ಕಾರವಾರ: ಹಿಂದೂಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆರೋಪ; ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯರ ಆಗ್ರಹ
ಹಿಂದೂಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಸ್ಥಳೀಯರು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ. ಇನ್ನು ಪ್ರಾರ್ಥನೆ ಆಯೋಜನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಉತ್ತರ ಕನ್ನಡ, ಸೆ.03: ಇತ್ತೀಚೆಗಷ್ಟೆ ಹಿಂದೂ ದೇವರುಗಳಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದ ಹಿನ್ನಲೆ ಕಾರವಾರ (Karwar) ದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದೀಗ ಹಿಂದೂಗಳನ್ನು ಕ್ರಿಶ್ಚಿಯನ್ (Christian) ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಸ್ಥಳೀಯರು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ. ಇಂದು ಚಿತ್ತಾಕುಲದ ಕ್ರಿಶ್ ಹಾಲ್ (ನಕ್ಷತ್ರ ಹಾಲ್)ನಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದ ಚಿತ್ತಾಕುಲದ ಶ್ಯಾಮ್ ನಾಯಕ್ ಎಂಬುವವರು ಪ್ರಾರ್ಥನೆ ಆಯೋಜನೆ ಮಾಡಿದ್ದರು.
ಪ್ರಾರ್ಥನೆ ಆಯೋಜನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹ
ಇನ್ನು ಪ್ರಾರ್ಥನೆ ಆಯೋಜನೆ ಮಾಡಿದ ಹಿನ್ನಲೆ 48 ಕ್ಕೂ ಹೆಚ್ಚು ಜನ ಹಿಂದೂಗಳು ಇದರಲ್ಲಿ ಭಾಗಿಯಾಗಿದ್ದರು. ಇದರಿಂದ ಸ್ಥಳೀಯರು ಆಕ್ರೋಶಗೊಂಡು, ಪ್ರಾರ್ಥನೆ ನಡೆಯುತಿದ್ದ ಹಾಲ್ಗೆ ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸಿದರು. ಹಿಂದೂಗಳನ್ನು ಕ್ರಿಶ್ಚಿಯನ್ನರಾಗಿ ಮತಾಂತರಗೊಳಿಸಲು ಅಮಲು ಪದಾರ್ಥ ನೀಡಿ ನಂತರ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಹೀಗಾಗಿ ಪ್ರಾರ್ಥನೆ ಆಯೋಜನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹಿಂದೂಗಳೂ ಮುಸ್ಲಿಂ ಯುವತಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ: ಆರೂಢ ಭಾರತೀ ಶ್ರೀ ಎಚ್ಚರಿಕೆ
ಆಗಸ್ಟ್ 31 ರಂದು ಹಿಂದೂ ದೇವರನ್ನು ಆಶ್ಲೀಲ ಪದಗಳಿಂದ ನಿಂದಿಸಿರುವ ಹಿನ್ನೆಲೆ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ವಿರುದ್ದ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.1 ರಂದು ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈತ ಯೇಸುವನ್ನು ಹೊಗಳಿ ಹಿಂದೂ ದೇವರನ್ನು ಅವಹೇಳನ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನಲೆ, ದಲಿತ ಸಮುದಾಯದ ಜನರೇ ಆತನನ್ನು ಬಂಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದ್ದರು.
ಹೌದು, ಆರೋಪಿ ಎಲಿಷಾ ಎಲಕಪಾಟಿ ಅವರು ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಾರವಾರದ ಪೊಲೀಸ್ ಠಾಣೆ ಮುಂದೆ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹಿಂದೂ ದೇವತೆಗಳನ್ನು ನಿಂದಿಸಿದ್ದ ಎಲಿಷಾ ಎಲಕಪಾಟಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಎಲಿಷಾ ಎಲಕಪಾಟಿಯನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದರು. ಇದೀಗ ಕಾರವಾರದಲ್ಲಿ ಮತಾಂತರ ಆರೋಪ ಕೇಳಿಬಂದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ