ಗೋಕರ್ಣದಲ್ಲಿ ಮತ್ತೆ ಆರಂಭವಾಯ್ತು ಪ್ರವಾಸಿ ಮಾಹಿತಿ ಕೇಂದ್ರ: ಡೇಂಜರಸ್ ಸ್ಪಾಟ್ಗಳ ಬಗ್ಗೆ ನೀಡಲಿದೆ ಅಲರ್ಟ್
ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಒಂದಾದ ಗೋಕರ್ಣದ ಸುತ್ತ ಅನೇಕ ಅತ್ಯಾಕರ್ಷಣೀಯ ತಾಣಗಳಿವೆ. ಪ್ರವಾಸಿಗರು ಗೂಗಲ್ ಮ್ಯಾಪ್ ಸಹಾಯದಿಂದ ಸ್ಥಳಕ್ಕೆ ಭೇಟಿ ನೀಡಿ, ಅಪಾಯಕಾರಿ ಸ್ಥಳಗಳಲ್ಲಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ. ಸದ್ಯ ಪ್ರವಾಸಿಗರ ಸುರಕ್ಷತೆ ಹಾಗೂ ಗೋಕರ್ಣದ ಕುರಿತ ಸಂಪೂರ್ಣ ಪರಿಚಯಿಸಲು ಮಾಹಿತಿ ಕೇಂದ್ರ ಪುನರಾರಂಭ ಮಾಡಲಾಗಿದೆ. ಗೋಕರ್ಣದ ಸುತ್ತಲೂ 30 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಕಾರವಾರ, ಮೇ 15: ದಕ್ಷಿಣ ಕಾಶಿ ಎಂದೇ ಹೆಸರು ಪಡೆದ ಪ್ರವಾಸಿ ತಾಣ ಗೋಕರ್ಣ (Gokarna). ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ದೇಶ ವಿದೇಶಗಳಿಂದ ಬರುತ್ತಾರೆ. ಗೋಕರ್ಣಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ದೇವಸ್ಥಾನಕ್ಕಷ್ಟೇ ಭೇಟಿ ನೀಡದೆ ಸುತ್ತಮುತ್ತಲಿನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಓಂ ಕಡಲ ತೀರ, ಕುಡ್ಲೆ ಕಡಲ ತೀರ, ಪ್ಯಾರಡೈಸ್ ಕಡಲ ತೀರ, ಹಾಫ್ ಮೂನ್ ಕಡಲ ತೀರ, ಸೇರಿದಂತೆ ನಾನಾ ಪ್ರವಾಸಿ ತಾಣಗಳು ಗೋಕರ್ಣ ಸುತ್ತಮುತ್ತ ಇವೆ. ಆದರೆ, ಗೋಕರ್ಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಿಗೆ ತೆರಳಬೇಕು, ಯಾವ ಸ್ಥಳ ಎಷ್ಟು ಅಪಾಯಕಾರಿ, ಅಲ್ಲಿನ ಭೌಗೋಳಿಕ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಕೊಡುವ ಕಾರ್ಯ ಆಗುತ್ತಿರಲಿಲ್ಲ. 20 ವರ್ಷಗಳ ಹಿಂದೆ ಗೋಕರ್ಣದಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಪ್ರಾರಂಭಿಸಿ ನಂತರ ಸಿಬ್ಬಂದಿಗಳ ಕೊರತೆಯಿಂದ ಮುಚ್ಚಲಾಗಿತ್ತು. ಸದ್ಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಅವರ ಆಸಕ್ತಿಯಿಂದ ಮತ್ತೆ ಪ್ರವಾಸಿ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಬುಧವಾರ ಚಾಲನೆ ದೊರೆತಿದೆ.
ಪ್ರವಾಸಿ ಮಾಹಿತಿ ಕೇಂದ್ರ, ಗೋಕರ್ಣದ 33 ಕಡೆ ಸಿಸಿಟಿವಿ ಕ್ಯಾಮರಾ
ಈ ಪ್ರವಾಸಿ ಮಾಹಿತಿ ಕೇಂದ್ರವನ್ನು ಗೋಕರ್ಣದ ಪ್ರಮುಖ ಸ್ಥಳದಲ್ಲಿ ತೆರೆಯಲಾಗಿದ್ದು, ಪ್ರತಿದಿನ ಒರ್ವ ಸಿಬ್ಬಂದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೇ ಗೋಕರ್ಣದ 33 ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವುಗಳ ನಿರ್ವಹಣೆಯನ್ನೂ ಈ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಇನ್ನು ಸಿಸಿಟಿವಿಯ ಮೂಲಕ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನ ಇರಿಸುವುದು ಹಾಗೂ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಣ್ಗಾವಲು ಹಾಕಲು ಈ ಕೇಂದ್ರ ಪ್ರಾರಂಭಿಸಲಾಗಿದೆ.
ಮತ್ತೊಂದೆಡೆ, ಗೋಕರ್ಣಕ್ಕೆ ಪ್ರತಿ ವರ್ಷ ಬರುವ ಪ್ರವಾಸಿಗರ ಸಂಖ್ಯೆ ಎಷ್ಟೆಂಬ ನಿಖರ ಲೆಕ್ಕಾಚಾರ ಈವರೆಗೆ ಸಿಗುತ್ತಿರಲಿಲ್ಲ. ಸದ್ಯ ಪ್ರವಾಸಿ ಮಾಹಿತಿ ಕೇಂದ್ರ ಗೋಕರ್ಣ ಸರಹದ್ದು ಆರಂಭವಾಗುವ ಸ್ಥಳದಲ್ಲೇ ಸ್ಥಾಪಿಸಲಾಗಿದ್ದು, ಪ್ರತಿನಿತ್ಯ ಬರುವ ಪ್ರವಾಸಿಗರು ಎಷ್ಟು ಎಂಬ ಲೆಕ್ಕ ಸಿಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಮಂಜುನಾಥ್ ನಾವಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಡಮಾನ್, ನಿಕೋಬಾರ್ ಮಾದರಿಯಲ್ಲಿ ಕರಾವಳಿ ಕರ್ನಾಟಕದಕಲ್ಲೂ ದ್ವೀಪ ಪ್ರವಾಸೋದ್ಯಮ ಆರಂಭಿಸಲು ಸಿದ್ದತೆ
ಕೆಲ ದಿನಗಳ ಹಿಂದೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ತಮಿಳುನಾಡು ಮೂಲದ ಇಬ್ಬರು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ಸೂಕ್ತ ಮಾಹಿತಿ ಇಲ್ಲದೇ ಅಪಾಯಕಾರಿ ಸ್ಥಳಕ್ಕೆ ತೆರಳಿ ಸಮುದ್ರಪಾಲಾಗಿದ್ದರು. ಈ ನಿಟ್ಟಿನಲ್ಲಿ ಮುಂದೆ ಇಂತಹ ಅನಾಹುತ ಆಗಬಾರದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಪ್ರವಾಸಿಗರಿಗೆ ಸುರಕ್ಷಿತ ಜಾಗಗಳ ಬಗ್ಗೆ ಮಾಹಿತಿ ಕೊಟ್ಟು ಅವರ ಸುರಕ್ಷತೆಗೆ ಮುಂದಾಗಿದ್ದಾರೆ. ಇದರಿಂದ ಗೋಕರ್ಣ ಪ್ರವಾಸೋದ್ಯಮ ಬೆಳವಣಿಗೆಗೆ ಇನ್ನಷ್ಟು ಸಹಕಾರವಾಗಲಿದೆ ಎನ್ನಲಾಗಿದೆ.







