ಬೆಂಗಳೂರು, ಅಕ್ಟೋಬರ್ 16: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರಗೆ (B Nagendra) ಮೊನ್ನೆ ಜಾಮೀನು ಮಂಜೂರು ಆಗಿದೆ. ಜನಪ್ರತಿನಿಧಿಗಳ ಕೋರ್ಟ್, ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಡವಾಗಿ ಕೈ ಸೇರಿದ ಹಿನ್ನೆಲೆ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ನಾಗೇಂದ್ರ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದು, ದೇಶದಲ್ಲಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಆರೋಪ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ನಾಗೇಂದ್ರ, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ಆದರೂ ನನ್ನನ್ನು ಬಂಧಿಸಿ ಇಡಿ ಅಧಿಕಾರಿಗಳು 3 ತಿಂಗಳ ಕಾಲ ಕಿರುಕುಳ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಹಗರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಜಾಮೀನು ಮಂಜೂರು
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಎಸ್ಐಟಿ ನನ್ನ ಪಾತ್ರ ಇಲ್ಲ ಅಂದ್ರೂ ಕೇಂದ್ರ, ಬಿಜೆಪಿಯಿಂದ ಷಡ್ಯಂತ್ರ ರೂಪಿಸಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ಕೇಂದ್ರ ಹಾಗೂ ಬಿಜೆಪಿಯಿಂದ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಕೇಂದ್ರದ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಹಣ ವರ್ಗಾವಣೆ ಮಾಡಲು ನನ್ನಿಂದ ಯಾವುದೇ ಶಿಫಾರಸು ಆಗಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿ ಮಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ, ಈಗ ಹೊರ ಬಂದಿದ್ದೇನೆ. ಎಸ್ಐಟಿ ಅಧಿಕಾರಿಗಳು ಕೂಡ ಯಾವ ಇಡಿ, ಸಿಬಿಐಗೆ ಕಡಿಮೆ ಇಲ್ಲ. ಇಡಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿದ್ದು, ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಯನ್ನು ಕಿತ್ತೊಗೆದಿದ್ದೇವೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿಯನ್ನ ಸೋಲಿಸುತ್ತೇವೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಬಳ್ಳಾರಿ ಜಿಲ್ಲೆಯಿಂದಲೂ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Wed, 16 October 24