AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಕಳದಲ್ಲೊಬ್ಬ ದಶರಥ ಮಾಂಜಿ; ಸತತ 2 ವರ್ಷದಿಂದ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಗೋವಿಂದಣ್ಣ

ಬಿಹಾರದ ದಶರಥ ಮಾಂಜಿ ಯಾರಿಗೆ ಗೊತ್ತಿಲ್ಲ ಹೇಳಿ, ರಸ್ತೆ ಇಲ್ಲದೆ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗದೆ ಪರ್ವತವನ್ನೇ ಕಡಿದು ರಸ್ತೆ ನಿರ್ಮಿಸಿದ ಮಹಾನುಭಾವ. ಇಂತಹ ಉದಾತ್ತ ಮನೋಭಾವದ ವ್ಯಕ್ತಿಗಳಿಗೆ ನಮ್ಮಲ್ಲೇನು ಕಡಿಮೆ ಇಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಕಾರ್ಕಳ ಸಮೀಪದ ಮಾಳ ಎಂಬಲ್ಲಿಯ ವ್ಯಕ್ತಿಯೊಬ್ಬರು ಪರೋಪಕಾರದ ಮನೋಭಾವನೆಯಲ್ಲಿ ರಸ್ತೆ ನಿರ್ಮಿಸುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಹಾಗಾದ್ರೆ, ಏನಿದು ಕಥೆ ಅಂತೀರಾ? ಈ ಸ್ಟೋರಿ ಓದಿ.

ಕಾರ್ಕಳದಲ್ಲೊಬ್ಬ ದಶರಥ ಮಾಂಜಿ; ಸತತ 2 ವರ್ಷದಿಂದ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಗೋವಿಂದಣ್ಣ
ಸತತ 2 ವರ್ಷದಿಂದ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಗೋವಿಂದ ಮಲೆಕುಡಿಯ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 15, 2024 | 4:49 PM

ಉಡುಪಿ, ಮೇ.15: ಬಿಹಾರ ಮೂಲದ ದಶರಥ ಮಾಂಜಿ(Dashrath Manjhi) ಪರೋಪಕಾರಕ್ಕೆ ಒಂದು ಸೂಕ್ತ ಉದಾಹರಣೆ ಎಂದರೆ ತಪ್ಪಾಗಲಾರದು. ಅವರ ಜೀವನ ಕಥೆ ಚಲನಚಿತ್ರದ ರೂಪದಲ್ಲಿ ತೆರೆಯ ಮೇಲೆ ಬಂದಿದೆ. ಅದ್ಭುತ ನಟ ನವಾಜುದ್ದೀನ್ ಸಿದ್ದಿಕಿ, ದಶರಥ ಮಾಂಜಿ ಪಾತ್ರವನ್ನು ಈ ಚಿತ್ರದಲ್ಲಿ ಅಭಿನಯಿಸಿದ್ದು, ಸಾಮಾನ್ಯ ವ್ಯಕ್ತಿಯೋರ್ವನ ಉದಾತ್ತ ಮನೋಭಾವದ ನೈಜ ಕಥೆಯನ್ನು ಪ್ರಪಂಚವೇ ನೋಡುವಂತೆ ಮಾಡಿದ್ದಾರೆ. ಇದು ಬಿಹಾರದ ದಶರಥ ಮಾಂಜಿಯಾದರೆ, ಕಾರ್ಕಳ(Karkala)ದಲ್ಲೂ ಕೂಡ ಓರ್ವ ವ್ಯಕ್ತಿ, ದಶರಥ ಮಾಂಜಿ ಹೋಲುವ ಪರೋಪಕಾರದ ಕೆಲಸವನ್ನು ಮಾಡಿದ್ದಾರೆ.

ಹಾರೆ- ಪಿಕಾಸಿ ಹಿಡಿದು ನಿತ್ಯ ಶ್ರಮದಾನ, ಸುಮಾರು 500 ಮೀಟರ್‌ ರಸ್ತೆ ದುರಸ್ತಿ, ಸರಕಾರದ ಕೆಲಸವನ್ನು ತಾನೇ ನಿರ್ವಹಿಸಿದ ಉದಾರಿ. ಇದು ಮಾಳ ಗ್ರಾಮದ ಪೇರಡ್ಕ ಗಿರಿಜನ ಕಾಲೊನಿ ನಿವಾಸಿ ಗೋವಿಂದ ಮಲೆಕುಡಿಯ ಅವರ ಜೀವನಕ್ರಮ. ತಮ್ಮ ಕಾಲೋನಿಗೆ ಸಂಪರ್ಕಿಸಲು ಸರಿಯಾದ ರಸ್ತೆ ಇಲ್ಲದ್ದನ್ನು ಅರಿತು, ಸ್ವತಃ ಹಾರೆ- ಪಿಕಾಸಿ ಹಿಡಿದು ರಸ್ತೆ ಮಾಡುವ ಮೂಲಕ ಪರೋಪಕಾರಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ.

ಇದನ್ನೂ ಓದಿ:ಪರೋಪಕಾರಂ ಇದಂ ಶರೀರಂ: ಬಾಡಿ ಬಿಲ್ಡಿಂಗ್ ಮಾಡ್ತಾ ಯುವಕರಿಗೆ ಮಾದರಿಯಾಗಿದ್ದವ ಅಪಘಾತಕ್ಕೆ ಬಲಿ, ಪುತ್ರನ ಅಂಗಾಂಗ ದಾನ ಮಾಡಿದ ತಂದೆ!

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಿರಿಜನ ಕಾಲೋನಿ ಪೇರಡ್ಕದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಅದನ್ನು ಸಂಪರ್ಕಿಸಲು ಸುಂದರವಾದ ರಸ್ತೆಯೇ ಇಲ್ಲ. ಕೇವಲ ಕಾಲ್ನಡಿಗೆ ಸೀಮಿತವಾಗಿದ್ದ ರಸ್ತೆಯ ಅಭಿವೃದ್ಧಿಗಾಗಿ ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಕೊನೆಗೆ ಬೇಸತ್ತು ತಾವೇ ರಸ್ತೆ ನಿರ್ಮಿಸಲು ಗೋವಿಂದ ಮಲೆಕುಡಿಯ ಅವರು ಮುಂದಾಗಿದ್ದರು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಸ್ತೆ ನಿರ್ಮಾಣ ಕೆಲಸ ಶುರು

ಗಿರಿಜನ ಕಾಲೋನಿಯ ಬುಗಟುಗುಂಡಿ ಒಂದನೇ ವಾರ್ಡ್‌ ರಸ್ತೆವರೆಗೆ ಒಟ್ಟು ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೆ ಅವರೇ ಸ್ವಂತ ಶ್ರಮ ವಹಿಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆ ಯನ್ನು ಕೂಡ ಅವರೇ ಮಾಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಗೋವಿಂದ ಮಲೆಕುಡಿಯ ಅವರು ಪ್ರಸ್ತುತ 55ರ ಹರೆಯ. ಕಳೆದ ಮೂವತ್ತು ವರ್ಷಗಳಿಂದ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಅರಣ್ಯ ಇಲಾಖೆಯ ಜತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸಿ ಬೆಳೆಸುತ್ತಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಲಿ ಕೆಲಸವನ್ನು ಬಿಟ್ಟು ಮನೆಗೆಲಸ ಜತೆ, ರಸ್ತೆ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಒಟ್ಟಾರೆಯಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗೋವಿಂದ ಮಲೆಕುಡಿಯ ಅವರು ರಸ್ತೆ ನಿರ್ಮಿಸಿರುವುದಕ್ಕೆ ಸಾರ್ವಜನಿಕರ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆಯ ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸಬೇಕು. ತಕ್ಷಣವೇ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Wed, 15 May 24