AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವುಗಳು ನಮ್ಮ ಸ್ನೇಹಿತರಾಗಿದ್ದವು; ಕುಮಟಾದ ಗುಹೆಯಲ್ಲಿದ್ದ ರಷ್ಯನ್ ಮಹಿಳೆ ಸಮರ್ಥನೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿಯ ರಾಮತೀರ್ಥ ಗುಹೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದರು. ಆಕೆ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ರಷ್ಯಾಕ್ಕೆ ವಾಪಾಸ್ ಕಳುಹಿಸಲು ಮುಂದಾಗಿರುವ ಪೊಲೀಸರು ಅವರನ್ನೀಗ ತುಮಕೂರಿನ ರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಈ ನಡುವೆ ಆಕೆ 'ನಾವೇನೂ ಕಾಡಿನಲ್ಲಿ ಸಾಯುತ್ತಿರಲಿಲ್ಲ, ಇದಕ್ಕೂ ಮೊದಲು ಕೂಡ ಇದೇ ರೀತಿ ನೈಸರ್ಗಿಕವಾಗಿ ಕಾಡಿನೊಳಗೆ ನಾವು ವಾಸಿಸಿದ್ದೇವೆ' ಎಂದು ಸಮರ್ಥಿಸಿಕೊಂಡಿದ್ದಾರೆ.

ಹಾವುಗಳು ನಮ್ಮ ಸ್ನೇಹಿತರಾಗಿದ್ದವು; ಕುಮಟಾದ ಗುಹೆಯಲ್ಲಿದ್ದ ರಷ್ಯನ್ ಮಹಿಳೆ ಸಮರ್ಥನೆ
Russian Woman In Cave
ಸುಷ್ಮಾ ಚಕ್ರೆ
|

Updated on:Jul 15, 2025 | 5:01 PM

Share

ಬೆಂಗಳೂರು, ಜುಲೈ 15: ಕರ್ನಾಟಕದ ಉತ್ತರ ಕನ್ನಡ (Uttar Kannada) ಜಿಲ್ಲೆಯ ಕುಮಟಾ ತಾಲೂಕಿನ ರಾಮತೀರ್ಥದ ಬಳಿಯ ಗುಹೆಯಿಂದ ರಷ್ಯಾದ ಮಹಿಳೆ (Russian Woman in Cave) ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಿಸಲಾಗಿತ್ತು. ನಿರ್ಜನ ಪ್ರದೇಶದ ಗುಹೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾದ ಮಹಿಳೆ ನೈನಾ ಕುಟಿನಾ (Nina Kutina) ತಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ತಾವು ಹಾಗೂ ತಮ್ಮ ಮಕ್ಕಳು ಪ್ರಕೃತಿಯ ಜೊತೆಗಿನ ಜೀವನವನ್ನು ಎಂಜಾಯ್ ಮಾಡುತ್ತಿದ್ದೆವು. ನಾವೇನೂ ಕಾಡಿನಲ್ಲಿ ಸಾಯುತ್ತಿರಲಿಲ್ಲ. ಇದಕ್ಕೂ ಮೊದಲು ಕೂಡ ಹಲವು ಬಾರಿ ಇದೇ ರೀತಿ ಕಗ್ಗಾಡಿನಲ್ಲಿ ಜೀವನ ನಡೆಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಕಾಡಿನಲ್ಲಿ ವಾಸಿಸುವ ತಮ್ಮ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಗೋಕರ್ಣ ಪೊಲೀಸರು ನೈನಾ ಕುಟಿನಾ ಮತ್ತು ಅವರ ಮಕ್ಕಳನ್ನು ರಕ್ಷಿಸಿದ್ದರು. ನಂತರ ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅವರನ್ನು ಪ್ರಕ್ರಿಯೆಗೊಳಿಸಿತು. ಅಂದಿನಿಂದ ಆ ಕುಟುಂಬವನ್ನು ತುಮಕೂರಿನ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ‘ಕಾಡಿನಲ್ಲಿದ್ದರೂ ನನ್ನ ಮಕ್ಕಳು ಆರೋಗ್ಯವಾಗಿದ್ದಾರೆ. ಅವರ ಬೆಳವಣಿಗೆಯೂ ಚೆನ್ನಾಗಿದೆ. ಅವರು ಶಾಲೆಗೆ ಹೋಗದಿದ್ದರೂ ಸೃಜನಶೀಲ ಕಲಿಕೆಯಲ್ಲಿ ತೊಡಗಿದ್ದಾರೆ’ ಎಂದು ಆಕೆ ಹೇಳಿದ್ದಾರೆ. 2017ರಲ್ಲೇ ತನ್ನ ವೀಸಾ ಅವಧಿ ಮುಗಿದಿದೆ ಎಂಬುದನ್ನು ನೈನಾ ಕುಟಿನಾ ನಿರಾಕರಿಸಿದ್ದಾರೆ.

‘ಕಾಡಿನಲ್ಲಿ ನಾವು ಬಹಳ ಕಷ್ಟದ ಮತ್ತು ಅಪಾಯಕಾರಿ ಜೀವನ ನಡೆಸುತ್ತಿದ್ದೆವು ಎಂದು ಮಾಧ್ಯಮಗಳು, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾಗುತ್ತಿದೆ. ಆದರೆ, ನಾವು ಗುಹೆಯಲ್ಲಿ ಅತ್ಯಂತ ಸಂತೋಷದ ದಿನಗಳನ್ನು ಕಳೆದಿದ್ದೆವು. ನನ್ನ ಮಕ್ಕಳನ್ನು ನಾನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ನಮಗೆ ಪ್ರಕೃತಿಯಲ್ಲಿ, ಕಾಡಿನಲ್ಲಿ ವಾಸಿಸಿ ಬಹಳ ಅನುಭವವಿದೆ. ನಾವು ಕಾಡಲ್ಲಿ ಸಾಯುತ್ತಿರಲಿಲ್ಲ, ನಾನು ನನ್ನ ಹೆಣ್ಣುಮಕ್ಕಳನ್ನು ಕಾಡಿನಲ್ಲಿ ಸಾಯಲು ಕರೆತಂದಿಲ್ಲ. ಅವರು ಅಲ್ಲಿ ಬಹಳ ಸಂತೋಷವಾಗಿದ್ದರು, ಅವರು ಜಲಪಾತಗಳಲ್ಲಿ ಈಜುತ್ತಿದ್ದರು, ಮಲಗಲು ಉತ್ತಮ ಸ್ಥಳವಿತ್ತು. ನಾವು ಮಣ್ಣಿನಲ್ಲಿ ಆರ್ಟ್ ಮಾಡಿದ್ದೇವೆ, ಜೇಡಿಮಣ್ಣಿನ ವಿಗ್ರಹಗಳನ್ನು ಮಾಡಿದ್ದೇವೆ, ಪೇಂಟಿಂಗ್ ಮಾಡಿದ್ದೇವೆ. ಹೊಟ್ಟೆ ತುಂಬ ಬಿಸಿ ಬಿಸಿ ಅಡುಗೆ ತಿನ್ನುತ್ತಿದ್ದೆವು. ನಾನು ಗ್ಯಾಸ್ ಸ್ಟೌವ್​​ನಿಂದಲೇ ಅಡುಗೆ ಮಾಡಿ ಬಡಿಸುತ್ತಿದ್ದೆ. ಕಾಡೊಳಗೆ ತುಂಬಾ ಒಳ್ಳೆಯ ಮತ್ತು ರುಚಿಕರವಾದ ಆಹಾರ ತಿನ್ನುತ್ತಿದ್ದೆವು’ ಎಂದು ಆಕೆ ಹೇಳಿದ್ದಾರೆ.

‘ಕಾಡಿನಲ್ಲಿ ನನ್ನ ಮಕ್ಕಳಿಗೆ ಎಲ್ಲವೂ ಇತ್ತು. ಒಳ್ಳೆಯ ಬಟ್ಟೆ, ಉತ್ತಮ ನಿದ್ರೆ, ಕಲಾ ಪಾಠ, ಓದುವ ಮತ್ತು ಬರೆಯುವ ಪಾಠಗಳು ಎಲ್ಲವೂ ಇತ್ತು. ಅವರು ಎಂದಿಗೂ ಹಸಿದಿರಲಿಲ್ಲ. ನನ್ನ ಮಕ್ಕಳನ್ನು ಪೊಲೀಸರು ರಕ್ಷಣೆ ಎಂಬ ಹೆಸರಿನಲ್ಲಿ ಗುಹೆಯಿಂದ ಹೊರಗೆ ಕರೆದುಕೊಂಡುಬಂದ ನಂತರ ಮೊದಲ ಬಾರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅವರು ಇದುವರೆಗೂ ಆಸ್ಪತ್ರೆಯನ್ನೇ ನೋಡಿರಲಿಲ್ಲ. ಅವರಿಬ್ಬರೂ ಪರಿಪೂರ್ಣವಾಗಿ ಆರೋಗ್ಯವಾಗಿದ್ದರು. ಅವರ ಜೀವನದಲ್ಲಿ ಒಮ್ಮೆಯೂ ಅವರು ಅನಾರೋಗ್ಯದಿಂದ ಬಳಲಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ನಾವು ವಾಸ ಮಾಡಿದ್ದ ಗುಹೆ ಅಪಾಯಕಾರಿ ಕಾಡಿನೊಳಗೆ ಇರಲಿಲ್ಲ. ಅಲ್ಲಿಂದ ಸಮುದ್ರ ಕಾಣುತ್ತಿತ್ತು. ಇನ್ನೊಂದೆಡೆ ಸಣ್ಣ ಊರಿತ್ತು. ಪ್ರತಿ ಮೂರು ನಿಮಿಷಗಳಿಗೊಮ್ಮೆ ಪ್ರವಾಸಿಗರು ಸಮುದ್ರಕ್ಕೆ ಹೋಗುವ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ನಮಗೂ ಹಾವುಗಳು ಕಂಡಿದ್ದವು. ಆದರೆ, ಅದು ನಮಗೆ ಅಭ್ಯಾಸವಾಗಿತ್ತು. ಗುಹೆಯೊಳಗೆ ಬಂದರೂ ಹಾವು ನಮಗೇನೂ ಮಾಡುತ್ತಿರಲಿಲ್ಲ’ ಎಂದು ನೈನಾ ಹೇಳಿದ್ದಾರೆ.

ಇದನ್ನೂ ಓದಿ: ವೀಸಾ ಅವಧಿ ಮುಗಿದ ಕಾರಣ ರಷ್ಯನ್ ಮಹಿಳೆ ನೈನಾ ತನ್ನಿಬ್ಬರು ಮಕ್ಕಳೊಂದಿಗೆ ಗೋಕರ್ಣ ಬಳಿ ಗುಹೆಯಲ್ಲಿ ವಾಸವಾಗಿದ್ದಳೇ?

ವೀಸಾ ಅವಧಿ ಮುಗಿದಿದೆ ಎಂಬ ಕುರಿತಾದ ವಿವಾದದದ ಬಗ್ಗೆ ಮಾತನಾಡಿದ ನೈನಾ, ‘ಇದು ನಿಜವಲ್ಲ. 2017ರಿಂದ ನಾವು ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿದ್ದೇವೆ ಎಂಬುದು ಸುಳ್ಳು. ಪೊಲೀಸರು ನನ್ನ ಹಳೆಯ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡಿದ್ದಾರೆ. ನಮ್ಮ ವೀಸಾಗಳು ಇತ್ತೀಚೆಗೆ ಅವಧಿ ಮುಗಿದಿರುವುದು ನಿಜ. ಆದರೆ 2017ರ ನಂತರ ನಾವು ಇನ್ನೂ 4 ದೇಶಗಳಿಗೆ ಪ್ರಯಾಣಿಸಿ ಭಾರತಕ್ಕೆ ಈಗ ವಾಪಾಸಾಗಿದ್ದೇವೆ’ ಎಂದು ಅವರು ಹೇಳಿದರು.

‘ನನ್ನ ದೊಡ್ಡ ಮಗ ಸಾವನ್ನಪ್ಪಿದ ನಂತರ ನಾನು ಸ್ವಲ್ಪ ಹೆಚ್ಚು ಕಾಲ ಭಾರತದಲ್ಲಿ ಇದ್ದೆ. ಆದರೆ, 2017ರಿಂದ ಇಲ್ಲೇ ಇದ್ದೇವೆ ಎಂಬುದು ಸುಳ್ಳು. ನಾವು ಪ್ರಕೃತಿಯನ್ನು ಆರೋಗ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆಯೇ ವಿನಃ ಆಧ್ಯಾತ್ಮಿಕತೆಗಾಗಿ ಅಲ್ಲ. ನಾವು ಪ್ರಕೃತಿಯನ್ನು ಪ್ರೀತಿಸುತ್ತೇವೆ. ಏಕೆಂದರೆ ಅದು ನಮಗೆ ಆರೋಗ್ಯವನ್ನು ನೀಡುತ್ತದೆ. ನಾನು 15 ವರ್ಷಗಳಿಂದ ರಷ್ಯಾದಲ್ಲಿ ವಾಸಿಸುತ್ತಿಲ್ಲ. ಕೋಸ್ಟಾ ರಿಕಾ, ಮಲೇಷ್ಯಾ, ಬಾಲಿ, ಥೈಲ್ಯಾಂಡ್, ನೇಪಾಳ ಮತ್ತು ಉಕ್ರೇನ್‌ನಂತಹ ದೇಶಗಳಲ್ಲಿ ಸಮಯ ಕಳೆದಿದ್ದೇನೆ ಎಂದು ಆಕೆ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:01 pm, Tue, 15 July 25