ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳಾದ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಅಕ್ರಮದ ಹಣವನ್ನು ಕಮಿಷನ್​ ಪಡೆದು ತಮ್ಮ ಸಂಬಂಧಿಕರು, ಪರಿಚಯಸ್ಥರಿಗೆ ವರ್ಗಾವಣೆ ಮಾಡಿದ್ದರು. ಸದ್ಯ ಈಗ ಎಸ್​ಐಟಿ ಹಣವನ್ನು ವಾಪಾಸ್ ನೀಡಲು ಸೂಚಿಸಿದೆ.

ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ
ವಾಲ್ಮೀಕಿ ನಿಗಮ ಹಗರಣ
Edited By:

Updated on: Jul 27, 2024 | 12:39 PM

ಬಳ್ಳಾರಿ, ಜುಲೈ.27: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ ಎದುರಾಗಿದೆ. ಹಣ ವರ್ಗಾವಣೆ ಮಾಡಿಸಿಕೊಂಡ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಎಸ್ಐಟಿ (SIT) ತಂಡ ಇವರ ವಿಚಾರಣೆ ನಡೆಸಿದ್ದು ಇವರ ಖಾತೆಗೆ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ಅವರಿಂದ ಬಂದ ಹಣವನ್ನು ವಾಪಾಸ್ ನೀಡುವಂತೆ ಸೂಚಿಸಿದೆ.

ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್‌ ಹಾಗೂ ವೆಂಕಟೇಶ್ವರ ರಾವ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಹಣವನ್ನು ತಮ್ಮ ಖಾತೆ ಮೂಲಕ ಸ್ನೇಹಿತರು, ಪರಿಚಯಸ್ಥರು ಸೇರಿದಂತೆ 77ಕ್ಕೂ ಹೆಚ್ಚು ಖಾತೆಗಳಿಗೆ 10, 20 ಲಕ್ಷದಂತೆ ಹಣವನ್ನು ವರ್ಗಾವಣೆ ಮಾಡಿದ್ದರು. 20% ಕಮಿಷನ್ ಪಡೆದು ಅಕ್ರಮ ಹಣವನ್ನು ವರ್ಗಾವಣೆ ಮಾಡಿದ್ದರು. ಸದ್ಯ ಈ ಬಗ್ಗೆ ತನಿಖೆ ನಡೆಸಿದ ಎಸ್​ಐಟಿ ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ಯಾರ್ಯಾರ ಖಾತೆಗೆ ಹಣ ಹಾಕಿದ್ದರೋ ಅವರೆಲ್ಲ ಹಣ ವಾಪಾಸ್ ನೀಡುವಂತೆ ಸೂಚನೆ ನೀಡಿದೆ. ಇದರಿಂದ ನಂಬಿ ಹಣ ಕೊಟ್ಟ ಜನರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಐಷಾರಾಮಿ ಫ್ಲ್ಯಾಟ್‌ ಖರೀದಿ, 10 ಕೆಜಿ ಚಿನ್ನದ ಬಿಸ್ಕೆಟ್​ ಜಪ್ತಿ ಮಾಡಿದ ಎಸ್​ಐಟಿ

ನಿಮಗೂ ಪ್ರಕರಣಕ್ಕೂ ಸಂಬಂಧವಿಲ್ಲ, ಆದರೆ ನಿಮ್ಮ ಖಾತೆಗೆ ಹಣ ಬಂದಿದೆ. ನಿಮ್ಮ ಖಾತೆಗೆ ಬಂದಿರುವ ಹಣ ವಾಪಸ್ ಹಾಕುವಂತೆ SIT ತಾಕೀತು ಮಾಡಿದೆ. ಪದೇಪದೆ ಫೋನ್​ ಕರೆ ಮಾಡಿ ಹಣ ವಾಪಸ್ ಹಾಕುವಂತೆ ಸೂಚನೆ ನೀಡುತ್ತಿದೆ. ಶೀಘ್ರದಲ್ಲೇ ಹಣ ವಾಪಸ್ ಹಾಕುವಂತೆ ಒತ್ತಡ ಹಾಕುತ್ತಿದೆ. ಅಲ್ಲದೆ ಹಣ ಹಾಕದಿದ್ದರೆ ನಿಮ್ಮ ಮೇಲೂ ಕ್ರಮ ಕೈಗೊಳ್ಳುವುದಾಗಿ ಎಸ್‌ಐಟಿ‌ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಸಿಕ್ಕಿದೆ.

ಹಣ ಹಾಕಿಸಿಕೊಂಡ ಬಹುತೇಕರು ನಾಗರಾಜ್​, ವೆಂಕಟೇಶ್ವರ ರಾವ್​​ಗೆ ಸಂಬಂಧಿಕರು, ಪರಿಚಯಸ್ಥರೇ ಆಗಿದ್ದಾರೆ. ಬಳ್ಳಾರಿ, ಸಿರಗುಪ್ಪ ಮತ್ತು ಸಿಂಧನೂರಿನಲ್ಲಿ ಇರುವವರಿಗೆ ಫೋನ್ ಕರೆ ಮಾಡಿ ಹಣ ವಾಪಾಸ್ ನೀಡಲು ಎಸ್​ಐಟಿ ಒತ್ತಡ ಹಾಕುತ್ತಿದೆ, ಆದರೆ 10 ಲಕ್ಷ, 20 ಲಕ್ಷ, 50 ಲಕ್ಷ ಹೀಗೆ ಲಕ್ಷಾಂತರ ಹಣ ವರ್ಗಾವಣೆ ಮಾಡಿಕೊಂಡಿದ್ದು ಈಗ ವಾಪಸ್ ಕೊಡಲು ಹಣ ಇಲ್ಲದೇ ಆಪ್ತರು & ಸಂಬಂಧಿಕರು ಪರದಾಡುವಂತಾಗಿದೆ. ಸದ್ಯ ನೆಕ್ಕಂಟಿ ನಾಗರಾಜ್ ಮತ್ತು ವೆಂಕಟೇಶ್ವರ ರಾವ್ ಇಬ್ಬರೂ ಜೈಲಿನಲ್ಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:38 pm, Sat, 27 July 24

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us