11 ವರ್ಷ ಮಕ್ಕಳಿಲ್ಲದ ದಂಪತಿಗೆ ನಕಲಿ ದಾಖಲೆ ಸೃಷ್ಟಿಸಿ ಮಗು ಮಾರಿದ್ದ ಖ್ಯಾತ ವೈದ್ಯ ಅರೆಸ್ಟ್!
ಉಡುಪಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ದಂಧೆಯಲ್ಲಿ ಭಾಗಿಯಾಗಿದ್ದ ಪ್ರಸಿದ್ಧ ವೈದ್ಯ ಡಾ. ಸುರೇಂದ್ರ ಕಾಮತ್, ಮಗು ಪಡೆದ ವ್ಯಕ್ತಿ ಹಾಗೂ ಮಗುವಿನ ತಂದೆ ತಾಯಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ, ಜೂನ್ 23: ಜಿಲ್ಲೆಯಲ್ಲಿ ದಂಪತಿಗೆ ಕಾನೂನುಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ದತ್ತು ನೀಡಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಈ ದಂಧೆಗೆ ಸಂಬಂಧಿಸಿದಂತೆ ಉಡುಪಿಯ ಪ್ರಸಿದ್ಧ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮುಖ್ಯಾಂಶಗಳು
- ಉಡುಪಿಯಲ್ಲಿ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
- ನಕಲಿ ದಾಖಲೆ ಸೃಷ್ಟಿಸಿ ಮಗು ನೀಡಿದ್ದ ಪ್ರಸಿದ್ಧ ವೈದ್ಯನನ್ನು ಬಂಧಿಸಲಾಗಿದೆ.
- ಮಗುವನ್ನು ಹೆತ್ತು ಮಾರಾಟ ಮಾಡಿದ್ದ ಕಾರ್ಕಳದ ಪೋಷಕರನ್ನೂ ದಸ್ತಗಿರಿ ಮಾಡಲಾಗಿದೆ.
ಮಕ್ಕಳ ರಕ್ಷಣಾ ಘಟಕದ ದಾಳಿ ವೇಳೆ ಸಿಕ್ಕಿಬಿದ್ದ ದಂಪತಿ
ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಸಂತೆಕಟ್ಟೆಯ ನೇಜಾರು ನಿವಾಸದ ದಂಪತಿ ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಒಂದು ತಿಂಗಳ ಹೆಣ್ಣು ಮಗುವನ್ನು ದತ್ತು ತಂದು ಸಾಕುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಜೂನ್ 19 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಡಿಪಿಒ ಅಧಿಕಾರಿಗಳ ಜಂಟಿ ತಂಡ ಸಂತೆಕಟ್ಟೆಯ ಸುಬ್ರಹ್ಮಣ್ಯ ನಗರದಲ್ಲಿರುವ ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಯ ಮನೆಗೆ ದಾಳಿ ನಡೆಸಿತು. ಈ ವೇಳೆ ಮನೆಯಲ್ಲಿ ದಂಪತಿ, ಮಗು ಮತ್ತು ಪೂರ್ಣಿಮಾ ಸಹೋದರಿ ಲಕ್ಷ್ಮಿ ಇದ್ದರು. ಅಧಿಕಾರಿಗಳು ಮಗುವಿನ ದಾಖಲೆಗಳ ಬಗ್ಗೆ ವಿಚಾರಿಸಿದಾಗ ದಂಪತಿಗಳು ಗೊಂದಲದ ಹೇಳಿಕೆಗಳನ್ನು ನೀಡಲಾರಂಭಿಸಿದರು. ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.
ಹೆಣ್ಣು ಮಗುವಿನ ಮಾರಾಟಕ್ಕೆ ವೈದ್ಯನ ಸಾಥ್!
ವಿಚಾರಣೆಯ ವೇಳೆ ತಿಳಿದುಬಂದ ಆಘಾತಕಾರಿ ಅಂಶವೆಂದರೆ, ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿಗೆ ಮದುವೆಯಾಗಿ 11 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಅವರು ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಸಂತಾನಹೀನತೆ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ, ಆಸ್ಪತ್ರೆಯ ವೈದ್ಯ ಡಾ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವೊಂದನ್ನು ಕೊಡಿಸುವಂತೆ ವಿನಂತಿಸಿದ್ದರು.
ಇದಕ್ಕೆ ಒಪ್ಪಿದ ಡಾ. ಕಾಮತ್, ಸುಮಾರು ಒಂದು ತಿಂಗಳ ಹಿಂದೆ ಈ ದಂಪತಿಗೆ ಹೆಣ್ಣು ಮಗುವನ್ನು ಹಸ್ತಾಂತರಿಸಿದ್ದರು. ಅಷ್ಟೇ ಅಲ್ಲದೆ, ಪ್ರಕಾಶ್ ಮತ್ತು ಪೂರ್ಣಿಮಾ ಅವರೇ ಆ ಮಗುವಿನ ನಿಜವಾದ ಪೋಷಕರು ಎಂದು ಬಿಂಬಿಸುವ ನಕಲಿ ಜನನ ಪ್ರಮಾಣ ಪತ್ರವನ್ನು ಸೃಷ್ಟಿಸಿಕೊಟ್ಟಿದ್ದರು. ಮಗುವಿನ ಹೆತ್ತ ತಂದೆ-ತಾಯಿ ಯಾರು ಎಂಬುದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಂಪತಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ: ಹುಡುಗನ ಜೊತೆಗೆ ಹುಡುಗ ಡೇಟಿಂಗ್ ಮಾಡಲು ಕರೆಸಿ ಕಿಡ್ನಾಪ್
ದಾಖಲೆಗಳನ್ನು ನಕಲು ಮಾಡಿ, ಕಾನೂನುಬಾಹಿರವಾಗಿ ಹಣದ ದುರಾಸೆಗೆ ಮಗುವನ್ನು ಮಾರಾಟ ಮಾಡಿದ ಆರೋಪದಡಿ ವೈದ್ಯ ಡಾ. ಕಾಮತ್ ಮತ್ತು ಮಗು ಪಡೆದ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಮಗುವನ್ನು ಹೆತ್ತು ಮಾರಾಟ ಮಾಡಿದ್ದ ಕಾರ್ಕಳ ತಾಲೂಕಿನ ನಂದಳಿಕೆ ನಿವಾಸಿಗಳಾದ ಸಂಪತ್ (22) ಮತ್ತು ಸುಪ್ರೀತಿ (22) ಎಂಬ ದಂಪತಿಯನ್ನೂ ವಶಕ್ಕೆ ಪಡೆದಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲನ್ಯಾಯ ಕಾಯ್ದೆಯಡಿ (JJ Act) ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




