UR Sabhapati Passes Away: ಉಡುಪಿ ಕ್ಷೇತ್ರದ ಮಾಜಿ ಶಾಸಕ ಯುಆರ್ ಸಭಾಪತಿ ನಿಧನ
ಆಸ್ಕರ್ ಫರ್ನಾಂಡಿಸ್ ಪ್ರೇರಣೆಯಿಂದ ಎರೆಡು ಬಾರಿ ಶಾಸಕರಾಗಿದ್ದ ಹಿರಿಯ ರಾಜಕಾರಣಿ ಯು.ಆರ್.ಸಭಾಪತಿ ವಿಧಿವಶರಾಗಿದ್ದಾರೆ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಯು.ಆರ್.ಸಭಾಪತಿ(72)(Former MLA UR Sabhapati )ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯು.ಆರ್.ಸಭಾಪತಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು(ಮೇ 21) ಉಡುಪಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಗಣ್ಯರು ಸಂತಾಪ ಸೂಚಿಸಿದ್ದಾರೆ. 1980-90ರ ದಶಕದ ಕರಾವಳಿ ಭಾಗದ ಪ್ರಭಾವಿ ನಾಯಕರಾಗಿದ್ದ ಸಭಾಪತಿ ಉಡುಪಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದರು. ಯುಆರ್ ಸಭಾಪತಿ ಅವರು ರಾಜಕೀಯ ಪ್ರವೇಶಕ್ಕೆ ಆಸ್ಕರ್ ಫರ್ನಾಂಡಿಸ್ ಪ್ರೇರಣೆಯಾಗಿದ್ದು, ಬಂಗಾರಪ್ಪ ಅನುಯಾಯಿಯಾಗಿದ್ದರು.
1994 ರಲ್ಲಿ ಕೆಸಿಪಿ ಪಕ್ಷದಿಂದ ಗೆದ್ದು ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, 1999ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು. ಇನ್ನು 2004ರ ಚುನಾವಣೆಯಲ್ಲಿ ಇವರು ರಘುಪತಿ ಭಟ್ ವಿರುದ್ಧ ಸೋಲುಕಂಡಿದ್ದರು.
1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪರಿಷತ್ ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Published On - 1:13 pm, Sun, 21 May 23




