ಮನೆ ಮೇಲೆ ಕಾಂಪೌಂಡ್ ಕುಸಿದು ಅಣ್ಣ, ತಂಗಿ ಸಾವು; ನೆಲಮಂಗಲದ ಬಿನ್ನಮಂಗಲದಲ್ಲಿ ದುರ್ಘಟನೆ
ವ್ಯಾಸಂಗ ಮಾಡಲು ಮೂವರು ಈ ಮನೆಯಲ್ಲಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ. ತಗ್ಗು ಪ್ರದೇಶದಲ್ಲಿದ್ದ ಶೀಟ್ ಮನೆ ಮೇಲೆ ಕಾಂಪೌಂಡ್ ಬಿದ್ದು ಈ ದುರಂತ ಸಂಭವಿಸಿದ್ದು, ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಕಾಂಪೌಂಡ್ ಮನೆ ಮೇಲೆ ಬಿದ್ದಿದೆ.
ಬೆಂಗಳೂರು: ಮನೆ ಮೇಲೆ ಕಾಂಪೌಂಡ್ ಕುಸಿದು ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬಿನ್ನಮಂಗಲದಲ್ಲಿ ನಡೆದಿದೆ. ಜೋರಾದ ಮಳೆ(Karnataka Monsoon) ಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ವೇಣುಗೋಪಾಲ(22) ಮತ್ತು ಕಾವ್ಯ(20) ಮೃತಪಟ್ಟಿದ್ದಾರೆ. ಇನ್ನು ಇದೇ ಮನೆಯಲ್ಲಿದ್ದ ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾಸಂಗ ಮಾಡಲು ಮೂವರು ಹನುಮಂತರಾಯಪ್ಪಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ. ಕೃಷ್ಣಪ್ಪ ಎಂಬುವವರಿಗೆ ಸೇರಿದ ಜಾಗದಲ್ಲಿ ನಿರ್ಮಾಣ ಮಾಡಿದ್ದ ಕಾಂಪೌಂಡ್ ತಗ್ಗು ಪ್ರದೇಶದಲ್ಲಿದ್ದ ಶೀಟ್ ಮನೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಇಬ್ಬರ ಶವ ಹೊರಕ್ಕೆ ತೆಗೆಯಲಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ವಿಪತ್ತು ನಿರ್ವಹಣಾ ಪರಿಹಾರ ಯೋಜನೆ ಅಡಿಯಲ್ಲಿ ಮೃತರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಮಳೆಯ ಆರ್ಭಟದಿಂದ ಮುಂಬೈನಲ್ಲಿ 33 ಜನ ಸಾವು ಭಾರತದ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಮುಂಬೈ, ರಾಷ್ಟ್ರ ರಾಜಧಾನಿ ದೆಹಲಿ, ಗುಜರಾತ್, ಕೇರಳ, ಕರ್ನಾಟಕ, ಉತ್ತರಾಖಂಡ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದ ಮುಂಬೈನಲ್ಲಿ 33 ಜನರು ಸಾವನ್ನಪ್ಪಿದ್ದು, ಉತ್ತರಾಖಂಡದಲ್ಲಿ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲೂ ಇಂದು ಮಳೆ ಮುಂದುವರೆದಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲೂ ಇನ್ನು ಮೂರು ದಿನ ಮಳೆ ಹೆಚ್ಚಾಗಲಿದೆ. ಜುಲೈ 21ರವರೆಗೆ ಮಲೆನಾಡು, ಕರಾವಳಿ, ಕೊಡಗು ಸೇರಿದಂತೆ ಬಹುತೇಕ ಕಡೆ ಮಳೆಯಾಗಲಿದೆ.
ಮುಂಬೈನಲ್ಲಿ ನಾಲ್ಕೈದು ದಿನಗಳಿಂದ ಬಿಡದೆ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಕೆರೆಯಂತಾಗಿವೆ. ರೈಲು, ಬಸ್ ಸಂಚಾರಕ್ಕೆ ತೊಂದರೆಯಾಗಿದ್ದು, ಮಾರ್ಗವನ್ನು ಬದಲಿಸಲಾಗಿದೆ. ಭಾನುವಾರ ಸುರಿದ ಸಿಡಿಲು ಸಹಿತ ಮಳೆಗೆ ಮುಂಬೈನಲ್ಲಿ 33 ಜನರು ಬಲಿಯಾಗಿದ್ದಾರೆ. ಮುಂಬೈ ಸುತ್ತಮುತ್ತ ಭಾರೀ ಭೂಕುಸಿತವಾಗುತ್ತಿದೆ. ಇನ್ನೂ 24 ಗಂಟೆಗಳ ಕಾಲ ಮುಂಬೈ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಕ್ಲಾಸ್ ಕೇಳಲು ಮನೆ ಮಹಡಿ ಏರಿದ ವಿದ್ಯಾರ್ಥಿಗಳು; ಗಾಳಿ, ಮಳೆಯಲ್ಲಿ ಪರದಾಟ
Mumbai Rains: ಮಳೆಯ ಆರ್ಭಟದಿಂದ ಮುಂಬೈನಲ್ಲಿ 33 ಜನ ಸಾವು; ಉತ್ತರಾಖಂಡದಲ್ಲಿ ಭಾರೀ ಭೂಕುಸಿತ
Published On - 9:38 am, Tue, 20 July 21