ಬಿಪಿಎಲ್ ಕಾರ್ಡ್ಗೆ ಪುಲ್ ಡಿಮಾಂಡ್; ಸರ್ಕಾರದ ಗ್ಯಾರಂಟಿ ಭಾಗ್ಯಕ್ಕಾಗಿ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತಿದ್ದಂತೆ ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳನ್ನು ತಕ್ಷಣ ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಯೋಜನೆಯ ಲಾಭ ಪಡೆಯಲು ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಲು ಜನ ಮುಗಿಬೀಳುತಿದ್ದು, ಅರ್ಜಿ ಕೊಟ್ಟವರು ಬಿ.ಪಿ.ಎಲ್ ಕಾರ್ಡ್ಗಾಗಿ ಮುಗಿಬೀಳುತಿದ್ದಾರೆ.

ಉತ್ತರ ಕನ್ನಡ: ಕಾಂಗ್ರೆಸ್(Congress) ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಐದು ಗ್ಯಾರಂಟಿಯನ್ನ ಘೋಷಣೆ ಮಾಡಿದ್ದು, ಇದೀಗ ಅದರ ಅನುಷ್ಠಾನಕ್ಕೆ ಮುಂದಾಗಿದೆ. ಹೀಗಾಗಿ ಯೋಜನೆಯ ಲಾಭ ಪಡೆಯಲು ಜಿಲ್ಲೆಯಲ್ಲಿ ಜನ ಮುಗಿಬೀಳುತಿದ್ದು, ಹಿಂದೆ ಬಿಪಿಎಲ್ ಕಾರ್ಡ್(BPL Card)ಗೆ ಅರ್ಜಿ ಸಲ್ಲಿಸಿದವರು ತಾಲೂಕು ಕಚೇರಿಗಳಲ್ಲಿ ಮುಗಿಬೀಳುತಿದ್ದರೆ, ಹೊಸ ಕಾರ್ಡ್ ಮಾಡಿಸಲು ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್ಗೆ ಧಾವಿಸುತಿದ್ದಾರೆ. ಆದ್ರೆ, ಸರ್ಕಾರದಿಂದ ಹೊಸ ರೇಷನ್ ಕಾಡ್೯ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಸರ್ಕಾರ ಸೂಚನೆ ನೀಡಿದ ನಂತರ ಬಿಪಿಎಲ್ ಕಾರ್ಡ್ ಮಾಡಿಸಲು ಆನ್ಲೈನ್ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಳು ಹೇಳುತ್ತಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಾಸ್ ಮರಳುವಂತಾಗಿದೆ. ಇನ್ನು ಈ ಹಿಂದೆಯೇ ಅರ್ಜಿ ಸಲ್ಲಿಸಿದವರಿಗೆ ಈವರೆಗೂ ಬಿ.ಪಿ.ಎಲ್ ಕಾರ್ಡ್ ದೊರೆಯದೇ ಸರ್ಕಾರಿ ಕಚೇರಿ ಹತ್ತಿಳಿಯುವಂತಾಗಿದ್ದು, ಹಿಡಿ ಶಾಪ ಹಾಕುವಂತಾಗಿದೆ.
ಇನ್ನು ಜಿಲ್ಲೆಯಲ್ಲಿ ಈವರೆಗೆ 15,170 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 14,669 ಅರ್ಜಿಗಳು ವಿಲೇವಾರಿಯಾಗಿದ್ದು, 501 ಅರ್ಜಿಗಳು ವಿತ್ ಡ್ರಾ ಮಾಡಿಕೊಂಡಿದ್ದಾರೆ. 12,472 ಅರ್ಜಿಗಳಲ್ಲಿ 5,901 ಅರ್ಜಿಗಳನ್ನು ಊರ್ಜಿತಗೊಳಿಸಲಾಗಿದ್ದು ,1,558 ಅರ್ಜಿಗಳನ್ನ ತಿರಸ್ಕರಿಸಲಾಗಿದೆ. 7,459 ರೇಷನ್ ಕಾರ್ಡ್ಗಳನ್ನು ಪ್ರಸಕ್ತ ಸಾಲಿನಲ್ಲಿ ಅರ್ಜಿದಾರರಿಗೆ ನೀಡಲಾಗಿದೆ. ಆದ್ರೆ, 7,210 ಅರ್ಜಿಗಳು ಸರ್ವರ್ ಸಮಸ್ಯೆ ಹಾಗೂ ಇತರೆ ಕಾರಣದಿಂದ ಪೇಂಡಿಂಗ್ ಇದ್ದು, ಅರ್ಜಿ ಸಲ್ಲಿಸಿದವರು ರೇಷನ್ ಕಾರ್ಡ್ಗಾಗಿ ಕಾಯುವಂತಾಗಿದೆ. ಇನ್ನು ಹೊಸ ಅರ್ಜಿಗಳನ್ನು ಸಹ ಸಲ್ಲಿಸಲು ಸರ್ಕಾರ ಸೂಚನೆ ನೀಡಿಲ್ಲ. ಈಗ ಕೇವಲ ರೇಷನ್ ಕಾಡ್೯ನಲ್ಲಾದ ತಪ್ಪುಗಳ ತಿದ್ದುಪಡೆಗೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಮಾತ್ರ ಅರ್ಜಿ ಪಡೆಯಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿ:ಕಾಂಗ್ರೆಸ್ನ 5 ಗ್ಯಾರಂಟಿಗಳ ಬಗ್ಗೆ ಜನರ ನಿರೀಕ್ಷೆ ಹುಸಿ: ಮಾಜಿ ಸಿಎಂ ಬೊಮ್ಮಾಯಿ ಆರೋಪ
ರಾಜ್ಯ ಸರ್ಕಾರ ತಾವು ನೀಡಿದ ಐದು ಗ್ಯಾರಂಟಿಗಳನ್ನು ಮೊದಲ ದಿನವೇ ಪೂರೈಸುವ ಘೋಷಣೆ ಮಾಡಿದ್ದರಿಂದ ತಮಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ ಈ ಯೋಜನೆಗೆ ಅಗತ್ಯವಾಗಿ ಬೇಕಾದ ಬಿಪಿಎಲ್ ಕಾರ್ಡ್ ಬೇಡಿಕೆ ಹೆಚ್ಚಾಗಿದ್ದು, ಆಹಾರ ಇಲಾಖೆ ಕಚೇರಿಗೆ ಮುಗಿಬೀಳುತಿದ್ದಾರೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ