ವಿಜಯಪುರದಲ್ಲಿ ವಕ್ಫ್​ ಕಾಯ್ದೆ ವಿರುದ್ಧ ಹೊತ್ತಿದ ಕಿಚ್ಚು: ಕಾಯ್ದೆಯನ್ನೇ ರದ್ದು ಮಾಡುವಂತೆ ಕೇಂದ್ರಕ್ಕೆ ರೈತರು ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 26, 2024 | 9:01 PM

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ನೋಟೀಸ್‌ಗಳನ್ನು ಪಡೆಯುತ್ತಿದ್ದು, ತಮ್ಮ ಪೂರ್ವಜರಿಂದ ಬಂದ ಜಮೀನು ವಕ್ಫ್‌ಗೆ ಹೋಗುವ ಭಯದಲ್ಲಿದ್ದಾರೆ. ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ವಕ್ಫ್ ಕಾಯ್ದೆಯನ್ನು ಪರಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.

ವಿಜಯಪುರದಲ್ಲಿ ವಕ್ಫ್​ ಕಾಯ್ದೆ ವಿರುದ್ಧ ಹೊತ್ತಿದ ಕಿಚ್ಚು: ಕಾಯ್ದೆಯನ್ನೇ ರದ್ದು ಮಾಡುವಂತೆ ಕೇಂದ್ರಕ್ಕೆ ರೈತರು ಒತ್ತಾಯ
ವಿಜಯಪುರದಲ್ಲಿ ವಕ್ಫ್​ ಕಾಯ್ದೆ ವಿರುದ್ಧ ಹೊತ್ತಿದ ಕಿಚ್ಚು: ಕಾಯ್ದೆಯನ್ನೇ ರದ್ದು ಮಾಡುವಂತೆ ಕೇಂದ್ರಕ್ಕೆ ರೈತರು ಒತ್ತಾಯ
Follow us on

ವಿಜಯಪುರ, ಅಕ್ಟೋಬರ್​ 26: ವಕ್ಫ್ (Wakf Board) ಕಿಚ್ಚು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿಲ್ಲ. ರೈತರ ಜಮೀನುಗಳನ್ನು ವಕ್ಪ್ ಬೋರ್ಡಿಗೆ ಒಳಪಡಿಸಲಾಗುತ್ತಿದೆ ಎಂಬ ಭಯ ರೈತರನ್ನು ಕಾಡುತ್ತಿದೆ. ಸರ್ಕಾರ ವಕ್ಪ್ ಇಲಾಖೆಗೆ ಸಹಾಯ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ. ನಮ್ಮ ಜಮೀನು ವಕ್ಫ್​ಗೆ ಹೋಗುವಂತೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲೆಗೆ ಬಂದು ಹೋದ ಬಳಿಕ ನಡೆದ ಬೆಳವಣಿಗೆಗೆಳು ಇಂತಹ ಆರೋಪಕ್ಕೆ ಪೂರಕವಾಗಿದೆ. ರೈತರ ಜಮೀನು ವಕ್ಫ್​​ಗೆ ಸೇರಬಾರದು ಎಂದು ಆಗ್ರಹಿಸಿ ಇಂದು ರೈತರು ರೈತ ಸಂಘಟನೆಗಳು ಡಿಸಿ ಕಚೇರಿ ಬಳಿ ಹೋರಾಟ ಮಾಡಿವೆ.

ಕಂಗಾಲಾದ ರೈತರು 

ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ 7 ಹಾಗಾ 8 ರಂದು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ವಕ್ಪ್ ಅದಾಲತ್ ನಡೆಸಿದ್ದರು. ಜೊತೆಗೆ ವಕ್ಪ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ವಕ್ಫ್ ಆಸ್ತಿಯ ಭೂಮಿ ಸರ್ವೆ, ಫ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆಗೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಆದೇಶ ನೀಡಿದ್ದರು. ಈ ಹಿನ್ನಲೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಯಾ ತಾಲೂಕುಗಳ ತಹಶೀಲ್ದಾರರು ರೈತರಿಗೆ ನಿಮ್ಮ ಜಮೀನನನ್ನು ವಕ್ಪ್ ಆಸ್ತಿ ಕರ್ನಾಟಕ ಸರ್ಕಾರ ಅಂತಾ ನಮೂದು ಮಾಡುವ ಕುರಿತು ನೊಟೀಸ್ ಜಾರಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಇಲ್ಲವಾದರೆ ಏಕತರ್ಫೆ ಅಂತಾ ಪರಿಗಣಿಸಲಾಗುತ್ತದೆ ಎಂದು ನೊಟೀಸ್ ಜಾರಿ ಮಾಡಿದ್ದಾರೆ. ಇದು ರೈತರು ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ: ವಿಜಯಪುರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್​ ಹೆಸರು: ಕಂಗಾಲಾದ ಅನ್ನದಾತ

ಏಕಾಏಕಿ ನೊಟೀಸ್ ಜಾರಿ ಮಾಡಿದ್ದಾರೆ. ನಮ್ಮದು ವಂಶ ಪರಂಪರಾಗತವಾಗಿ ಬಂದ ಜಮೀನು. ಈ ಜಮೀನು ವಕ್ಪ್ ಗೆ ಹೇಗೆ ಹೋಗುತ್ತದೆ ಎಂದು ಚಿಂತಿತರಾಗಿದ್ದಾರೆ. ಇದ್ದಬದ್ದ ದಾಖಲೆಗಳನ್ನು ತಹಶೀಲ್ಧಾರರಿಗೆ ಸಲ್ಲಿಸೋಕೆ ಮುಂದಾಗಿದ್ದಾರೆ. ವಕ್ಪ್ ಸಚಿವರ ಮೌಖಿಕ ಆದೇಶದ ಮೇಲೆ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ಪ್ರಕಾರ ಕೆಲಸ ಮಾಡಬೇಕೆಂದು ಸರ್ಕಾರ ಹಾಗೂ ಆಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಕ್ಪ್ ಬೋರ್ಡ್ ಹಾಗೂ ರಾಜ್ಯ ಸರ್ಕಾರ ಶಾಮೀಲಾಗಿ ಈ ರೀತಿ ನಡೆದುಕೊಳ್ಳುತ್ತಿದೆ. ಕೆಲ ಪ್ರಕರಣಗಳಲ್ಲಿ ರೈತರಿಗೆ ಮಾಹಿತಿ ನೀಡದೇ ರೈತರ ಪಹನಿಯಲ್ಲಿ ವಕ್ಪ್ ಬೋರ್ಡ್ ಎಂದು ನಮೂದಿಸಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ರೈತರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.

13 ತಾಲೂಕಿನ ಹತ್ತಾರು ರೈತರಿಗೆ ನೊಟೀಸ್ ಜಾರಿ

ಜಿಲ್ಲೆಯಲ್ಲಿರುವ 13 ತಾಲೂಕಿನ ಹತ್ತಾರು ರೈತರಿಗೆ ನೊಟೀಸ್ ಜಾರಿ ಮಾಡಲಾಗಿದೆ. ನಾಲ್ಕಾರು ತಲೆ ಮಾರುಗಳಿಂದ ಒಂದೇ ಕುಟುಂಬದಕ್ಕೆ ಸೇರಿದ ಆಸ್ತಿಗೆ ಜಮೀನಿಗೆ ವಕ್ಪ್ ಎಂದು ನಮೂದಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದು ರೈತರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಅಜ್ಜ ಮುತ್ತಜ್ಜ ಹಾಗೂ ತಂದೆಯ ಕಾಲದಿಂದ ನಾವೇ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಆದರೆ ಇದೀಗ ವಕ್ಪ್ ನಮೂದು ಮಾಡುವ ನೊಟೀಸ್ ಜಾರಿಯ ಹಿಂದೆ ಯಾವ ಕುತಂತ್ರವೆಂದು ರೈತರು ಅರೋಪ ಮಾಡಿದ್ಧಾರೆ. ಹಿಂದಿನ ಕಾಲದಿಂದಲೂ, ಹಿರಿಯರ ಕಾಲದಿಂದಲೂ ವಾರ್ಸಾ ಮೂಲಕ ಬಂದಂತಹ ಜಮೀನುಗಳಿವೆ, ಇಂತಹ ಜಮೀನುಗಳನ್ನು ಉದ್ದೇಶ ಪೂರ್ವಕವಾಗಿ ಹಾಳು ಮಾಡುವ ಹುನ್ನಾರ ವಕ್ಫ್ ಕಮಿಟಿ ಮಾಡುತ್ತಿದೆ ಎಂದು ರೈತರು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲೆಯ ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ ಹಾಗೂ ಸಿಂದಗಿ ತಾಲೂಕಿನ ಭಾಗದಲ್ಲಿ ಹತ್ತಾರು ರೈತರಿಗೆ ಯಾವುದೇ ನೊಟೀಸ್ ಜಾರಿ ಮಾಡದೇ ಅವರ ಜಮೀನಿನ ಪಹಣಿಯ 9 ನೇ ನಂಬರಿನ ಋಣಗಳು ಎಂಬ ಕಾಲಂನಲ್ಲಿ ವಕ್ಪ್ ಬೋರ್ಡ್ ಬೆಂಗಳೂರು ಮಸಜೀತ್ (ಸುನ್ನಿ) ಎಂದು ನಮೂದು ಮಾಡಿದ್ದು ಸಹ ರೈತರ ಕಣ್ಣು ಕೆಂಪಾಗಿಸಿದೆ. ಬಡವನ ಕೋಪ ದವಡೆಗೆ ಮೂಲ ಎಂಬಂತೆ ರೈತರು ಭಯದಲ್ಲೇ ಇದ್ದಾರೆ. ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯ ರೈತ ಲಾಲಸಾಬ್ ಮುಲ್ಲಾ ಹಾಗೂ ಸಹೋದರರರಿಗೆ ಸೇರಿದ 110 ಎಕರೆ ಜಮೀನಿಗೆ ರ್ಡ್ ಬೆಂಗಳೂರು ಮಸಜೀತ್ (ಸುನ್ನಿ) ಎಂದು ನಮೂದು ಮಾಡಿದ್ದಾರೆ. ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಯಮನಪ್ಪಾ ಕೆಂಗನಾಳ ಎಂಬ ರೈತನ 14.32 ಎಕರೆ ಜಮೀನಿಗೆ ಯಾವುದೇ ನೊಟೀಸ್ ಜಾರಿ ಮಾಡದೇ ವಕ್ಪ್ ಬೋರ್ಡ್ ಬೆಂಗಳೂರು ಮಸಜೀತ್ (ಸುನ್ನಿ) ಎಂದು ನಮೂದು ಮಾಡಲಾಗಿದೆ. ಹೀಗೆ ನಮೂದು ಮಾಡಿರೋ ಕಾರಣ ನಮಗೆ ಜಮೀನಿನ ಮೇಲೆ ಸಾಲ ಸಿಗುತ್ತಿಲ್ಲ ಪರಭಾರೆ ಮಾಡಲಾಗುತ್ತಿಲ್ಲ. ಮಕ್ಕಳ ಶಿಕ್ಷಣ, ಮದುವೆ, ಮುಂಜಿವೆ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಈಗ ನಮ್ಮ ಜಮೀನು ವಕ್ಪ್ ಗೆ ಹೋಗುತ್ತದೆಯೋ ಎಂಬ ಭಯ ಆವರಿಸಿದೆ ಎಂದು ಹೂವಿನ ಹಿಪ್ಪರಗಿ ಗ್ರಾಮದ ರೈತ ಲಾಲಸಾಭ್ ಮುಲ್ಲಾ ಹೇಳಿದ್ದಾರೆ.

ಸರ್ಕಾರದ ಹಾಗೂ ವಕ್ಪ್ ಬೋರ್ಡ್ ನ ಈ ನಡೆಗೆ ವಿಜಯಪುರ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿವಿಧ ರೈತ ಪರ ಸಂಘಟನೆಗಳು ಇತರೆ ಸಂಘಟನೆಗಳು ವಕ್ಪ್ ಬೋರ್ಡ್ ನಡೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಡೀ ದೇಶದಲ್ಲಿ 1954 ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಕಾಯ್ದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಜಾರಿ ಮಾಡಿದ್ದರು. ಬಳಿಕ
1995 ರಲ್ಲಿ ವಕ್ಪ್ ಗೆ ಹೆಚ್ಚಿನ ಅಧಿಕಾರವನ್ನು ನೀಡಲಾಯಿತು. ಆಗ ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು. ಇದಾದ ನಂತರ 2013 ರಲ್ಲಿ ವಕ್ಪ್ ಕಾಯ್ದೆಗೆ ಸಂಪೂರ್ಣ ಸ್ವಾಯತ್ತತೆ ನೀಡುವ ಮೂಲಕ ಮರಣ ಶಾಸನವನ್ನೇ ಬರೆದರು.

ವಕ್ಪ್ ಕಾಯ್ದೆಯನ್ನೇ ರದ್ದು ಮಾಡುವಂತೆ ಪ್ರಧಾನಿ ಮೋದಿಗೆ ಒತ್ತಾಯ

2013 ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದಾಗ ವಕ್ಪ್ ಬೋರ್ಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಕಾನೂನು ಜಾರಿ ಮಾಡಿದ್ದರು. ವಕ್ಪ್ ಬೋರ್ಡ್ ನಿಂದ ಸಮಸ್ಯೆಗೀಡಾದರೆ ಬಾಧಿತರು ಸುಪ್ರೀಂ ಕೋರ್ಟ್ ನಲ್ಲೂ ಪ್ರಶ್ನೆ ಮಾಡದಂತೆ ನಿಯಮ ಜಾರಿಯಾಗಿತ್ತು. ವಕ್ಪ್ ಟ್ರಿಬ್ಯೂನಲ್ ಮುಂದೆ ಸಮಸ್ಯೆ ತೆಗೆದುಕೊಂಡು ಹೋಗಬೇಕಾಯಿತು. ಆದರೆ ಅಲ್ಲಿ ವಕ್ಪ್ ಪರವಾಗಿಯೇ ತೀರ್ಪು ಬರುತ್ತಿತ್ತು. ಇದು ಜನರಿಗೆ ಮಾಡಿದ ಮಹಾ ಮೋಸ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ. ಕಾರಣ ಪ್ರಧಾನಿ ನರೇಂದ್ರ ಮೋದಿ ವಕ್ಪ್ ಕಾಯ್ದೆಯನ್ನೇ ರದ್ದು ಮಾಡಬೇಕೆಂದು ಒತ್ತಾಯವನ್ನು ಮಾಡಿದ್ಧಾರೆ.

ಇದನ್ನೂ ಓದಿ: ಪಹಣಿಯಲ್ಲಿ ವಕ್ಫ್​​ ಹೆಸರು: ಜಿಲ್ಲಾಧಿಕಾರಿ ಕಚೇರಿ ಎದುರು ವಿಜಯಪುರ ರೈತರ ಪ್ರತಿಭಟನೆ

ಸದ್ಯ ವಕ್ಪ್ ಬೋರ್ಡ ಹೆಸರು ರೈತರ ಜಮೀನುಗಳಲ್ಲಿ ನಮೂದಾಗುತ್ತಿರೋದು ಸಮಸ್ಯೆಗೆ ಕಾರಣವಾಗಿದೆ. ನೊಟೀಸ್ ನೀಡದೇ ವಕ್ಪ್ ಹೆಸರು ನಮೂದು ಮಾಡಿದ್ದು ಯಾಕೆ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ. ತಲೆ ತಲೆಮಾರುಗಳಿಂದ ಬಂದ ಜಮೀನು ವಕ್ಪ್ ಗೆ ಹೇಗೆ ಹೋಗುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ನೊಟೀಸ್ ಪಡೆದಿರೋ ರೈತರು ಸೂಕ್ತ ದಾಖಲೆಗಳನ್ನು ನೀಡಲು ಸಿದ್ದತೆ ಮಾಡಿದ್ದಾರೆ. ಒಟ್ಟಾರೆ ವಕ್ಪ್ ಬೋರ್ಡ್ ವಿಚಾರ ಜಿಲ್ಲೆಯ ರೈತರಲ್ಲಿ ಗೊಂದಲ ಭಯ ಆತಂಕ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲಾ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ರೈತರಲ್ಲಿ ಜಾಗೃತಿ ಮೂಡಿಸೋ ಕೆಲಸ ಮಾಡಬೇಕಿದೆ. ಇಲ್ಲವಾದರೆ ರೈತರು ಭಯ ಆತಂಕ ದುಗಡದಲ್ಲೇ ಕಾಲ ಕಳೆಯುವಂತಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.