ಬೇಡ್ತಿ-ಅಘನಾಶಿನಿ ನದಿ ತಿರುವು, ಜೋಡಣೆ ಯೋಜನೆಗೆ ವಿರೋಧ; ಸರ್ಕಾರದ ವಿರುದ್ಧ ಸಿಡಿದೆದ್ದ ಕರಾವಳಿ, ಮಲೆನಾಡಿಗರು

ಉತ್ತರ ಕನ್ನಡದ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಯೋಜನೆ ಪಶ್ಚಿಮ ಘಟ್ಟದ ಜೀವವೈವಿಧ್ಯತೆ, ಮೀನುಗಾರಿಕೆ ಹಾಗೂ ಕೃಷಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ಸಮಸ್ಯೆ, ಜಲಚರಗಳ ಅಳಿವು ಮತ್ತು ಅಘನಾಶಿನಿ ಮುಖಜ ಭೂಮಿಯ ನಾಶದ ಬಗ್ಗೆ ಆತಂಕ ವ್ಯಕ್ತವಾಗಿದೆ.

ಬೇಡ್ತಿ-ಅಘನಾಶಿನಿ ನದಿ ತಿರುವು, ಜೋಡಣೆ ಯೋಜನೆಗೆ ವಿರೋಧ; ಸರ್ಕಾರದ ವಿರುದ್ಧ ಸಿಡಿದೆದ್ದ ಕರಾವಳಿ, ಮಲೆನಾಡಿಗರು
ಉತ್ತರ ಕನ್ನಡ ನದಿ ಯೋಜನೆಗೆ ವಿರೋಧ
Image Credit source: tv9 kannada
Edited By:

Updated on: Sep 16, 2026 | 11:12 PM

ಕಾರವಾರ, ಸೆಪ್ಟೆಂಬರ್​ 16: ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ದೇಶಿಸಿರುವ ನದಿ ತಿರುವು ಮತ್ತು ಜೋಡಣೆ ಯೋಜನೆಗೆ ನಾಗರಿಕರಿಂದ ತೀವ್ರ ವಿರೋಧ ಕೇಳಿಬಂದಿದೆ. ಕಳೆದೊಂದು ವರ್ಷದಿಂದ ವಿವಿಧ ರೀತಿಯಲ್ಲಿ ಜನಾಂದೋಲನಗಳು ನಡೆಯುತ್ತಿದ್ದು, ರೈತರು, ಕೃಷಿಕರು ಹಾಗೂ ಮೀನುಗಾರರು ಸಿಡಿದೆದ್ದಾರೆ. ಪಶ್ಚಿಮ ಘಟ್ಟಗಳು, ಮತ್ತು ನದಿಗಳ ಮೇಲೆ ಪರಿಣಾಮ ಬೀರುವ ಯೋಜನೆ ಯಾವುದೇ ಕಾರಣದಿಂದಲೂ ಬೇಡವೆ ಬೇಡ ಎಂದು ಜನ ಒಕ್ಕೋರಲಿನಿಂದ ವಿರೋಧಿಸುತ್ತಿದ್ದಾರೆ.

ಪರಿಸರ ಹಾಗೂ ಸ್ಥಳೀಯರ ಬದುಕಿಗೆ ಕಂಟಕ

ರಾಜ್ಯದಲ್ಲಿ ವಿಶಿಷ್ಟವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಲ್ಲ, ಒಂದು ಯೋಜನೆಗಳನ್ನ ಹೇರಲು ಸರ್ಕಾರ ಮುಂದಾಗುತ್ತಿದೆ. ಜಿಲ್ಲೆಯ ಜನರ ಜೀವ ನಾಡಿಯಾಗಿರುವ ಬೇಡ್ತಿ-ಅಘನಾಶಿನಿ ನದಿಗಳನ್ನ ತಿರುಗಿಸುವ ಮತ್ತು ಜೋಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಕರಾವಳಿ ಮತ್ತು ಮಲೆನಾಡು ಭಾಗದ ರೈತರು, ಕೃಷಿಕರು ಹಾಗೂ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಂಕೋಲಾದಲ್ಲಿ ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ ರೂ. ಬೆಲೆಬಾಳುವ ಜಮೀನು ಮಾರಾಟ: ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಸೇರಿ ಐವರ ಬಂಧನ

ನದಿ ತಿರುವು ಯೋಜನೆಯಿಂದ ಪಶ್ಚಿಮಘಟ್ಟದ ಜೀವವೈವಿಧ್ಯತೆ ಹಾಗೂ ಅಘನಾಶಿನಿ ಮುಖಜ ಭೂಮಿ ನಾಶವಾಗುವ ಅಪಾಯವಿದೆ. ಅಲ್ಲದೇ ಮೀನುಗಾರರ ಬದುಕಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಈಗಾಗಲೇ ಈ ಭಾಗದಲ್ಲಿ ನದಿಗಳಲ್ಲಿ ಅಣೆಕಟ್ಟುಗಳನ್ನ ನಿರ್ಮಿಸಿ ಪಕ್ಕದ ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆಯಾಗಿದೆ. ಒಂದು ವೇಳೆ ಯೋಜನೆ ಮಾಡಿದರೆ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ವಿವಿಧ ಪಟ್ಟಣಗಳಿಗೆ ನೀರು ಪೂರೈಕೆ ಸ್ಥಗಿತಗೊಂಡು ಜನ ಸಂಕಷ್ಟ ಎದುರಿಸಲಿದ್ದಾರೆ.

ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಜನಾಂದೋಲನ

ಈಗಾಗಲೇ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಗಳ ಗೌರವಾಧ್ಯಕ್ಷತೆಯಲ್ಲಿ ಒಂದು ವರ್ಷದಿಂದ ಜನಾಂದೋಲನ ನಡೆಯುತ್ತಿದೆ. ಶಿರಸಿ, ಯಲ್ಲಾಪುರ, ಅಂಕೋಲಾ, ಕುಮಟಾ ಹಾಗೂ ಕಾರವಾರದ ನಾಗರಿಕರು ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಯೋಜನೆ ಜಾರಿ ಮಾಡಿದ್ರೆ ಇಲ್ಲಿನ ಜೀವವೈವಿಧ್ಯಗಳು ನಾಶವಾಗಲಿದೆ. ಮೀನುಗಾರಿಕೆಗೆ ಅನುಕೂಲವಾಗುವ ಜಲಚರಗಳು ಅಳಿಯುವ ಆತಂಕವಿದೆ. ಹೀಗಾಗಿ ಯೋಜನೆ ಬೇಡವೇ ಬೇಡ ಎನ್ನುತ್ತಿದ್ದಾರೆ ಈ ಭಾಗದ ಜನರು.

ಉಗ್ರ ಹೋರಾಟದ ಎಚ್ಚರಿಕೆ 

ಈಗಾಗಲೇ ಪತ್ರ ಚಳುವಳಿಯ ಮೂಲಕ ಒಂದು ಲಕ್ಷ ಪತ್ರವನ್ನ ಸರ್ಕಾರಕ್ಕೆ ಕಳಿಸಲಾಗಿದೆ. ನದಿಯ ತಿರುವು ಮತ್ತು ಜೋಡಣೆ ಮಾಡಿದ್ರೆ ಇಲ್ಲಿನ ಅಂತರ್ಜಲ ಮಟ್ಟ ಇನ್ನಷ್ಟು ಕುಸಿಯಲಿದೆ. ಹೀಗಾಗಿ ಯೋಜನೆಯ ವಿಸ್ತ್ರತ ವರದಿ ಸಿದ್ದಪಡಿಸಲು ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಭರ್ತಿ; ಕೆಆರ್‌ಎಸ್, ತುಂಗಭದ್ರಾ ಸ್ಥಿತಿಗತಿ ಇಲ್ಲಿದೆ

ಒಟ್ಟಿನಲ್ಲಿ ಎಲ್ಲಾ ಸಮುದಾಯದ ನಾಗರಿಕರಿಗೆ ನದಿ ತಿರುವು ಮತ್ತು ಜೋಡಣೆ ಯೋಜನೆಯಿಂದ ತೊಂದರೆಯಾಗಲಿದ್ದು, ಒಗ್ಗಟ್ಟಾಗಿ ಹೋರಾಟಕ್ಕೆ ಧುಮುಕಿದ್ದಾರೆ. ಹೀಗಾಗಿ ಸರ್ಕಾರ ಯೋಜನೆಯನ್ನ ಕೈ ಬಿಡುವ ಬಗ್ಗೆ ನಿರ್ಧಾರ ಮಾಡಬೇಕಾಗಿದೆ.

Bedti Aghanashini Project: ಉತ್ತರಕನ್ನಡದಲ್ಲಿ ನದಿ ತಿರುವು ಯೋಜನೆಗೆ ತೀವ್ರಗೊಂಡ ವಿರೋಧ| #Tv9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:33 pm, Wed, 16 September 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us