಿದೆ.
-
ವಿಧಾನಸೌಧದಲ್ಲಿ ಮತದಾನಕ್ಕೂ ಮುನ್ನ ಜೆಡಿಎಸ್ ಮೀಟಿಂಗ್!
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು.
-
ಮಾಕ್ ವೋಟಿಂಗ್ ಎಡವಟ್ಟು: ಕಾಂಗ್ರೆಸ್‌ನಿಂದ ಮತದಾನದ ತಂತ್ರಗಾರಿಕೆ ಬದಲಾವಣೆ
ಮಾಕ್ ವೋಟಿಂಗ್‌ನಲ್ಲಿ ಕಾಂಗ್ರೆಸ್‌ನ ಕೆಲವು ಮತಗಳು ಲ್ಯಾಪ್ಸ್ ಆದ ಹಿನ್ನೆಲೆಯಲ್ಲಿ, ನಾಯಕರು ಮೊದಲ ನಾಲ್ಕು ಅಭ್ಯರ್ಥಿಗಳಿಗೆ ತಲಾ 30 ಮತ ಹಾಗೂ 5ನೇ ಅಭ್ಯರ್ಥಿಗೆ 20 ಮತಗಳೊಂದಿಗೆ 120 ಶಾಸಕರ 2ನೇ ಪ್ರಾಶಸ್ತ್ಯದ ಮತ ನೀಡಲು ಹೊಸ ತಂತ್ರ ರೂಪಿಸಿದ್ದಾರೆ.
-
ಬೆಳಿಗ್ಗೆ 11 ಗಂಟೆಯವರೆಗೆ ಶೇ 34.78 ರಷ್ಟು ಮತದಾನ
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಒಟ್ಟು 77 ಮತಗಳು ಚಲಾವಣೆಯಾಗಿದ್ದು, ಶೇಕಡಾ 34.78 ರಷ್ಟು ಮತದಾನ ದಾಖಲಾಗಿದೆ. ಕಾಂಗ್ರೆಸ್ ಶಾಸಕರು ಐದು ಬಸ್‌ಗಳಲ್ಲಿ ಬಿಗಿ ಭದ್ರತೆಯೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.
-
ಶಿಮ್ಲಾ ಮತ್ತು ಚಂಬಾ ರಸ್ತೆ ಅಪಘಾತ: ಒಂಬತ್ತು ಜನರ ದುರ್ಮರಣ
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಕುತೇಡ್ ಸಮೀಪ ಬೊಲೆರೊ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಏಳು ಜನರು ಮೃತಪಟ್ಟರೆ, ಚಂಬಾದಲ್ಲಿ ನಡೆದ ಮತ್ತೊಂದು ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಗಳಲ್ಲಿ ಕ್ರಾಶ್ ಬ್ಯಾರಿಯರ್ ಅಳವಡಿಸದ ಹಿನ್ನೆಲೆಯಲ್ಲಿ ಈ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮತ್ತಷ್ಟು ಓದಿ.
-
ರೆಸಾರ್ಟ್‌ನಿಂದ ವಿಧಾನಸೌಧದತ್ತ ಹೊರಟ ಜೆಡಿಎಸ್ ಶಾಸಕರು
ದೇವನಹಳ್ಳಿಯ ರೆಸಾರ್ಟ್‌ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ವಿಧಾನಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಶೇಷ ಬಸ್ ಮೂಲಕ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ.
-
ವಿಧಾನಸೌಧದ ಗೇಟ್ ಬಳಿ ಸಿದ್ದರಾಮಯ್ಯ ಅವರನ್ನು ತಡೆದ ಎಸ್ಕಾರ್ಟ್ ಸಿಬ್ಬಂದಿ
ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ಸಿಬ್ಬಂದಿಯನ್ನು ಪೊಲೀಸರು ಒಳಗೆ ಬಿಡದ ಕಾರಣ ಉಭಯ ಸಿಬ್ಬಂದಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಹಿಂದೆ ಯಾರಿದ್ದಾರೆ ಗೊತ್ತಾಗಲ್ವಾ ಎಂದು ಸಿಟ್ಟಾದ ಎಸ್ಕಾರ್ಟ್ ಸಿಬ್ಬಂದಿ, ಅಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಗೆ ಬೈದು ತೆರಳಿದ್ದಾರೆ.
-
ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕರು!
ವಿಧಾನಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಅವರ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಸಹ ಮತ ಚಲಾಯಿಸಲು ವಿಧಾನಸೌಧಕ್ಕೆ ಬಂದಿಳಿದಿದ್ದಾರೆ.
-
ಪ್ಯಾರಿಸ್‌ಗೆ ಪ್ರಧಾನಿ ಮೋದಿ ಆಗಮನ
ಜಿ7 ಶೃಂಗಸಭೆ ಮುಗಿಸಿ ಪ್ಯಾರಿಸ್‌ಗೆ ಆಗಮಿಸಿರುವ ಪ್ರಧಾನಿ ಮೋದಿ, ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದ್ದಾರೆ. ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ವಿವಾಟೆಕ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅವರು, ರಕ್ಷಣೆ, ತಂತ್ರಜ್ಞಾನ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗಿನ ಸಹಕಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಮತ್ತಷ್ಟು ಓದಿ.
-
ನಟಿ ರೂಪಿಕಾ ನಿಶ್ಚಿತಾರ್ಥ: ಆಗಸ್ಟ್‌ನಲ್ಲಿ ಅಂಕಿತ್ ಜೊತೆ ವಿವಾಹ
ಕಿರುತೆರೆ ಮತ್ತು ಚಿತ್ರರಂಗದ ಖ್ಯಾತ ನಟಿ ರೂಪಿಕಾ ತಮ್ಮ ಬಹುಕಾಲದ ಗೆಳೆಯ ಅಂಕಿತ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಇವರ ನಿಶ್ಚಿತಾರ್ಥ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಮೂಲತಃ ಬೆಂಗಳೂರಿನವರಾದ ಅಂಕಿತ್ ಸದ್ಯ ಕೆನಡಾದಲ್ಲಿ ನೆಲೆಸಿದ್ದಾರೆ. 'ಲಕ್ಷ್ಮಿ ನಿವಾಸ' ಧಾರಾವಾಹಿ ಖ್ಯಾತಿಯ ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಮತ್ತಷ್ಟು ಓದಿ.
-
ಅನಾರೋಗ್ಯ ಪೀಡಿತ ಡಿಸಿಎಂ ಪರಮೇಶ್ವರ್ ನಿವಾಸಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ
ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿರುವ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯ ವಿಚಾರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ತೆರಳಲಿದ್ದಾರೆ. ಇದೇ ಅನಾರೋಗ್ಯದ ಕಾರಣದಿಂದಾಗಿ ಡಿಸಿಎಂ ಅವರು ಮೊನ್ನೆ ನಡೆದ ರೆಸಾರ್ಟ್ ಸಭೆಗೂ ಕೂಡ ಗೈರಾಗಿದ್ದರು.
-
ಬಿಜೆಪಿ ಅಭ್ಯರ್ಥಿಗೆ ಯತ್ನಾಳ್ ಮತ: ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ
ವಿಧಾನಪರಿಷತ್‌ನ 7 ಸ್ಥಾನಗಳ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಪತ್ರ ಬರೆದಿದ್ದಾರೆ.
-
ವಿಧಾನಸೌಧದತ್ತ ಕಾಂಗ್ರೆಸ್ ಶಾಸಕರು: ರೆಸಾರ್ಟ್‌ನಿಂದ ಐದು ಬಸ್‌ಗಳಲ್ಲಿ ಪ್ರಯಾಣ
ವಂಡರ್ ಲಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಈಗ ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಧಾನಸೌಧದತ್ತ ಹೊರಟಿದ್ದಾರೆ. ಒಟ್ಟು ಐದು ವಿಶೇಷ ಬಸ್‌ಗಳಲ್ಲಿ ಶಾಸಕರು ಒಟ್ಟಾಗಿ ಪ್ರಯಾಣ ಬೆಳೆಸಿದ್ದು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್ಟುನಿಟ್ಟಿನ ಕಾವಲಿನೊಂದಿಗೆ ವಿಧಾನಸೌಧಕ್ಕೆ ಆಗಮಿಸುತ್ತಿದ್ದಾರೆ.
-
ವಿಧಾನಪರಿಷತ್‌ನ 7 ಸ್ಥಾನಗಳಿಗೆ ಮತದಾನ ಆರಂಭ
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಮತದಾನ ಕೇಂದ್ರದ ಹೊರ ಮತ್ತು ಒಳಭಾಗದಲ್ಲಿ ಸಿಸಿಟಿವಿ ಅಳವಡಿಕೆ ಕೂಡ ಮಾಡಲಾಗಿದೆ. ಈಗಾಗಲೇ ಮೂರು ಪಕ್ಷಗಳು ಎಲ್ಲ ತಯಾರಿಯನ್ನು ಮಾಡಿಕೊಂಡಿದೆ.
-
JW ಮ್ಯಾರಿಯೇಟ್ ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಜೆಡಿಎಸ್ ಶಾಸಕರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯಿರುವ JW ಮ್ಯಾರಿಯೇಟ್ ರೆಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್ ಶಾಸಕರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ತಡರಾತ್ರಿವರೆಗೂ ಸಭೆ ನಡೆಸಿ, ಮತದಾನದ ಕುರಿತು ಮಾಹಿತಿ ನೀಡಿ ತೆರಳಿದ್ದಾರೆ. ಬೆಳಿಗ್ಗೆ 9 ಗಂಟೆಯ ನಂತರ ರೆಸಾರ್ಟ್‌ನಿಂದ ಹೊರಡಲಿರುವ ಶಾಸಕರು, ಅಲ್ಲಿಂದ ವಿಶೇಷ ಬಸ್ ಮೂಲಕ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ.
-
ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ: ಮತದಾನಕ್ಕೆ ಕ್ಷಣಗಣನೆ
ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭವಾಗಲಿದೆ. ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಭದ್ರತೆ ಹಾಗೂ ಪಾರದರ್ಶಕತೆಗಾಗಿ ಮತದಾನ ಕೇಂದ್ರದ ಒಳ ಹಾಗೂ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
Published On - Jun 18,2026 8:35 AM




