ಡಿಜಿಟಲ್ ಅರೆಸ್ಟ್ ಬೆದರಿಕೆ: ಇರುವ ಹಣವೆಲ್ಲ ಕೊಟ್ಟು ಯಾಮಾರಿದ ನಿವೃತ್ತ ಶಿಕ್ಷಕ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಿವೃತ್ತ ಶಿಕ್ಷಕರೋರ್ವರು ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ 1.6 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚಕರು ಪೊಲೀಸರಂತೆ ನಟಿಸಿ ಮನಿ ಲಾಂಡ್ರಿಂಗ್ ಆರೋಪದ ಭೀತಿ ಹುಟ್ಟಿಸಿದ್ದಾರೆ. ಹಣವನ್ನು 'ನ್ಯಾಷನಲ್ ಫಂಡ್'ಗೆ ಜಮೆ ಮಾಡುವಂತೆ ನಂಬಿಸಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರವಾರ, ಜನವರಿ 02: ನಿವೃತ್ತ ಶಿಕ್ಷಕನಿಗೆ ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿ ವಂಚಕರು ಬರೋಬ್ಬರಿ ಒಂದೂವರೆ ಕೋಟಿಗೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ನಲ್ಲಿ ನಡೆದಿದೆ. ಅಪರಿಚಿತರ ಕರೆ ನಂಬಿ ಟಿಬೇಟಿಯನ್ ಕ್ಯಾಂಪ್ ನಂಬರ್ 8ರ ನಿವಾಸಿ ಪಲ್ಡೆನ್ ಲೋಬ್ಸಂಗ್ ಚೊಡಾಕ್ ಮೋಸ ಹೋಗಿದ್ದಾರೆ.
2025ರ ನವೆಂಬರ್ 29ರಂದು ಯುವತಿಯೊಬ್ಬಳು ನಿವೃತ್ತ ಶಿಕ್ಷಕರಿಗೆ ವಿಡಿಯೋ ಕರೆ ಮಾಡಿದ್ದು, ಮುಂಬಯಿಯ ಕೋಲವಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾತಾಡ್ತಾರೆಂದು ಓರ್ವ ಪುರುಷನಿಗೆ ಫೋನ್ ಕೊಟ್ಟಿದ್ದಾಳೆ. ಮುಂಬಯಿನಲ್ಲಿ ಇತ್ತಿಚೆಗೆ ಉಗ್ರವಾದಿಯ ಬಂಧನ ಆಗಿದ್ದು, ಆತನ ಬಳಿ 250ಕ್ಕೂ ಹೆಚ್ಚು ಎಟಿಎಂ ಕಾರ್ಡ್ಗಳು ಸಿಕ್ಕಿವೆ. ಅದರಲ್ಲಿ ನಿಮ್ಮ ಹೆಸರಿನ ಕಾರ್ಡ್ ಕೂಡ ಇದೆ. ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಕೊಟ್ಯಾಂತರ ರೂಪಾಯಿ ಮನಿ ಲಾಂಡ್ರಿಂಗ್ ನಡೆದಿದೆ ಎಂದು ಬೆದರಿಸಿದ್ದಾರೆ. ಮುಖಕ್ಕೆ ಬಟ್ಟೆ ಧರಿಸಿದ್ದವರು ಹೇಳಿದ ಮಾತುಗಳಿಂದ ಭಯಗೊಂಡ ಪಲ್ಡೆನ್, ನನ್ನದೇನೂ ತಪ್ಪಿಲ್ಲ. ಈಗ ನಾನೇನು ಮಾಡಬೇಕು ಹೇಳಿ ಎಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ನಿವೃತ್ತ ಶಿಕ್ಷಕನ ಬಳಿ ಹಣ ಪೀಕಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ವಂಚನೆಗೆ ಹೆದರಿ ಫ್ಲಾಟ್, ಸೈಟ್ ಮಾರಿದ್ದಲ್ಲದೆ ಸಾಲ ಮಾಡಿ 2 ಕೋಟಿ ರೂ. ಕಳೆದುಕೊಂಡ ಮಹಿಳಾ ಟೆಕ್ಕಿ
ತನಿಖೆಗಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನ ಹಂತಹಂತವಾಗಿ ನಮ್ಮ ಖಾತೆಗೆ ಹಾಕಿ. ನಿಮ್ಮ ಹಣವನ್ನ ನ್ಯಾಷನಲ್ ಫಂಡ್ಗೆ ಜಮೆ ಮಾಡಬೇಕು. ಬಳಿಕ ಹಣವನ್ನು ರಿಟರ್ನ್ ಕೊಡಲಾಗುವುದೆಂದು ನಂಬಿಸಿದ್ದಾರೆ. ವಿಷಯವನ್ನ ಯಾರೊಂದಿಗೂ ಶೇರ್ ಮಾಡದಂತೆ ಷರತ್ತು ಕೂಡ ವಿಧಿಸಿದ್ದಾರೆ. ಡಿ. 3ರಿಂದ 11ರ ವರೆಗೆ ಬೇರೆ ಬೇರೆ ಖಾತೆಗೆ ಒಟ್ಟು 1,61,00,047 ರೂಪಾಯಿ ಹಾಕಿಸಿಕೊಂಡಿದ್ದ ವಂಚಕರು, ಮತ್ತೆ ಕರೆ ಮಾಡಿ ನಿಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅದು ಬೇಡವೆಂದರೆ ಮತ್ತೆ 40 ಲಕ್ಷ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಇದ್ದ ಹಣವನ್ನೆಲ್ಲ ಇವರಿಗೆ ಅದಾಗಲೇ ಕೊಟ್ಟಿದ್ದ ಪಲ್ಡೆನ್, ಸ್ನೇಹಿತನಿಗೆ ಕರೆ ಮಾಡಿ 40 ಲಕ್ಷ ಕೇಳಿದ್ದಾರೆ. ಆಗ ಇಷ್ಟೊಂದು ಹಣ ಯಾಕೆಂದು ಆತ ವಿಚಾರಿಸಿದ ವೇಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆಗ ವಂಚನೆ ಬಗ್ಗೆ ಗೊತ್ತಾಗಿ, ಕೂಡಲೇ ಪಲ್ಡೆನ್ ಅವರು ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಕಾರವಾರ ಸೈಬರ್ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Fri, 2 January 26



