AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಬಿಹಾರದಲ್ಲಿ ಆನೆ ಸವಾರಿ ಮಾಡಿದ ಹುಲಿ?: ಈ ವಿಡಿಯೋದ ನಿಜವಾದ ಕಥೆ ಏನು?

ಬಿಹಾರದ ವಿಶಿಷ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಯಾವುದೇ ಭಯವಿಲ್ಲದೆ ಆನೆಯ ಮೇಲೆ ಹುಲಿ ಸವಾರಿ ಮಾಡುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಹುಲಿಯ ಕಿವಿಯನ್ನು ಕೂಡ ತಿರುಚುತ್ತಿದ್ದಾನೆ. ಆದರೆ, ಹುಲಿ ಏನನ್ನೂ ಮಾಡುತ್ತಿಲ್ಲ, ಪ್ರಜ್ಞೆ ತಪ್ಪಿದಂತೆ ಕಾಣುತ್ತಿದೆ. ಈ ವಿಡಿಯೋ ಎಲ್ಲಕಡೆ ಹರಿದಾಡುತ್ತಿದೆ. ಈ ವಿಡಿಯೋದ ನಿಜಾಂಶ ಏನು?, ಇಲ್ಲಿದೆ ಮಾಹಿತಿ.

Fact Check: ಬಿಹಾರದಲ್ಲಿ ಆನೆ ಸವಾರಿ ಮಾಡಿದ ಹುಲಿ?: ಈ ವಿಡಿಯೋದ ನಿಜವಾದ ಕಥೆ ಏನು?
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2024 | 11:39 AM

ಹುಲಿಯನ್ನು ಆನೆಯ ಮೇಲೆ ಹತ್ತಿಸಿ ರಸ್ತೆಯಲ್ಲಿ ಕೊಂಡೊಯ್ಯುತ್ತಿರುವ ವಿಡಿಯೋ ಒಂದು ಎಲ್ಲ ಕಡೆ ಹರಿದಾಡುತ್ತಿದೆ. ರಸ್ತೆಯ ಪೂರ್ತಿ ವಾಹನಗಳು ಮತ್ತು ಜನರು ತುಂಬಿಕೊಂಡಿದ್ದಾರೆ. ಈ ಅದ್ಭುತ ದೃಶ್ಯವನ್ನು ಕ್ಯಾಮೆರಾದಲ್ಲಿ ಅನೇಕ ಜನರು ಸೆರೆಹಿಡಿಯುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಬಿಹಾರದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಬಿಹಾರದ ಜನರು ಹುಲಿಯನ್ನು ಹಿಡಿದು ಆನೆಯ ಮೇಲೆ ಇಟ್ಟಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಬಾಬು, ಇದು ಬಿಹಾರ, ಇಲ್ಲಿ ಹಾರುವ ಹಕ್ಕಿಗಳಿಗೂ ಅರಿಶಿನ ಹಚ್ಚುತ್ತಾರೆ!. ಇಂತಹ ಅದ್ಭುತ ದೃಶ್ಯಗಳನ್ನು ಬಿಹಾರದಲ್ಲಿ ಮಾತ್ರ ನೋಡಬಹುದು!’’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಯ ಬೆನ್ನಿಗೆ ಹುಲಿಯನ್ನು ಬಿಗಿದು ಕಟ್ಟಿದಂತೆ ಕಾಣುತ್ತಿದ್ದು, ಅದರೊಂದಿಗೆ ಇಬ್ಬರು ಕುಳಿತುಕೊಂಡು ಹುಲಿಯ ಕಿವಿ ಹಿಂಡುತ್ತಿರುವುದನ್ನು ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಇತ್ತೀಚಿನ ಘಟನೆ ಅಲ್ಲ ಅಥವಾ ಬಿಹಾರದಲ್ಲಿ ನಡೆದಿಲ್ಲ. ಬದಲಾಗಿ 2011 ರಲ್ಲಿ ಉತ್ತರಾಖಂಡದ ಸುಂದರ್‌ಖಾಲ್‌ನಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ, indian_wildlifess ಹೆಸರಿನ ಇನ್​ಸ್ಟಾಗ್ರಾಮ್ ಖಾತೆಯ ಪೋಸ್ಟ್‌ನಲ್ಲಿ ನಾವು ಈ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಪೋಸ್ಟ್‌ನಲ್ಲಿ, ಈ ವಿಡಿಯೋವನ್ನು ಉತ್ತರಾಖಂಡದ ಸುಂದರ್‌ಖಾಲ್‌ನಿಂದ ಎಂದು ಬರೆಯಲಾಗಿದೆ. ಈ ನರಭಕ್ಷಕ ಹುಲಿಯನ್ನು 2011 ರಲ್ಲಿ ಅರಣ್ಯ ಇಲಾಖೆ ಕೊಂದಿದೆ. ಈ ಹುಲಿ ಆ ಪ್ರದೇಶದ ಆರು ಜನರ ಪ್ರಾಣವನ್ನು ಕಸಿದುಕೊಂಡಿತ್ತು ಎಂದು ಡಿಸೆಂಬರ್ 1 ರಂದು ಪೋಸ್ಟ್ ಮಾಡಿದೆ.

ಈ ಪೋಸ್ಟ್‌ನಲ್ಲಿರುವ ವಿಡಿಯೋದ ಕ್ರೆಡಿಟ್ ಅನ್ನು ‘ಸಂಬುರ್‌ಹಂಟರ್’ ಹೆಸರಿನ ಯೂಟ್ಯೂಬ್ ಚಾನೆಲ್‌ಗೆ ನೀಡಲಾಗಿದೆ. ಈ ಯೂಟ್ಯೂಬ್ ಚಾನಲ್ ಅನ್ನು ಹುಡುಕಿದಾಗ ವಿಡಿಯೋದ ದೀರ್ಘ ಆವೃತ್ತಿಯನ್ನು ಜನವರಿ 15, 2012 ರಂದು ಇಲ್ಲಿ ಹಂಚಿಕೊಂಡಿರುವುದು ಸಿಕ್ಕಿದೆ. ಈ ವೀಡಿಯೋ ಜನವರಿ 2011 ರದ್ದು ಮತ್ತು ಸುಂದರ್‌ಖಾಲ್‌ನದ್ದು ಎಂದು ವಿಡಿಯೋ ಜೊತೆಗೆ ಹೇಳಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಇದಕ್ಕೆ ಸಂಬಂಧಿಸಿದ ಕೆಲ ವರದಿಗಳು ಕಂಡುಬಂದವು. ಜನವರಿ 28, 2011 ರ ಇಂಡಿಯಾ ಟುಡೆ ಈ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್​ನೊಂದಿಗೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹುಲಿಯೊಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯವನ್ನು ಸೃಷ್ಟಿಸಿದೆ ಎಂದು ವರದಿ ಮಾಡಿದೆ.

ಈ ಹುಲಿ ಆರು ಜನರನ್ನು ಕೊಂದಿತ್ತು. ಮೂರು ತಿಂಗಳಿನಿಂದ ಅರಣ್ಯ ಇಲಾಖೆಯವರು ಹುಡುಕಾಟ ನಡೆಸಿದ್ದರು. ನಂತರ ಒಂದು ದಿನ ಹುಲಿಯನ್ನು ಅರಣ್ಯ ಸಿಬ್ಬಂದಿ ಸುತ್ತುವರೆದು ಗುಂಡಿಕ್ಕಿ ಕೊಂದರು. ಅದರ ದೇಹವನ್ನು ಸಾರ್ವಜನಿಕರಿಗೆ ತೋರಿಸಲು ಆನೆಯ ಮೇಲೆ ತೆಗೆದುಕೊಂಡು ಹೋಗಲಾಯಿತು.

ಹುಲಿಯಿಂದ ಸ್ಥಳೀಯ ಜನರು ಭಯಭೀತರಾಗಿದ್ದರು ಮತ್ತು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಆದಾಗ್ಯೂ, ಕೆಲವು ವನ್ಯಜೀವಿ ತಜ್ಞರು ಕೂಡ ಹುಲಿ ಹತ್ಯೆಯನ್ನು ವಿರೋಧಿಸಿದರು ಮತ್ತು ಇದನ್ನು ಕ್ರೂರ ಎಂದು ಕರೆದರು ಎಂಬ ಮಾಹಿತಿ ವರದಿಯಲ್ಲಿದೆ.

ಇದಲ್ಲದೆ, ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ವಿಡಿಯೋವನ್ನು ಉತ್ತರಾಖಂಡದ್ದು ಎಂದು ವಿವರಿಸಿದ್ದಾರೆ. ಈ ಮೂಲಕ ಸದ್ಯ ಹರಿದಾಡುತ್ತಿರುವ ಹೇಳಿಕೆ ಸುಳ್ಳು ಸಾಬೀತಾಗಿದೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ