ಪ್ರಜ್ವಲ್ಗೆ ಜೈಲಲ್ಲಿ ಮೊಬೈಲ್ ಕೊಟ್ಟಿದ್ದು ಅಧಿಕಾರಿಗಳು?: ಹೆತ್ತವರ ಹೆಸರನ್ನು ಶಿವಪ್ಪ, ಪಾರ್ವತಿ ಎಂದು ನೋಟ್ಬುಕ್ನಲ್ಲಿ ಬರೆದಿಟ್ಟಿದ್ದ ಮಾಜಿ ಸಂಸದ!
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯ ವೇಳೆ, ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್, ಪೆನ್‌ಡ್ರೈವ್ ಹಾಗೂ ಡೈರಿ/ನೋಟ್‌ಬುಕ್ ಪತ್ತೆಯಾಗಿರುವ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಹಣ ಪಡೆದು ಮೊಬೈಲ್ ಬಳಕೆಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ರಾ? ಎಂಬ ಅನುಮಾನ ಉದ್ಭವಿಸಿದೆ.

ಮುಖ್ಯಾಂಶಗಳು
- ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ
- ಹಣ ಪಡೆದು ಮೊಬೈಲ್ ಬಳಕೆಗೆ ಅಧಿಕಾರಿಗಳಿಂದಲೇ ಅವಕಾಶ?
- ತನಿಖೆ ವೇಖೆ ಬಗೆದಷ್ಟೂ ಬಯಲಾಗ್ತಿದೆ ಅಚ್ಚರಿಯ ಮಾಹಿತಿ
ಬೆಂಗಳೂರು, ಆಗಸ್ಟ್ 13: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಅತ್ಯಾಚಾರ ಕೇಸ್ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ ಸಂಬಂಧ ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿವೆ. ಹಲವು ತಿಂಗಳಿಂದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಹಣ ಪಡೆದು ಮೊಬೈಲ್ ಬಳಕೆಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ರಾ? ಎಂಬ ಅನುಮಾನ ಉದ್ಭವಿಸಿದೆ. ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣವೇ ವಿರುದ್ಧವೇ ಆರೋಪ ಕೇಳಿಬಂದಿದೆ.
ಕೈದಿಗಳಿಗೆ ನೆರವಾಗುತ್ತಿದ್ದ ಅಸಿಸ್ಟೆಂಟ್ ಸೂಪರಿಂಡೆಂಟ್?
ಜೈಲಿನಲ್ಲಿ ರೇಡ್ ಆದಾಗೆಲ್ಲ ಏನು ಸಿಗದಂತೆ ತಪ್ಪಿಸುತ್ತಿದ್ದ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ನೋಡಿಕೊಳ್ಳುತ್ತಿದ್ದರು. ರೇಡ್ಗೆ ಬಂದ ಅಧಿಕಾರಿಗಳನ್ನು ಒಳಬಿಡಲು ಸುಮಾರು 15ರಿಂದ 20 ನಿಮಿಷ ತಡಮಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಅಲರ್ಟ್ ಆಗುತ್ತಿದ್ದ ಜೈಲಿನ ಸೆಲ್ನಲ್ಲಿದ್ದ ಕೈದಿಗಳು ರೇಡ್ ವೇಳೆ ಏನೂ ಸಿಗದಂತೆ ನೋಡಿಕೊಳ್ಳುತ್ತಿದ್ದರು. ಆದ್ರೆ ಮೊನ್ನೆ ರೇಡ್ ವೇಳೆ ಈರಣ್ಣ ಮಾತು ಕೇಳದೆ ಸಿಸಿಬಿ ಅಧಿಕಾರಿಗಳು ಒಳನುಗ್ಗಿದ್ದಾರೆ. ಹೀಗಾಗಿಯೇ ಪ್ರಜ್ವಲ್ ಬ್ಯಾರಕ್ ಸೇರಿ ಹಲವೆಡೆ ಮೊಬೈಲ್ಗಳು ಪತ್ತೆಯಾಗಿವೆ. ಘಟನೆ ಬಳಿಕ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಸಸ್ಪೆಂಡ್ ಕೂಡ ಮಾಡಲಾಗಿದೆ.
ನೋಟ್ಬುಕ್ನಲ್ಲಿತ್ತು 30ಕ್ಕೂ ಹೆಚ್ಚು ಮೊಬೈಲ್ ನಂಬರ್!
ಇನ್ನು ಸಿಸಿಬಿ ರೇಡ್ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಜೊತೆಗೆ ನೋಟ್‌ಬುಕ್ ಕೂಡ ಪತ್ತೆಯಾಗಿತ್ತು. ಆ ನೋಟ್ಬುಕ್ನಲ್ಲಿ 30ಕ್ಕೂ ಹೆಚ್ಚು ಮೊಬೈಲ್ ನಂಬರ್ಗಳು ಕಂಡುಬಂದಿವೆ. ತಾಯಿಯ ನಂಬರ್ ಅನ್ನು ಪಾರ್ವತಿ ಎಂದು ಬರೆದಿಟ್ಟುಕೊಂಡಿದ್ದ ಪ್ರಜ್ವಲ್, ಶಿವಪ್ಪ ಎಂದು ತಂದೆಯ ನಂಬರ್ ಬರೆದಿಟ್ಟುಕೊಂಡಿರೋದು ಪರಿಶೀಲನೆ ವೇಳೆ ಕಂಡುಬಂದಿದೆ. ಸ್ನೇಹಿತೆಯ ನಂಬರ್ ಕೂಡ ಉಲ್ಲೇಖವಿರೋದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದುವರೆಗೆ ಮೊಬೈಲ್ ಪಾಸ್ ವರ್ಡ್ ಪ್ರಜ್ವಲ್ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮೊಬೈಲ್ ನನ್ನದಲ್ಲ ಮತ್ತು ನನ್ನ ಬ್ಯಾರಕ್‌ನಲ್ಲಿ ಅದು ಹೇಗೆ ಬಂತು ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳುತ್ತಿದ್ದಾರಂತೆ. ಸದ್ಯ ಮೊಬೈಲ್ ವಶಕ್ಕೆ ಪಡೆದುಕೊಂಡು ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:02 am, Thu, 13 August 26




