
ಬೆಂಗಳೂರು, (ಮೇ 14): ಕಳೆದು ತಿಂಗಳು ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ (Assembly By Elections) ಕಾಂಗ್ರೆಸ್ (Congress) ಗೆಲುವು ಸಾಧಿಸಿದೆ. ಹೌದು…ಕಾಂಗ್ರೆಸ್ ಶಾಸರಾಗಿದ್ದ ಎಚ್ವೈ ಮೇಟಿ ನಿಧನದಿಂದ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆದಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆರೆಡು ವಿಧಾನಸಭಾ ಕ್ಷೇತ್ರಗಳಿ ಉಪಚುನಾವಣೆ ಎದುರಾಗಿದೆ. ಹೌದು…ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದ್ದು, ದಿನಾಂಕ ಘೋಷಣೆ ಮೊದಲೇ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ ಅವರು ಮೊನ್ನೇ ಅಷ್ಟೇ ನಿಧನರಾಗಿದ್ದಾರೆ. ಇದರಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರ ಖಾಲಿಯಾಗಿದ್ದು, ಇದಕ್ಕೆ ಉಪಚುನಾವಣೆ ನಡೆಯಬೇಕಿದೆ. 2023ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ಸುಧಾಕರ್ ಅವರು ಸಿದ್ದರಾಮ್ಯಯ ಸಂಪುಟದಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದರು. ಆದ್ರೆ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಧಾಕರ್ ಅವರು ಚಿಕಿತ್ಸೆ ಫಲಿಸದೇ ಮೇ 11ರಂದು ನಿಧನರಾಗಿದ್ದು, ಇದೀಗ ಹಿರಿಯೂರ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರಿಂದ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಇದಕ್ಕೆ ಉಪಚುನಾವಣೆ ನಡೆಯಬೇಕಿದೆ. ಇದರಿಂದ ಧಾರವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿಚಾರವಾಗಿ ಅನೇಕ ಆಕಾಂಕ್ಷಿಗಳು ಎದ್ದು ಕೂತಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿಯೇ ಹಲವಾರು ಆಕಾಂಕ್ಷಿಗಳು ಉಪ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದ್ದಾರೆ.
ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವಿನಯ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಸುದ್ದಿ ಕಾವು ಪಡೆದುಕೊಂಡಿದೆ. ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿ ಯಾರೆಂಬ ಚರ್ಚೆಗಳು ಜೋರಾಗಿವೆ. ಇನ್ನೊಂದೆಡೆ ಉಭಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ವರಿಷ್ಠರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದರೆ ಮತ್ತೊಂದೆಡೆ ಇಂಥವರೇ ಅಭ್ಯರ್ಥಿಯಾಗಲಿ ಎಂಬ ಅಭಿಪ್ರಾಯವನ್ನು ಕಾರ್ಯಕರ್ತರ ಪಡೆ ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್ ಪಕ್ಷವು ವಿನಯ ಕುಲಕರ್ಣಿ ಅವರಿಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಹೀಗಾಗಿ ಚುನಾವಣೆ ತಯಾರಿ ಚರ್ಚೆ ಅಲ್ಲಿ ಅಷ್ಟೊಂದು ಬಿರುಸುಗೊಂಡಿಲ್ಲ. ಇನ್ನು ಅಭ್ಯರ್ಥಿ ಬಗ್ಗೆ ಚರ್ಚೆಗಳಿಲ್ಲ. ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಶಾಸಕ ಜನಾರ್ಧನ ರೆಡ್ಡಿ ಅವರಂತೆ ವಿನಯ ಕುಲಕರ್ಣಿ ಅವರಿಗೂ ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಸಿಗಲಿದೆ. ಹೀಗಾಗಿ ಉಪಚುನಾವಣೆ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂಬ ಲೆಕ್ಕದಲ್ಲಿ ಕೈ ನಾಯಕರಿದ್ದಾರೆ. ಇದರ ಹೊರತಾಗಿಯೂ ಚುನಾವಣೆ ಎದುರಿಸುವುದು ಅನಿವಾರ್ಯವಾದಲ್ಲಿ ಯಾರಿಗೆ ಟಿಕೆಟ್ ಕೊಡಬಹುದು ಎಂಬ ಕುತೂಹಲವಂತೂ ಎಲ್ಲರಲ್ಲೂ ಇದೆ. ಸದ್ಯದ ಮಾಹಿತಿ ಪ್ರಕಾರ ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಇಂಗಿತ ಕೆಲ ನಾಯಕರದ್ದಾಗಿದೆ. ಇದರ ಹೊರತಾಗಿ ವಿನಯ ಕುಟುಂಬಕ್ಕೆ ಟಿಕೆಟ್ ಬೇಡವೆಂಬ ಅಭಿಪ್ರಾಯ ಬಂದಲ್ಲಿ ಯಾರು ಸೂಕ್ತ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ತವನಪ್ಪ ಅಷ್ಟಗಿ ಅವರ ಹೆಸರಿದೆಯಾದರೂ ಅವರು ಈಗಷ್ಟೆ ಪಕ್ಷಕ್ಕೆ ಬಂದವರು ಎಂಬ ಅಪಸ್ವರ ಏಳಬಹುದು. ಹೀಗಾಗಿ ಕೊನೆಯದಾಗಿ ವಿನಯ ಅವರ ಪತ್ನಿ ಶಿವಲೀಲಾ ಅವರ ಹೆಸರೇ ಅಂತಿಮವಾಗಬಹುದು.
ಬಿಜೆಪಿ ವಲಯದಲ್ಲಿ ಮಾತ್ರ ಉಪಚುನಾವಣೆ ಪಕ್ಕಾ ಎಂಬ ಲೆಕ್ಕದಲ್ಲಿಯೇ ಮುಂದಡಿ ಇಟ್ಟಿದೆ. ಈಗಾಗಲೇ ಗ್ರಾಮೀಣ ಕ್ಷೇತ್ರದ 234 ಬೂತ್‌ಗಳ ಅಧ್ಯಕ್ಷರು, ಪ್ರಮುಖರ ಅಭ್ಯಾಸವರ್ಗವನ್ನು ಮುಗಿಸಿದ್ದು, ಉಪಚುನಾವಣೆ ಗೆಲ್ಲಲು ಏನೇನು ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುವ ಜತೆಗೆ ಅಭಿಪ್ರಾಯಗಳನ್ನೂ ಪಡೆಯುತ್ತಿದೆ. ಉಪಚುನಾವಣೆಗೆ ಬಿಜೆಪಿ ಹುರಿಯಾಳು ಯಾರು ಎಂಬುದರ ಮೇಲೆ ಈಗಾಗಲೇ ಪಕ್ಷದ ಆಂತರಿಕ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿವೆ. ಮಾಜಿ ಶಾಸಕ ಅಮೃತ ದೇಸಾಯಿ ಅವರಿಗೆ ಪುನಃ ಟಿಕೆಟ್ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಹಲವರು ಇದ್ದಾರೆ. ಆದರೆ, ಇವರಿಗೆ ಪೈಪೋಟಿ ಎಂಬಂತೆ ಕೆಲವರು ತಮಗೂ ಒಂದು ಅವಕಾಶ ಕೊಡಿ ಎಂಬ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಸಾಮಾಜಿಕ ಹೋರಾಟಗಾರ ಮಂಜುನಾಥ ಮಕ್ಕಳಗೇರಿ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ ಇವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ.
ಈ ಮಧ್ಯೆ ಸವಿತಾ ಅಮರಶೆಟ್ಟಿಗೆ ಒಂದು ಅವಕಾಶ ಸಿಕ್ಕರೆ ಒಳಿತು ಎಂಬ ಮಾತುಗಳೊಂದಿಗೆ ಯೋಗೀಶಗೌಡ ಗೌಡರ ಪ್ರಕರಣದಲ್ಲಿ ಕಾನೂನು ಹೋರಾಟದ ನೇತೃತ್ವ ವಹಿಸಿದ್ದ ಬಸವರಾಜ ಕೊರವರ ಅಭ್ಯರ್ಥಿಯಾದರೆ ಉತ್ತಮ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಅಚ್ಚರಿ ಎಂದರೆ ಆಕಾಂಕ್ಷಿಗಳೆಲ್ಲರೂ ತಮಗೆ ಟಿಕೆಟ್ ಸಿಕ್ಕರೆ ಗೆದ್ದು ಬರೋದು ಖಚಿತ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.
ಒಟ್ಟಿನಲ್ಲಿ ಖಾಲಿಯಾಗಿರುವ ಎರಡು ಕ್ಷೇತ್ರಗಳು ಕಾಂಗ್ರೆಸ್ ಪಾಲಿನವು. ಹೀಗಾಗಿ ಉಪಚುನಾವಣೆಯಲ್ಲಿ ಯಾರಿಗೆ ಒಲಿಯುತ್ತೆ ಜಯ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ