ಹಂಪಿ ಜೈನ ದೇಗುಲದ ಬಳಿ ಉತ್ಖನನ: ನಾಗಿಣಿ, ಗರುಡ ಶಿಲ್ಪಗಳು ಪತ್ತೆ

ವಿಶ್ವ ಪಾರಂಪರಿಕ ತಾಣ ವಿಶ್ವಪ್ರಸಿದ್ಧ ಹಂಪಿಯ ಜೈನ ದೇಗುಲದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಭಾರತೀಯ ಪುರಾತತ್ವ ಸರ್ವೇಕ್ಷಣೆ (ASI) ಇಲಾಖೆಯ ತಜ್ಞರು ಅತ್ಯಂತ ಅಪರೂಪದ ನಾಗಿಣಿ ಹಾಗೂ ಗರುಡನ ಎರಡು ಕಲ್ಲಿನ ಶಿಲ್ಪಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ತೆಯು ವಿಜಯನಗರ ಸಾಮ್ರಾಜ್ಯದಲ್ಲಿದ್ದ ಧಾರ್ಮಿಕ ಸಹಿಷ್ಣುತೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ.

ಹಂಪಿ ಜೈನ ದೇಗುಲದ ಬಳಿ ಉತ್ಖನನ: ನಾಗಿಣಿ, ಗರುಡ ಶಿಲ್ಪಗಳು ಪತ್ತೆ
ನಾಗಿಣಿ, ಗರುಡ ಶಿಲ್ಪಗಳು
Image Credit source: https://www.newindianexpress.com/

Updated on: Aug 10, 2026 | 11:28 AM

ಹಂಪಿ, ಆಗಸ್ಟ್​​ 10: ಹಂಪಿಯ ಜೈನ ದೇಗುಲದ ಬಳಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಪುರಾತತ್ವ ತಜ್ಞರು ಎರಡು ಮಹತ್ವದ ಶಿಲ್ಪಗಳನ್ನು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಒಂದು ದೇವತಾ ಸ್ವರೂಪದ ನಾಗಿಣಿ ಶಿಲ್ಪವಾಗಿದ್ದು, ಮತ್ತೊಂದು ಹಿಂದೂ ಸಂಪ್ರದಾಯದಲ್ಲಿ ಮಹತ್ವ ಪಡೆದ ಪೌರಾಣಿಕ ಪಕ್ಷಿ ಗರುಡನ ಶಿಲ್ಪ ಎಂದು ಅಂದಾಜಿಸಲಾಗಿದೆ. ಈ ಶಿಲ್ಪಗಳ ಪತ್ತೆಯು ಐತಿಹಾಸಿಕ ನಗರಿ ಹಂಪಿಯಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಆಚರಣೆಗಳು, ಕಲಾ ಪರಂಪರೆ ಹಾಗೂ ವಿವಿಧ ಸಂಸ್ಕೃತಿಗಳ ನಡುವಿನ ಸಂವಹನದ ಕುರಿತು ಮಹತ್ವದ ಸುಳಿವುಗಳನ್ನು ಒದಗಿಸುವ ನಿರೀಕ್ಷೆಯಿದೆ.

ಶಿಲ್ಪಗಳ ಗಾತ್ರ ಎಷ್ಟಿದೆ?

ಪತ್ತೆಯಾದ ಶಿಲ್ಪಗಳಲ್ಲಿ ಒಂದು ಮಾನವ ಹಾಗೂ ಸರ್ಪದ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರಕ್ಷಕ ರೂಪದ ನಾಗಿಣಿಯನ್ನು ಚಿತ್ರಿಸುತ್ತದೆ. ಮತ್ತೊಂದು ಶಿಲ್ಪವು ತಲೆ ಇಲ್ಲದ ಹದ್ದಿನಾಕಾರದ ದೈವಿಕ ರೂಪದಲ್ಲಿ ಗರುಡನನ್ನು ಚಿತ್ರಿಸಿದೆ. ಗರುಡ ಶಿಲ್ಪವು 32 ಸೆಂ.ಮೀ ಅಗಲ ಮತ್ತು 37 ಸೆಂ.ಮೀ ಉದ್ದವಿದ್ದು, ನಾಗಿಣಿ ಶಿಲ್ಪವು 30 ಸೆಂ.ಮೀ ಅಗಲ ಹಾಗೂ 51 ಸೆಂ.ಮೀ ಉದ್ದವಾಗಿದೆ. ಉತ್ತಮ ಸ್ಥಿತಿಯಲ್ಲಿ ಸಂರಕ್ಷಿತವಾಗಿರುವ ಈ ಶಿಲ್ಪಗಳನ್ನು ಜೈನ ದೇಗುಲದ ಸುತ್ತಮುತ್ತ ನಡೆಯುತ್ತಿರುವ ಪುರಾತತ್ವ ತನಿಖೆಯ ಭಾಗವಾಗಿ ದಾಖಲಿಸಲಾಗುತ್ತಿದೆ.

ಇದನ್ನೂ ಓದಿ: ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?

ಉತ್ಖನನದ ವೇಳೆ ವಿವಿಧ ಧಾರ್ಮಿಕ ಹಾಗೂ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಶಿಲ್ಪಗಳು ಬೆಳಕಿಗೆ ಬಂದಿವೆ. ಅವುಗಳ ಶಿಲ್ಪಲಕ್ಷಣಗಳು ಮತ್ತು ಪತ್ತೆಯಾದ ಸ್ಥಳವನ್ನು ವಿವರವಾಗಿ ಅಧ್ಯಯನ ಮಾಡಲಾಗುವುದು. ಈ ಮೂಲಕ ಈ ಶಿಲ್ಪಗಳು ಆ ಪ್ರದೇಶದಲ್ಲಿರುವ ರಚನೆಗಳೊಂದಿಗೆ ಹೊಂದಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ. ರಾಮಕೃಷ್ಣ ರೆಡ್ಡಿ ಅವರು ತಿಳಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಹಿಂದೂ ಮತ್ತು ಜೈನ ಧಾರ್ಮಿಕ ಪ್ರಭಾವ ಸೇರಿದಂತೆ ವಿವಿಧ ಧಾರ್ಮಿಕ ಪರಂಪರೆಗಳನ್ನು ಪ್ರತಿಬಿಂಬಿಸುವ ಸ್ಮಾರಕಗಳು ಮತ್ತು ಪುರಾತತ್ವ ಅವಶೇಷಗಳಿವೆ. ಸಂರಕ್ಷಿತ ಪಾರಂಪರಿಕ ವಲಯದ ಸುತ್ತಮುತ್ತ ನಡೆಯುತ್ತಿರುವ ಉತ್ಖನನಗಳಲ್ಲಿ ರಚನೆಗಳ ಅವಶೇಷಗಳು, ಶಿಲ್ಪಗಳು, ವಾಸ್ತುಶಿಲ್ಪದ ತುಣುಕುಗಳು ಹಾಗೂ ಇತರ ಪುರಾತತ್ವ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ. ಹೊಸದಾಗಿ ಪತ್ತೆಯಾಗಿರುವ ಶಿಲ್ಪಗಳ ಕಾಲಮಾನ ಹಾಗೂ ಅವುಗಳನ್ನು ಮೂಲತಃ ಯಾವ ಸ್ಥಳದಲ್ಲಿ ಇರಿಸಲಾಗಿತ್ತು ಎಂಬುದರ ಕುರಿತು ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಅವುಗಳನ್ನು ಸಮರ್ಪಕವಾಗಿ ದಾಖಲಿಸಿ, ವಿವರವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us