AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News Today Live: ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾಪ: ಜನ ಸಾಮಾನ್ಯರ ಜೇಬಿಗೆ ಬೀಳುತ್ತಾ ಕತ್ತರಿ?

Karnataka News Today Live Updates: ಪ್ರತಿಷ್ಠೆಯಾಗಿದ್ದ ಪರಿಷತ್​ ಚುನಾವಣೆ ಭಾರೀ ಕುತೂಹಲ ಮೂಡಿಸಿತ್ತು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಡಿತ್ತು . ಇದೀಗ ಕಾಂಗ್ರೆಸ್​​​ ಗೆಲುವಿನ ಪತಾಕೆ ಹಾರಿಸಿದೆ. ಇದರ ನಡುವೆ ಜೆಡಿಎಸ್​​​ಗೆ​​ ಭಾರೀ ಮುಖಭಂಗವಾಗಿದೆ. ಇನ್ನು ಇರಾನ್, ಅಮೆರಿಕ ಶಾಂತಿ ಒಪ್ಪಂದದ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮತ್ತೊಂದು ಕಡೆ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಮೇಕೆದಾಟು ಜಲಾಶಯ ಯೋಜನೆ ಬಗ್ಗೆಯೂ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದೆ.

Breaking News Today Live: ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾಪ: ಜನ ಸಾಮಾನ್ಯರ ಜೇಬಿಗೆ ಬೀಳುತ್ತಾ ಕತ್ತರಿ?
VidhanasoudhaImage Credit source: Getty Images
ಅಕ್ಷಯ್​ ಪಲ್ಲಮಜಲು​​
| Edited By: |

Updated on:Jun 19, 2026 | 9:45 PM

Share

ಬೆಂಗಳೂರು, ಜೂ.19: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗಿದ್ದ, ವಿಧಾನ ಪರಿಷತ್​​ ಚುನಾವಣೆಗೆ ಕೊನೆಗೂ ತೆರೆಬಿದ್ದಿದೆ. ಆಡಳಿತ ಪಕ್ಷ ಕಾಂಗ್ರೆಸ್​​ಗೆ ಗೆಲುವಿನ ಸಂತಸ ತಂದರೆ, ವಿರೋಧ ಪಕ್ಷಗಳಿಗೆ ಸೋಲಿನ ರುಚಿ ಕಂಡಿದೆ. ಅದರಲ್ಲೂ ಕಾಂಗ್ರೆಸ್​​ ಹಾಗೂ ಜೆಡಿಎಸ್​ ನಡುವೆ ಇದ್ದ ಪೈಪೋಟಿಯಲ್ಲಿ ಜೆಡಿಎಸ್​​ ಸೋತಿದೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್​​​​.ಡಿ ಕುಮಾರಸ್ವಾಮಿ  ಅವರು ತಮ್ಮದೇ ಪಕ್ಷದ ಶಾಸಕರ ವಿರೋಧ ಅಸಮಾನಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಈ ಬಗ್ಗೆ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗಳು ನಡೆದಿದೆ. ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಉಭಯ ರಾಜ್ಯಗಳ ನಡುವೆ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಸರ್ಕಾರವು ಯೋಜನೆಯನ್ನು ಬಲವಾಗಿ ವಿರೋಧಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಕ್ಯಾತೆಗೆ ತಕ್ಕ ತಿರುಗೇಟು ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ಧ ಒಪ್ಪಂದ ಹಾಗೂ ಶಾಂತಿ ಸ್ಥಾಪನೆಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಹೊತ್ತಿನ  ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.

LIVE NEWS & UPDATES

The liveblog has ended.
  • 19 Jun 2026 09:27 PM (IST)

    ನಟಿ ರುಕ್ಮಿಣಿ ವಸಂತ ಫೋಟೋ ಡೀಪ್​ಫೇಕ್​ ಮಾಡಿದ್ದವರು ಬಂಧನ

    ನಟಿ ರುಕ್ಮಿಣಿ ವಸಂತ ಫೋಟೋ ಡೀಪ್​ಫೇಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಸೈಬರ್ ಕಮಾಂಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್(33), ರಂಜಿತ್(25), ಬಾಗಲಕೋಟೆ ಮೂಲದ ರವಿಕುಮಾರ್(24) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್​ಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಎಐ ತಂತ್ರಜ್ಞಾನ ಬಳಸಿ ವಿಡಿಯೋ, ಫೋಟೋ ವೈರಲ್ ಮಾಡಿದ್ದರು. ಈ ಸಂಬಂಧ ನಟಿ ರುಕ್ಮಿಣಿ ವಸಂತ ದೂರು ನೀಡಿದ್ದರು.

  • 19 Jun 2026 07:30 PM (IST)

    ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ

    ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಇಮದು (ಜೂನ್ 19) ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನೆ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರಿಗೆ ನಿಗಮಗಳು ಪ್ರಸ್ತಾಪಿಸಿವೆ. ಡೀಸೆಲ್​ ದರ ಮತ್ತು ಸಿಬ್ಬಂದಿ ಹೆಚ್ಚಳವಾಗಿದೆ. ಜೊತೆಗೆ ಸಿಬ್ಬಂದಿ ವೇತನ ಬಾಕಿ 1,271 ಕೋಟಿ ರೂಪಾಯಿ ಪೈಕಿ 450 ಕೋಟಿ ರೂ. ಬಿಡುಗಡೆ ಆಗಿದೆ. ಆದ್ದರಿಂದ ಪ್ರಯಾಣದ ದರ ಹೆಚ್ಚಳಕ್ಕೆ ಅನುಮತಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. 2025ರ ಜನವರಿ 5ರಂದು ಬಸ್​ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಡೀಸೆಲ್​ ಬೆಲೆ ಏರಿಕೆಯಿಂದ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದು, ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂದು ಕಾದುನೋಡಬೇಕಿದೆ.

  • 19 Jun 2026 06:22 PM (IST)

    ಬಿಡದಿ ಟೌನ್​ಶಿಪ್‌ ನಿರ್ಮಾಣಕ್ಕೆ ವಿರೋಧದ ನಡುವೆಯೂ ಚೆಕ್ ವಿತರಣೆ

    ಬಿಡದಿ ಟೌನ್​ಶಿಪ್‌ ನಿರ್ಮಾಣಕ್ಕೆ ಭಾರೀ ವಿರೋಧದ ನಡುವೆಯೂ ಭೂಮಿ ನೀಡಿದ ಕೆಲ ರೈತರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ.ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿರೋ ರೈತರಿಗೆ ರಾಮನಗರದ GBDA ಕಚೇರಿಯಲ್ಲಿ ಕೆಂಪಯ್ಯನಪಾಳ್ಯ ಗ್ರಾಮದ 10 ರೈತರಿಗೆ ಸಾಂಕೇತಿಕವಾಗಿ ಪರಿಹಾರದ ಚೆಕ್ ನೀಡಲಾಯ್ತು.ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಸಕ H.C.ಬಾಲಕೃಷ್ಣ, GBDA ಅಧ್ಯಕ್ಷ ಗಾಣಕಲ್ ನಟರಾಜ್ ನೇತೃತ್ವದಲ್ಲಿ ವಿತರಣೆ ಮಾಡಲಾಯ್ತು

  • 19 Jun 2026 06:18 PM (IST)

    57 ಆರೋಪಿಗಳನ್ನ ಅರೆಸ್ಟ್​ ಮಾಡಿದ ಪೊಲೀಸರು

    ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬರೋಬ್ಬರಿ 57 ಆರೋಪಿಗಳನ್ನು ಬೆಂಗಳೂರಿನ ಪೂರ್ವ ವಿಭಾಗ ಪೊಲಿಸರು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಕೋರ್ಟ್​ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಕೋರ್ಟ್​ ವಾರಂಟ್​ ಜಾರಿ ಮಾಡಿತ್ತು. ಹೀಗಾಗಿ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • 19 Jun 2026 05:44 PM (IST)

    ಗ್ಯಾರಂಟಿಗಳ ಬಗ್ಗೆ ಅಧಿಕಾರಿಗಳೀಗೆ ಸಿಎಂ ಮಹತ್ವದ ಸೂಚನೆ

    ಗ್ಯಾರಂಟಿ ಯೋಜನೆ ಪರಿಷ್ಕರಣೆ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್, ಅಧಿಕಾರಿಗಳಿಗೆ ಮಹತ್ವದ ಕೆಲ ಸೂಚನೆಗಳನ್ನು ನೀಡಿದ್ದಾರೆ. ಬೇರೆ ರಾಜ್ಯದವರಿಗೆ ಯೋಜನೆಯ ಲಾಭ ಆಗ್ತಿದೆ, ಅದನ್ನ ತಡೆಯಬೇಕು. ಮೃತಪಟ್ಟವರ ಖಾತೆಗೆ ಹೋಗುತ್ತಿರುವ ಗೃಹಲಕ್ಷ್ಮೀ ಹಣಕ್ಕೆ ಬ್ರೇಕ್ ಹಾಕಬೇಕು. ಇನ್ನು ಪ್ರಮುಖವಾಗಿ ಒಬ್ಬ ಅರ್ಹ ಫಲಾನುಭವಿಗೂ ತೊಂದರೆ ಆಗಬಾರದು. ಹಾಗೇ ಅರ್ಹ ಫಲಾನುಭವವಿಗಳಿಗೆ ನೆರವಾಗಲು ಪ್ರೋತ್ಸಾಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • 19 Jun 2026 05:16 PM (IST)

    ಸಭೆಗೆ ಇಬ್ಬರು ಶಾಸಕರು ಗೈರು

    ಪರಿಷತ್​ ಚುನಾವಣೆಯಲ್ಲಿ JDS ಶಾಸಕರಿಂದ ಅಡ್ಡ ಮತದಾನ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಸಭೆ ನಡೆಸಿದ್ದು, ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು (ಜೂನ್ 19) ಬೆಂಗಳೂರಿನಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ 16 ಶಾಸಕರು ಭಾಗಿಯಾಗಿದ್ದಾರೆ. ಆದ್ರೆ, ಇನ್ನುಳಿದ ಇಬ್ಬರು  ಗೈರಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ. ಜಿ.ಟಿ.ದೇವೇಗೌಡ, ಹೆಚ್​.ಡಿ.ರೇವಣ್ಣ, ಸಭೆಗೆ ಗೈರಾಗಿದ್ದಾರೆ.

  • 19 Jun 2026 02:47 PM (IST)

    ಕುಮಾರಸ್ವಾಮಿ ನಿವಾಸದಲ್ಲಿ ಜೆಡಿಎಸ್ ಶಾಸಕಾಂಗ ಸಭೆ

    ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಪರಿಷತ್ ಅಖಾಡದಲ್ಲಿ ಜೆಡಿಎಸ್ ಪಕ್ಷದ ಕೆಲವು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ (ಕೈ) ಅಭ್ಯರ್ಥಿಗಳಿಗೆ ‘ಅಡ್ಡ ಮತದಾನ’ ಮಾಡಿರುವುದು ದಳಪತಿಗಳಿಗೆ ಭಾರಿ ಆಘಾತ ನೀಡಿದೆ. ಈ ಆಘಾತದ ಬೆನ್ನಲ್ಲೇ ಜೆಡಿಎಸ್ ವರಿಷ್ಠರು ಅಲರ್ಟ್ ಆಗಿದ್ದು, ತಡರಾತ್ರಿ ತುರ್ತು ಆತ್ಮಾವಲೋಕನ ಸಭೆ ಕರೆಯಲಾಗಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ತುರ್ತು ಸಭೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಪಕ್ಷದ ಶಾಸಕರು ನಡೆಸಿದ್ದಾರೆ ಎನ್ನಲಾದ ದ್ರೋಹದ ನಡೆಗೆ ಇಬ್ಬರೂ ನಾಯಕರು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 19 Jun 2026 01:56 PM (IST)

    ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ನಾಯಕನ ದಾದಾಗಿರಿ: ಬೈಕ್ ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ತೇಜಸ್ ಅರೆಸ್ಟ್

    ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಭಾಗದಲ್ಲಿ ರಾಜಕೀಯ ಪ್ರಭಾವದ ಹಿನ್ನೆಲೆಯುಳ್ಳ ಯೂತ್ ಕಾಂಗ್ರೆಸ್ ಮುಖಂಡನೊಬ್ಬ ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ಗೂಂಡಾಗಿರಿ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಐದಳ್ಳಿ ಗ್ರಾಮದಲ್ಲಿ ಬೈಕ್ ಸವಾರನೊಬ್ಬನ ಮೇಲೆ ಲಾಂಗ್‌ ತೋರಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಆಲ್ದೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ತೇಜಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • 19 Jun 2026 11:48 AM (IST)

    ಕೋಲಾರ ಮತ್ತು ಧಾರವಾಡ ಜಿಲ್ಲಾ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ

    ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಇಂದೊಂದು ಅತ್ಯಂತ ಆಘಾತಕಾರಿ ದಿನವಾಗಿದ್ದು, ಎರಡು ಪ್ರಮುಖ ಜಿಲ್ಲಾ ನ್ಯಾಯಾಲಯಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆಗಳು ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೋಲಾರ ಜಿಲ್ಲಾ ನ್ಯಾಯಾಲಯ ಹಾಗೂ ಧಾರವಾಡ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತರು ಬೆದರಿಕೆ ಒಡ್ಡಿದ್ದು, ಇಡೀ ನ್ಯಾಯಾಲಯದ ಆವರಣಗಳು ಸದ್ಯ ಪೊಲೀಸ್ ಸುಪರ್ದಿಗೆ ಒಳಪಟ್ಟಿವೆ. ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಮುಂಜಾನೆ ಅಧಿಕೃತ ಇ-ಮೇಲ್ (E-mail) ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ. ಮೇಲ್‌ನಲ್ಲಿ ಕೋರ್ಟ್ ಆವರಣವನ್ನು ಉಡಾಯಿಸುವುದಾಗಿ ಎಚ್ಚರಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಪೊಲೀಸರು ನ್ಯಾಯಾಲಯದ ಎಲ್ಲಾ ಕಾರ್ಯಕಲಾಪಗಳನ್ನು ತಕ್ಷಣವೇ ಸ್ಥಗಿತಗೊಳಿಸಿದರು. ಕೋರ್ಟ್‌ನಲ್ಲಿದ್ದ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿಗಳನ್ನು ತಕ್ಷಣವೇ ಆವರಣದಿಂದ ಹೊರಗೆ ಕಳುಹಿಸಲಾಗಿದೆ. ಸದ್ಯ ಕೋಲಾರ ಗಲ್ ಪೇಟೆ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ (Bomb Disposal Squad) ಇಡೀ ಕಾಂಪ್ಲೆಕ್ಸ್‌ನಲ್ಲಿ ಜಾಲಾಡುತ್ತಿದ್ದಾರೆ.

    ಧಾರವಾಡ ಜಿಲ್ಲಾ ಕೋರ್ಟ್‌ನ ಆಡಳಿತ ಕಚೇರಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ನೇರ ಫೋನ್ ಕರೆ (Threat Call) ಬಂದಿದೆ. “ಕೋರ್ಟ್ ಮತ್ತು ಕೋರ್ಟ್ ಕಾಂಪ್ಲೆಕ್ಸ್‌ನ ಪ್ರಮುಖ ಜಾಗದಲ್ಲಿ ಬಾಂಬ್ ಇಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಬ್ಲಾಸ್ಟ್ ಆಗಬಹುದು” ಎಂದು ಅಪರಿಚಿತ ಹೆದರಿಸಿದ್ದಾನೆ. ಈ ಕರೆಯಿಂದಾಗಿ ಇಡೀ ನ್ಯಾಯಾಲಯದ ಸುತ್ತಮುತ್ತ ಕ್ಷಣಮಾತ್ರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಕೋರ್ಟ್‌ನಲ್ಲಿದ್ದ ಕಕ್ಷಿದಾರರು ಮತ್ತು ವಕೀಲರು ಗಾಬರಿಯಿಂದ ಆವರಣದಿಂದ ಹೊರಗೆ ಓಡಿ ಬಂದಿದ್ದಾರೆ. ಪೊಲೀಸರು ಇಡೀ ಏರಿಯಾವನ್ನು ಬಂದ್ ಮಾಡಿ ತಪಾಸಣೆ ನಡೆಸುತ್ತಿದ್ದಾರೆ.

  • 19 Jun 2026 11:20 AM (IST)

    ಚಿನ್ನದ ಬೆಲೆ ಶುಕ್ರವಾರ ಭರ್ಜರಿ ಇಳಿಕೆ ಕಂಡಿದೆ

    ಹಳದಿ ಲೋಹದ ಬೆಲೆಯಲ್ಲಿ ದಿಢೀರ್ ಭಾರಿ ಕುಸಿತ ಕಂಡಿದ್ದು, ಚಿನ್ನ ಖರೀದಿದಾರರಿಗೆ ಮತ್ತು ಸಾರ್ವಜನಿಕರಿಗೆ ಇಂದು ದೊಡ್ಡ ರಿಲೀಫ್ ಸಿಕ್ಕಿದೆ. ಶುಕ್ರವಾರದ ಮಾರುಕಟ್ಟೆ ವಹಿವಾಟಿನಲ್ಲಿ ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3,550 ರೂ. ನಷ್ಟು ದಾಖಲೆ ಮಟ್ಟದ ಕುಸಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಆರ್ಥಿಕ ಏರುಪೇರುಗಳ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಪಾತಾಳಕ್ಕೆ ಕುಸಿದಿವೆ.

  • 19 Jun 2026 11:05 AM (IST)

    ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ

    ಚಾಮರಾಜನಗರ: ಜಿಲ್ಲೆಯಲ್ಲಿ ಮಹನೀಯರ ಭಾವಚಿತ್ರ ಹಾಗೂ ನಾಮಫಲಕಗಳಿಗೆ ಹಾನಿ ಮಾಡುವ ವಿಕೃತ ಮನಸ್ಸುಗಳ ಕೃತ್ಯಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮೊನ್ನೆಯಷ್ಟೇ ನಡೆದಿದ್ದ ಘಟನೆಯೊಂದರ ಬೆನ್ನಲ್ಲೇ, ಇದೀಗ ಜಿಲ್ಲೆಯ ಹೊಂಗನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ ಮಾಡಿರುವ ಮತ್ತೊಂದು ನಿಂದನೀಯ ಘಟನೆ ಬೆಳಕಿಗೆ ಬಂದಿದೆ.

  • 19 Jun 2026 10:18 AM (IST)

    ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಿಎಂ ಅಖಾಡ

    ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ಭಾರಿ ಸವಾಲಾಗಿ ಪರಿಣಮಿಸಿರುವ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ (Guarantee Schemes) ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಯೋಜನೆಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯಲು ಮತ್ತು ನಿಜವಾದ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಇಂದು ಉನ್ನತ ಮಟ್ಟದ ಸಭೆ ಕರೆಯಲಾಗಿದೆ.

  • 19 Jun 2026 09:50 AM (IST)

    ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು!

    ರಾಜಧಾನಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರ ಮೇಲೆ ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಹರಿದ ಪರಿಣಾಮ, ಅವರು ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಗಾರೆ ಕೆಲಸ ಮಾಡಿಕೊಂಡಿದ್ದ ರಾಜು (58) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ಜ್ಞಾನಭಾರತಿ ಸಮೀಪದ ಮಂಗನಹಳ್ಳಿ ಕ್ರಾಸ್ (Manganahalli Cross) ಬಳಿ ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

  • 19 Jun 2026 09:45 AM (IST)

    ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು; ಮೂವರಿಗೆ ಗಂಭೀರ ಗಾಯ!

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಸೇತುವೆ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಸೇತುವೆಯ ತಡೆಗೋಡೆಗೆ ಭೀಕರವಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರು ಕೊಳ್ಳೇಗಾಲ ನ್ಯಾಯಾಲಯದ (Kollegal Court) ಸಿಬ್ಬಂದಿ ಎಂದು ಗುರುತಿಸಲಾಗಿದೆ.

  • 19 Jun 2026 09:13 AM (IST)

    ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

    ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.  ವಿಧಾನ ಪರಿಷತ್ (Legislative Council) ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವುದರೊಂದಿಗೆ, ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ ಗಣನೀಯವಾಗಿ ಹೆಚ್ಚಾಗಿದ್ದು, ಸ್ಪಷ್ಟ ಬಹುಮತದ ಗಡಿಯನ್ನು ದಾಟಿದೆ.

  • 19 Jun 2026 09:07 AM (IST)

    ಜಿ.ಟಿ. ದೇವೇಗೌಡರಿಗೆ ಪರೋಕ್ಷ ಟಾಂಗ್ ಕೊಟ್ಟ ಕುಮಾರಸ್ವಾಮಿ

    ವಿಧಾನ ಪರಿಷತ್ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮೈಸೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ. “ಚುನಾವಣೆಯ ಫಲಿತಾಂಶ ನನಗೊಂದು ಹೊಸ ಅನುಭವ ನೀಡಿದ್ದು, ಸ್ವಂತ ಪಕ್ಷದವರೇ ನನಗೆ ದೊಡ್ಡ ಸಂದೇಶ ಕೊಟ್ಟಿದ್ದಾರೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಜೊತೆಗೆ ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

Published On - Jun 19,2026 9:03 AM

Follow Us