ಗೋಹತ್ಯೆ ನಿಷೇಧ ಕಾಯ್ದೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ: ಗೆಲುವು ನಮ್ಮದೇ ಎಂದ ಸಚಿವ ಪ್ರಭು ಚೌಹಾಣ್
ಗೋಮಾತೆಯ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಸಾಕಷ್ಟು ಅಧ್ಯಯನ ಮಾಡಿ ಕಾಯ್ದೆ ಜಾರಿ ಮಾಡಿದ್ದೇವೆ. ಆದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.
ಉಡುಪಿ: ಗೋಹತ್ಯೆ ನಿಷೇಧ ಕಾಯ್ದೆ ಪ್ರಶ್ನಿಸಿ ಕೆಲವರು ನ್ಯಾಯಾಲಯಗಳಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation – PIL) ಅಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ನಾವೂ ನಮ್ಮ ವಾದ ಮಂಡಿಸುತ್ತೇವೆ. ನ್ಯಾಯಾಲಯದಲ್ಲಿ ತೀರ್ಪು ನೂರಕ್ಕೆ ನೂರು ನಮ್ಮ ಪರ ಬರುತ್ತೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು. ಉಡುಪಿಯ ಕೃಷ್ಣಮಠದಲ್ಲಿ ನಡೆದ ಗೋಪಾಲಕರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಗೋಹತ್ಯಾ ನಿಷೇಧ ಕಾಯ್ದೆ ಸಂಪೂರ್ಣ ಜಾರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಮಾತೆಯ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಸಾಕಷ್ಟು ಅಧ್ಯಯನ ಮಾಡಿ ಕಾಯ್ದೆ ಜಾರಿ ಮಾಡಿದ್ದೇವೆ. ಆದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.
ಕಾಯ್ದೆ ಜಾರಿಗೆ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರೊಂದಿಗೆ ಚರ್ಚಿಸಿದ್ದೆವು. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾದ ಮೇಲೆ ಸುಮಾರು 10,000 ಗೋವುಗಳನ್ನು ರಕ್ಷಿಸಲಾಗಿದೆ. ಆರುನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಗೃಹ ಸಚಿವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಗೋವುಗಳ ಅಕ್ರಮ ಸಾಗಣೆಗೆ ಈ ಹಿಂದೆ ಕೇವಲ ಒಂದು ಸಾವಿರ ರೂಪಾಯಿ ದಂಡ ಇತ್ತು. ಭವಿಷ್ಯದಲ್ಲಿ ದಂಡದ ಪ್ರಮಾಣ ₹ 50 ಸಾವಿರದಿಂದ ₹ 10 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಗೋಹತ್ಯೆ ಹೇಗೆ ಆಗುತ್ತೆ ನೋಡೋಣ. ದಂಡದ ಪ್ರಮಾಣ ಹೆಚ್ಚಾದರೆ ಯಾರು ಗೋಹತ್ಯೆ ಮಾಡುತ್ತಾರೆ. ಗೋಹತ್ಯೆಯಲ್ಲಿ ತೊಡಗಿದವರಿಗೆ ಏಳು ವರ್ಷಗಳ ಜೈಲುವಾಸ ವಿಧಿಸಲೂ ಅವಕಾಶವಿದೆ. ತಾಲೂಕಿಗೆ ಒಂದು ಸುಸಜ್ಜಿತ ಪಶು ಆಂಬುಲೆನ್ಸ್ ನೀಡುತ್ತೇವೆ. ಪ್ರಾಣಿ ಸಹಾಯವಾಣಿ ಕೇಂದ್ರವನ್ನೂ ಆರಂಭಿಸಿದ್ದೇವೆ. ಕಳೆದ ಮೂರು ತಿಂಗಳಲ್ಲಿ 30,000 ದೂರುಗಳು ಬಂದಿದೆ. ಬೆಳಗಾವಿ ಅಧಿವೇಶನ ಮುಗಿದ ನಂತರ ಪ್ರತಿ ಜಿಲ್ಲೆಯಲ್ಲೂ 50ರಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸುತ್ತೇವೆ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಇದೊಂದು ಐತಿಹಾಸಿಕ ಅಧಿವೇಶನವಾಗಲಿದೆ. ಮಂಗಳೂರು-ಉಡುಪಿ ಭಾಗದಲ್ಲಿ ನಡೆಯುತ್ತಿರುವ ಮತಾಂತರ ಪ್ರಕರಣವನ್ನು ನೋಡಿದ್ದೇವೆ. ಶೀಘ್ರವಾಗಿ ಕಾಯ್ದೆ ಜಾರಿಯಾಗುವ ಅಗತ್ಯವಿದೆ. ಕಾಯ್ದೆ ಜಾರಿಯಾಗುತ್ತದೆ ಎನ್ನುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದವರು ಕೇವಲ ಮತಬ್ಯಾಂಕ್ಗಾಗಿ ವಿರೋಧ ಮಾಡುತ್ತಿದ್ದಾರೆ. ಈ ಹಿಂದಿನಿಂದಲೂ ಕಾಂಗ್ರೆಸ್ ಇದನ್ನೇ ಮಾಡುತ್ತಿದೆ. ಮತಾಂತರ ನಿಷೇಧ ಒಂದು ರಾಷ್ಟ್ರೀಯ ವಿಚಾರ. ಗೋಹತ್ಯೆ ಕಾಯ್ದೆಗೂ ಕಾಂಗ್ರೆಸ್ ವಿರೋಧ ಮಾಡಿದೆ. ನಮಗೆ ನಾವು ಕಾನೂನು ಜಾರಿ ಮಾಡುವಷ್ಟು ಬಹುಮತವಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ಬಂದರೂ ಗೋಹತ್ಯೆ ನಿಂತಿಲ್ಲ; ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಬೇಸರವಿದೆ: ಕೆಎಸ್ ಈಶ್ವರಪ್ಪ ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ; ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯುತ್ತೇವೆ: ಪ್ರಭು ಚೌಹಾಣ್