shakti scheme: ಆಟೋ-ಟೆಂಪೋಗಳಿಗೆ ಕುಸಿದ ಬೇಡಿಕೆ, ಚಾಲಕರ ದಾರುಣ ಸ್ಥಿತಿ, 6ನೇ ಗ್ಯಾರಂಟಿಯಾಗಿ ವಿಷದ ಬಾಟಲಿ ನೀಡಲು ಆಗ್ರಹ
ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎನ್ನುವಂತೆ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿ ಇದೀಗ ಆಟೋ ಚಾಲಕರು ದುಡಿಮೆ ಇಲ್ಲದೇ ಬೀದಿಗೆ ಬರುವಂತಾಗಿದೆ. ಆರನೇ ಗ್ಯಾರಂಟಿಯಾಗಿ ಆಟೋ ಚಾಲಕರಿಗೆ ವಿಷದ ಬಾಟಲಿ ನೀಡಬೇಕು ಎಂದು ಆಕ್ರೋಶ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ತರುತಿದ್ದಂತೆ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳೇ ಹೆಚ್ಚಾಗಿರುವ ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಆಟೋಗಳಿಗೆ ಬೇಡಿಕೆ ಕುಸಿತ ಕಂಡಿದ್ದು ಆಟೋಗಳು ಪ್ರಯಾಣಿಕರಿಲ್ಲದೇ ಖಾಲಿ ಹೊಡೆಯುತ್ತಿವೆ. ಈ ಕುರಿತು ಒಂದು ವರದಿ ಇಲ್ಲಿದೆ.. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಶಕ್ತಿ ಯೋಜನೆ (shakti scheme) ಜಾರಿಯಾಗಿ ವಾರಗಳೇ ಕಳೆದಿವೆ. ಇದೀಗ ಪ್ರಯಾಣಿಕರನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಆಟೋ ಚಾಲಕರಿಗೆ ಶಕ್ತಿ ಯೋಜನೆಯ ದೊಡ್ಡ ಹೊಡೆತ ಬೀಳತೊಡಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 8500 ಆಟೋಗಳಿವೆ (Auto Tempo transportation). ನಗರ ಪ್ರದೇಶ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಜನರೇ ಆಟೋ ಚಾಲಕರ ದಿನದ ತುತ್ತಿಗೆ ಮೂಲವಾಗಿತ್ತು.
ಆದರೆ ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ನಗರ ಪ್ರದೇಶದ ಮಹಿಳೆಯರು ನಗರ ಸಾರಿಗೆ ಅವಲಂಬಿಸಿದರೆ, ಪ್ರವಾಸ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವವರು ಸಹ ಸರ್ಕಾರಿ ಬಸ್ ನತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಆದ್ರೆ ಆಟೋಗಳು, ಟೆಂಪೋಗಳು ಪ್ರಯಾಣಿಕರಿಗೆ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳನ್ನು ನಂಬಿದ ಆಟೋ ಚಾಲಕರು ಇದೀಗ ತಮ್ಮ ವೃತ್ತಿಯನ್ನೇ ಬದಲಿಸುವ ಸ್ಥಿತಿಗೆ ಬಂದಿದ್ದು ಜಿಲ್ಲೆಯ ಬಹುತೇಕ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆಯಿಂದ ದಿನದ ಕೂಲಿ ಸಹ ದುಡಿಯದ ಸ್ಥಿತಿಗೆ ಆಟೋಚಾಲರು ಬಂದು ನಿಂತಿದ್ದಾರೆ.
ಸರ್ಕಾರ ಫ್ರೀ ಬಸ್ ಪ್ರಯಾಣವನ್ನು ಮಹಿಳೆಯರಿಗಾಗಿ ಬಿಟ್ಟಿದೆ. ಆದ್ರೆ ಇದರ ಜೊತೆ ಆಟೋ ಚಾಲಕ ಜೀವನದ ಮೇಲೆ ಬರೆ ಎಳೆದಿದ್ದು ಇದರಿಂದ ಆಟೋ ಚಾಲಕರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ರಾಜ್ಯದ ಆಟೋ ಚಾಲಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.. ಪ್ರತಿ ತಿಂಗಳು 10,000 ರೂ ಪರಿಹಾರ ಹಣವಾಗಿ ಆಟೋ ಚಾಲಕರಿಗೆ ನೀಡಬೇಕು ಇಲ್ಲವಾದರೇ ಆರನೇ ಗ್ಯಾರಂಟಿಯಾಗಿ ಆಟೋ ಚಾಲಕರಿಗೆ ವಿಷದ ಬಾಟಲಿ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಒಂದು ವೇಳೆ ಸರ್ಕಾರ ನಮ್ಮ ಬದುಕಿನ ಬಗ್ಗೆ ಕಿಂಚಿತ್ತು ಯೋಚನೆ ಮಾಡದೆ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಆಟೋ ಚಾಲಕರ ಸಂಘ ನೀಡಿದೆ.
ಉತ್ತರ ಕನ್ನಡ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ