ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಟನಲ್‌ನಲ್ಲಿ ನೀರು ಸೋರಿಕೆ: ಸುರಂಗ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ ಜಿಲ್ಲಾಡಳಿತ
ಇತ್ತೀಚೆಗಷ್ಟೇ ವಾಹನಗಳು ಸಂಚಾರ ಮಾಡಲು ಓಪನ್ ಆಗಿದ್ದ ಸುರಂಗ ಮಾರ್ಗ ಪ್ರವಾಸಿಗರನ್ನ, ವಾಹನ ಸವಾರರನ್ನ ತನ್ನತ್ತ ಸೆಳೆದು, ನೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮಿತ್ತು. ಆದರೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಆ ಸುರಂಗ ಮಾರ್ಗದಲ್ಲಿ ನೀರು ಸೋರಿಕೆ ಪ್ರಾರಂಭವಾಗಿದೆ. ಇದರಿಂದಾಗಿ ಕಾಮಗಾರಿ ಬಗ್ಗೆ ಅನುಮಾನಿಸಿ ಸುರಂಗ ಮಾರ್ಗದಲ್ಲಿ ಸಂಚಾರವನ್ನ ಬಂದ್ ಮಾಡಲಾಗಿದೆ.
ಕಾರವಾರ: ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಭಾರೀ ಮಳೆ ಸುರಿತ್ತಿದೆ. ಸಾಕಷ್ಟು ಪ್ರಾಣಹಾನಿ ಕೂಡ ಸಂಭವಿಸಿದೆ. ಸದ್ಯ ನಿರಂತರ ಮಳೆಯಿಂದ ಉತ್ತರ ಕನ್ನಡ ಜಿಲ್ಲೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿಯಿರುವ ಸುರಂಗ ಮಾರ್ಗ (subway) ದಲ್ಲಿ ಸೋರಿಕೆ ಉಂಟಾಗಿದೆ. ಹಾಗಾಗಿ ಸುರಂಗ ಮಾರ್ಗದಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ಸುರಂಗದಲ್ಲಿ ನೀರು ಸೋರಿಕೆ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿದ ಬೆನ್ನಲ್ಲೇ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಐಆರ್‌ಬಿ ಸಿಬ್ಬಂದಿ ಜೊತೆ ಸಭೆ ನಡೆಸಿದ್ದರು. ಇಂದು ಬೆಳಗ್ಗೆ 11.30ರೊಳಗೆ ಸುರಂಗ ಮಾರ್ಗದ ಫಿಟ್ನೆಸ್ ಸರ್ಟಿಫಿಕೆಟ್ ನೀಡುವಂತೆ ಸೂಚಿಸಲಾಗಿತ್ತು. ಇದುವರೆಗೆ ಫಿಟ್ನೆಸ್ ಸರ್ಟಿಫಿಕೆಟ್ ನೀಡದ ಹಿನ್ನೆಲೆ ಸುರಂಗ ಮಾರ್ಗ ಬಂದ್ ಮಾಡಿ, ಬ್ಯಾರಿಕೇಡ್ ಅಳವಡಿಸಲಾಗಿದೆ.
ಇದನ್ನೂ ಓದಿ: ಕಾರವಾರಕ್ಕೆ ಬಂತು ಹೊಸ ಆಕರ್ಷಣೆ! ಪ್ರವಾಸಿಗರು ಸುರಂಗದ ಮೂಲಕ ಸಂಚರಿಸಬಹುದು, ಮೇಲಿಂದ ಠಾಗೋರ್ ಕಡಲ ತೀರ ನೋಡಿ ಆನಂದಿಸಬಹುದು!
ಉದ್ಘಾಟನೆಗೊಂಡು ಕೆಲವೆ ತಿಂಗಳಲ್ಲಿ ಟನಲ್‌ನಲ್ಲಿ ನೀರು ಸೋರಿಕೆ
ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರದ ಲಂಡನ್ ಬ್ರಿಡ್ಜ್ ಬಳಿ, ಗುಡ್ಡ ಕೊರೆದು ವಾಹನ ಸಂಚಾರಕ್ಕೆ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಆ ಸುರಂಗ ಮಾರ್ಗ ಕೆಲವೇ ತಿಂಗಳುಗಳ ಹಿಂದಷ್ಟೇ ಸಂಸದ ಅನಂತ ಕುಮಾರ ಹೆಗಡೆ ಅವರು ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ಆಗಿ ಕೆಲ ತಿಂಗಳಲ್ಲಿ ಸುರಂಗದ ತುಂಬ ನೀರು ಸೋರಿಕೆ ಪ್ರಾರಂಭವಾಗಿದೆ. ಟನಲ್ ಕಾಮಗಾರಿಯನ್ನ ಪರಿಶೀಲನೆ ಮಾಡಬೇಕು. ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದರ ಬಗ್ಗೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ಒತ್ತಾಯ ಮಾಡಲಾಗಿದೆ.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ದೌಡಾಯಿಸಿ ಐಆರ್‌ಬಿ ಸಿಬ್ಬಂದಿ ಕರೆದು ಸಭೆ ಮಾಡಿದ್ದರು. ಸಭೆಯಲ್ಲಿ ಟನಲ್‌ನಲ್ಲಿ ಯಾವ ಕಾರಣಕ್ಕೆ ನೀರು ಸೋರಿಕೆಯಾಗುತ್ತಿದೆ, ಟನಲ್ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವಂತೆ ಕೇಳಿದರು. ಕಕ್ಕಾಬಿಕ್ಕಿಯಾದ ಐಆರ್‌ಬಿ ಸಿಬ್ಬಂದಿ ಸಚಿವರ ಮಾತಿಗೆ ಉತ್ತರ ಕೊಡದೆ ಸುಮ್ಮನೆ ಕುಳಿತರು. ಆಗ ಸಿಬ್ಬಂದಿ ವಿರುದ್ಧ ಗರಂ ಆದ ಸಚಿವ ಮಂಕಾಳ ವೈದ್ಯ ಮತ್ತು ಕಾರವಾರ ಶಾಸಕ ಸತೀಶ್ ಸೈಲ್ ಸಂಚಾರಕ್ಕೆ ಯೋಗ್ಯವಲ್ಲದ ಟನಲ್ ಯಾಕೆ ಓಪನ್ ಮಾಡಿದರಿ, ಜನರ ಜೀವದ ಜೊತೆ ಆಡ ಆಡುತ್ತಿದ್ದಿರಾ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಕರ್ನಾಟಕದಲ್ಲಿ ಮಹಾ ಮಳೆಗೆ 20 ಜನರು ಸಾವು, 40ಕ್ಕೂ ಹೆಚ್ಚು ಜಾನುವಾರುಗಳು ಮೃತ
ಅವೈಜ್ಞಾನಿಕ ಕಾಮಗಾರಿ: ಸಚಿವರು ಗರಂ
ಸಚಿವರ ಮತ್ತು ಶಾಸಕರ ಪ್ರಶ್ನೆಗಳಿಗೆ, ಏನು ಉತ್ತರ ಕೊಡದೆ ಐಆರ್‌ಬಿ ಸಿಬ್ಬಂದಿ ಸುಮ್ಮನೆ ಕುಳಿತಿದ್ದರಿಂದ ಸಿಟ್ಟಿಗೆದ್ದ ಸಚಿವರು, ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಸೃಷ್ಟಿಯಾಗಿದೆ. ಚೆಂಡಿಯಾ, ಅರಗ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಹೆದ್ದಾರಿ ಉದ್ದಕ್ಕೂ ಗುಡ್ಡ ಕುಸಿತ, ಕೃತಕ ನೆರೆ ಸೃಷ್ಟಿಯಾಗಿ ಜನ ಸಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ.
ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ ಅಷ್ಟರಲ್ಲಿ ಟೋಲ್ ಸಂಗ್ರಹ ಪ್ರಾರಂಭ ಮಾಡಿದ್ದಿರಿ. ಜನರ ರಕ್ತ ಹೀರುತ್ತಿದ್ದಿರಿ. ಹೆದ್ದಾರಿ ಉದ್ದಕ್ಕೂ ಸರಿಯಾದ ಮಾರ್ಗ ಸೂಚಿಗಳಿಲ್ಲ, ಎಲ್ಲಿ ಬೇಕಲ್ಲಿ ಹೊಂಡ ಬಿದ್ದಿವೆ. ಇದರಿಂದ ಸಾವಿರಾರು ರಸ್ತೆ ಅಪಘಾತಗಳಾಗಿ ಜನ ಸಾವನ್ನಪ್ಪಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರಗೆ ಹಟ್ಟಿಕೇರಿ, ಹೊಳೆಗದ್ದೆ, ಶಿರೂರು ಟೋಲ್ ಬಂದ್ ಮಾಡಬೇಕು, ಯಾವುದೇ ವಾಹನಗಳಿಂದ ಹಣ ವಸೂಲಿ ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.