
ಕಾರವಾರ, ಜುಲೈ 16: ಉತ್ತರ ಕನ್ನಡ (Uttar Kannada) ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಆಲೂರು ಗ್ರಾಮದ ನಿವಾಸಿಯಾದ ಮಾನಸಿಕ ಅಸ್ವಸ್ಥ ವಿನಾಯಕ ವಸಂತ ಸೋಹನಶೇಟ್ (37 ವರ್ಷ) ಎಂಬುವರನ್ನು ಅವರ ಕುಟುಂಬಸ್ಥರೇ ಗೃಹಬಂಧನದಲ್ಲಿ ಇರಿಸಿದ್ದರು. ಹೊಲದ ಮಧ್ಯೆ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ, ಕಾಲಿಗೆ ಸರಪಳಿ ಕಟ್ಟಿ, ಆಚೀಚೆ ಓಡಾಡುವಷ್ಟು ಮಾತ್ರ ಅವಕಾಶ ನೀಡಿ ವಿನಾಯಕ ವಸಂತ ಸೋಹನಶೇಟ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ತಿನ್ನಲು ಸರಿಯಾದ ಆಹಾರವಿಲ್ಲದೆ, ಕುಡಿಯಲು ಸ್ವಚ್ಛ ನೀರಿಲ್ಲದೆ, ಚಿಕಿತ್ಸೆಯಿಲ್ಲದೆ ವಿನಾಯಕ ಅವರು ಬಳಲುತ್ತಿದ್ದರು.
ಈ ವಿಚಾರ ಗೊತ್ತಾಗುತ್ತಿದ್ದಂತೆ, ರೆಡ್ ಕ್ರಾಸ್ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ನಮ್ಮ ಟಿವಿ9 ತಂಡ ವಿನಾಯಕ ಅವರನ್ನು ಹುಡುಕುತ್ತ ನಿರ್ಮಾಣ ಹಂತದ ಮನೆಗೆ ತಲುಪಿತು. ಕೊನೆಗೂ ಆತನಿಗೆ ಸರಪಳಿಯ ನರಕದಿಂದ ಮುಕ್ತಿ ನೀಡಿದ್ದು, ದಾಂಡೇಲಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ವಿನಾಯಕ ಅವರ ತಂದೆ, ತಾಯಿಗೆ ಇಬ್ಬರು ಮಕ್ಕಳು. ವಿನಾಯಕ ಅವರೇ ಕೊನೆಯ ಮಗ. ವಿನಾಯಕ ಅವರ ತಂದೆ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಮೃತಪಟ್ಟರು. ಅನುಕಂಪದ ಆಧಾರದಡಿ ವಿನಾಯಕ್ ಅವರಿಗೆ ತಂದೆ ಕೆಲಸ ಸಿಕ್ಕಿತ್ತು. ವಿನಾಯಕ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲವು ವರ್ಷಗಳಿಂದ ವಿನಾಯಕ ಮಾನಸಿಕ ಅಸ್ವಸ್ಥನಾಗಿದ್ದಾರೆ.
“ತನಗೆ ಕೆಲಸ ಮಾಡಲು ಬೇಡವಾದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದೇನೆ. ನನಗೆ ಚಿಕಿತ್ಸೆ ಕೊಡಿಸಿ, ನಾನು ಆಸ್ಪತ್ರೆಗೆ ಬರುತ್ತೆನೆ” ಎಂದು ಗೃಹ ಬಂಧನದಿಂದ ಮುಕ್ತ ಆದ ಬಳಿಕ ವಿನಾಯಕ ಟಿವಿ9ಮುಂದೆ ಹೇಳಿದ್ದಾರೆ.
ಅಂದಹಾಗೆ ಗೃಹ ಬಂಧನದಲ್ಲಿದ್ದ ವಿನಾಯಕ ಆರ್ಥಿಕವಾಗಿ ಬಡವರಲ್ಲ. ದಾಂಡೇಲಿ ತಾಲೂಕಿನಲ್ಲಿ ಒಟ್ಟು 25 ಏಕರೆ ಕಬ್ಬಿನ ಗದ್ದೆ ಇದೆ. ಅಲ್ಲದೆ ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆ ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗ ಇದೆ. ವಿನಾಯಕ್ ಮಾನಸಿಕ ಅಸ್ವಸ್ಥ ಆದ ಹಿನ್ನೆಲೆಯಲ್ಲಿ ದೊಡ್ಡಣ್ಣ ಸಂಜಯ ಅವರೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು.
“ಕೆಲವು ವರ್ಷಗಳಿಂದ ವಿನಾಯಕ ಮಾನಸಿಕ ಅಸ್ವಸ್ಥನಾಗಿದ್ದು, ತಾನಿದ್ದ ಗುಡಿಸಲು ಹಾಗೂ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದರು. ಆಗ, ವಿನಾಯಕ ಅವರನ್ನು ಹುಬ್ಬಳ್ಳಿ ಸೇರಿದಂತೆ ಬೇರೆಕಡೆ ಚಿಕಿತ್ಸೆಯನ್ನು ಕೊಡಿಸಿದರೂ ಫಲಪ್ರದವಾಗಲಿಲ್ಲ. ದಿನಗಳು ಕಳೆದಂತೆ ವಿನಾಯಕ ಅವರ ಉಪಟಳ ತಾಳಲಾರದೆ, ನಿರ್ಮಾಣ ಹಂತದ ಮನೆಯ ಬಾತ್ ರೂಂ ಹಾಗೂ ಟಾಯಲೇಟ್ನಲ್ಲಿ ಆತನನ್ನು ಇರಿಸಿದ್ವಿ ಎಂದು ಅಣ್ಣ ಸಂಜಯ ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಉದ್ಯಮಿ ಜೊತೆ ಸಂಬಂಧ, ಗೋವಾ ಗುಹೆಯಲ್ಲಿ ಹೆರಿಗೆ; ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆಯ ಕತೆಯಿದು
ಒಟ್ಟಿನಲ್ಲಿ ಟಿವಿ9 ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಮಾನವೀಯ ಕೆಲಸದಿಂದ ವಿನಾಯಕ ಸರಪಳಿಯ ಬಂಧನದಿಂದ ಮುಕ್ತರಾಗಿದ್ದಾರೆ. ಆರೋಗ್ಯ ಸುಧಾರಿಸಿಕೊಳ್ಳಲು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ.