
ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋದವರು ನೀರು ಪಾಲಾಗಿದ್ದಾರೆ. ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು, ಈ ಪೈಕಿ ಎಂಟು ಜನ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಲಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಪ್ಪೆ ಚಿಪ್ಪು ತೆಗೆಯಲೆಂದು ಒಟ್ಟು 14 ಜನ ಇಂದು (ಮೇ 24) ಬೆಳಗ್ಗೆ ತಟ್ಟಿಹಕ್ಕಲು ಬಳಿ ನದಿಗೆ ಹೋಗಿದ್ದರು. ಎಲ್ಲರೂ ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ.
ಇನ್ನು 14 ಜನರ ಪೈಕಿ ಎಂಟು ಜನರು ಸಾವನ್ನಪ್ಪಿದ್ದು, ನಾಲ್ವರನ್ನ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾವನ್ನಪ್ಪಿದ ಎಂಟು ಜನರಲ್ಲಿ ಒರ್ವ ಪುರುಷ 7 ಜನ ಮಹಿಳೆಯರು ಎಂದು ತಿಳಿದುಬಂದಿದ್ದು, ನಾಪತ್ತೆಯಾಗಿರುವ ಇಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.
ಲಕ್ಷ್ಮೀ ಮಾದೇವ ನಾಯ್ಕ(38), ಲಕ್ಷ್ಮೀ ಶಿವರಾಮ್ ನಾಯ್ಕ(39), ಮಾಲತಿ ಜಟ್ಟಪ್ಪ ನಾಯ್ಕ(38), ಮಾಸ್ತಮ್ಮ ಮಂಜುನಾಥ ನಾಯ್ಕ(43), ಲಕ್ಷ್ಮೀ ನಾಯ್ಕ, ಲಕ್ಷ್ಮೀ ಅಣ್ಣಪ್ಪ ನಾಯ್ಕ(44), ಜ್ಯೋತಿ ನಾಯ್ಕ(37)
ಉಮೇಶ್ ಮಂಜುನಾಥ ನಾಯ್ಕ(42) ಮೃತರು. ಮೃತರು ಒಂದೇ ಕುಟುಂಬದ ಪಡುಶಿರಾಲಿ ಶಾರದಹೊಳೆ ನಿವಾಸಿಗಳು.
ಕಪ್ಪೆಚಿಪ್ಪು ತೆಗೆಯಲು ಹೋದ 14 ಜನರ ಪೈಕಿ 8 ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ, ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಪ್ಪೆಚಿಪ್ಪು ತೆಗೆಯಲು ಹೋದ ಎಲ್ಲರೂ ಭಟ್ಕಳದ ಶಿರಾಲಿ ಮೂಲದ ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.
Published On - 3:34 pm, Sun, 24 May 26