ಉಡುಪಿಯ ಹಕ್ಲಾಡಿಯಲ್ಲೊಂದು ಮೊಬೈಲ್ ಹಾಲು ಡೈರಿ: ಏನಿದರ ವಿಶೇಷ?
ಎರಡು ದಶಕ ಪೂರೈಸಿದ ಹಕ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪ್ರಥಮ ಬಾರಿ ಹೈನುಗಾರರಿಂದ ನೇರವಾಗಿ ಹಾಲು ಸಂಗ್ರಹಿಸುವ ವಾಹನ ಕಾರ್ಯಾಚರಣೆ ಮಾಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಳ, ಗುಣಮಟ್ಟದ ಹಾಲು ಸಂಗ್ರಹ, ಹೈನುಗಾರರಿಗೆ ಡೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಆಟೋ ಗೂಡ್ಸ್ ವಾಹನದಲ್ಲಿ ಹಕ್ಲಾಡಿಯಲ್ಲಿ ಹಾಲು ಸಂಗ್ರಹಣೆ ಆರಂಭಿಸಲಾಗಿದೆ.
ಉಡುಪಿ, ಅಕ್ಟೋಬರ್ 18: ಅದು ಉಡುಪಿ ಜಿಲ್ಲೆಯ (Udupi) ಅತ್ಯಂತ ಹಿಂದುಳಿದ ತಾಲೂಕು ಬೈಂದೂರು (Byndoor) ಎಂಬಲ್ಲಿರುವ ಪ್ರದೇಶ. ಅಲ್ಲಿ ಹೈನುಗಾರಿಕೆಯನ್ನು (Dairy farming) ನೆಚ್ಚಿಕೊಂಡ ಸಾಕಷ್ಟು ಕುಟುಂಬಗಳಿವೆ. ಹಾಲು ಮಾರಿ ಬರುವ ಹಣದಿಂದಲೇ ಜೀವನ ನಡೆಸುವ ಕುಟುಂಬಗಳಿವೆ. ಅಂತಹ ಊರಿನ ಹಾಲು ಡೈರಿಯವರು ಜಿಲ್ಲೆಯಲ್ಲಿಯೇ ಪ್ರಥಮ ಎನ್ನುವಂತೆ, ಹಾಲು ಉತ್ಪಾದಕರಿಗೆ ವ್ಯವಸ್ಥೆಯೊಂದನ್ನು ಕಲ್ಪಿಸಿದ್ದಾರೆ.
ಹೌದು ಉಡುಪಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಇಂದಿಗೂ ಕೂಡ ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಸಾಕಷ್ಟು ಕುಟುಂಬಗಳಿವೆ. ಅದರಲ್ಲೂ ಅರೆ ಮಲೆನಾಡು ಪ್ರದೇಶ ಹೊಂದಿರುವ ಬೈಂದೂರು ತಾಲೂಕಿನಲ್ಲಂತೂ ಸಾಕಷ್ಟು ಕೃಷಿಕರು ಹೈನುಗಾರಿಕೆಯನ್ನು ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಹೈನುಗಾರಿಕೆ ಮಾಡುವ ಕೃಷಿಕರಿಗೆ ಮೈಲಿ ಗಟ್ಟಲೆ ನಡೆದು ಹಾಲು ಡೈರಿಗೆ ಹಾಲು ನೀಡುವುದೇ ದೊಡ್ಡ ಹರಸಾಹಸ. ಅದರಲ್ಲೂ ಹಕ್ಲಾಡಿ, ಕಟ್ಟಿನಮಕ್ಕಿ ಪರಿಸರದಲ್ಲಂತೂ ಕಾಡು ಪ್ರದೇಶವೇ ಇರುವ ಹಿನ್ನೆಲೆಯಲ್ಲಿ ದೂರದಲ್ಲಿರುವ ಹಾಲು ಡೈರಿಗೆ ಹಾಲು ಏಕಾಂಗಿಯಾಗಿ ಹಾಲು ತಲುಪಿಸುವುದೇ ದೊಡ್ಡ ತಲೆನೋವು. ಸದ್ಯ ಈ ಸಮಸ್ಯೆನ ಮನಗಂಡ ಹಕ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಗ್ರಾಮೀಣ ಭಾಗದ ಹೈನುಗಾರಿಕೆ ಮಾಡಿಕೊಂಡಿರುವ ಕೃಷಿಕರಿಗೆ ಅನುಕೂಲವಾಗುವಂತೆ, ಮೊಬೈಲ್ ಹಾಲು ಡೈರಿಯನ್ನು ಪ್ರಾರಂಭಿಸಿದೆ.
ಎರಡು ದಶಕ ಪೂರೈಸಿದ ಹಕ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪ್ರಥಮ ಬಾರಿ ಹೈನುಗಾರರಿಂದ ನೇರವಾಗಿ ಹಾಲು ಸಂಗ್ರಹಿಸುವ ವಾಹನ ಕಾರ್ಯಾಚರಣೆ ಮಾಡುತ್ತಿದೆ. ದ.ಕ. ಜಿಲ್ಲೆ ಹಾಲು ಸಂಗ್ರಹ ವಾಹನ ವ್ಯವಸ್ಥೆ ಹೊಂದಿದ್ದರೂ, ಉಡುಪಿ ಜಿಲ್ಲೆಯಲ್ಲಿ ಯಾವುದೇ ಡೇರಿ ಹೈನುಗಾರರಿಂದ ನೇರ ಹಾಲು ಸಂಗ್ರಹಿಸುತ್ತಿರಲಿಲ್ಲ. ಹಾಲು ಉತ್ಪಾದನೆ ಹೆಚ್ಚಳ, ಗುಣಮಟ್ಟದ ಹಾಲು ಸಂಗ್ರಹ, ಹೈನುಗಾರರಿಗೆ ಡೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಆಟೋ ಗೂಡ್ಸ್ ವಾಹನದಲ್ಲಿ ಹಕ್ಲಾಡಿಯಲ್ಲಿ ಹಾಲು ಸಂಗ್ರಹಣೆ ಆರಂಭಿಸಲಾಗಿದೆ. ನಿಗದಿತ ಸ್ಥಳದಿಂದ ಹಾಲು ಪಡೆದು ಡೇರಿಯಲ್ಲಿ ಸಂಗ್ರಹಿಸಿ, ಮಣಿಪಾಲದಲ್ಲಿರುವ ಕೆಎಂಎಫ್ ಕೇಂದ್ರಕ್ಕೆ ರವಾನಿಸುವ ಕಾರ್ಯ ಸದ್ಯ ನಡೆಯುತ್ತಿದೆ. ಈ ಹಿಂದೆ ಡೇರಿಯಲ್ಲಿ ಹಾಲು ಸಂಗ್ರಹ ದಿನಕ್ಕೆ 580 ಲೀ.ಗೆ ಇಳಿದಿತ್ತು. ಹಾಲು ಉತ್ಪಾದನೆ ತಗ್ಗಿದ್ದರಿಂದ ಉತ್ಪಾದನೆ ಹೆಚ್ಚಿಸುವ ಸಲುವಾಗಿ ವಾಹನ ವ್ಯವಸ್ಥೆ ಮಾಡಲಾಗಿದ್ದು 1500 ಲೀಟರ್ ಗೆ ಹಾಲು ಉತ್ಪಾದನೆ ಹೆಚ್ಚಿದೆ.
ಇದನ್ನೂ ಓದಿ: ಉಡುಪಿ: ಸಿಲಿಂಡರ್ ಸ್ಫೋಟ, ಧಗಧಗಿಸಿದ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡೌನ್
ಒಟ್ಟಾರೆಯಾಗಿ ಮೊಬೈಲ್ ಹಾಲು ಡೈರಿಯಿಂದ ಹೈನುಗಾರರು ಡೇರಿ ಹಾಗೂ ಮನೆಗೆ ಅಲೆಯುವುದು ತಪ್ಪಿದ್ದು, ಗುಣಮಟ್ಟದ ಹಾಲು ಸಂಗ್ರಹಕ್ಕೂ ಅನುಕೂಲ ಆಗುತ್ತದೆ. ಇದರಿಂದ ಹಾಲು ಉತ್ಪಾದನೆಗೂ ಹೆಚ್ಚಿನ ಸ್ಫೂರ್ತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಕಡೆಯಲ್ಲೂ ಇದೇ ಮಾದರಿ ಅಳವಡಿಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ