ರಾಮನ ಪೂಜೆ ಮಾಡಿದ್ದಕ್ಕೆ ಜೈಲಿನಲ್ಲಿ ಹಲ್ಲೆ: ಪ್ರಧಾನಿ ಮೋದಿ ಸಹಾಯ ಕೋರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತ ಆರೋಪಿ

ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು. ಆದರೆ ಜೈಲು ಅಧಿಕಾರಿ, ಸಿಬ್ಬಂದಿ ನಮ್ಮ ರಕ್ಷಣೆಗೆ ಬರಲಿಲ್ಲ. ಬದಲಾಗಿ ಈಗ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ ಎಂದು ಸಂತ್ರಸ್ತ ಆರೋಪಿ ಮಹಾರಾಷ್ಟ್ರ ಮೂಲದ ಪರಮೇಶ್ವರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ವಿಜಯಪುರ: ಜನವರಿ 22ರಂದು ಅತ್ತ ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಬಾಲರಾಮನ ಪ್ರತಿಷ್ಠಾಪನೆ ನಡೆದು ಕೋಟ್ಯಂತರ ಹಿಂದೂಗಳು ಧಾರ್ಮಿಕ ಪರಾಕಾಷ್ಠೆ ತಲುಪಿದ್ದ ಹೊತ್ತಿನಲ್ಲೇ ಇತ್ತ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಜೈಲಿನಲ್ಲಿ ಆರೋಪಿಯ ಮೇಲೆ ಹಲ್ಲೆ ನಡೆಸಿರುವ ಪ್ರಸಂಗ ನಡೆದಿದೆ. ಈ ಸಂಬಂಧ ಸಂತ್ರಸ್ತ ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ರಾಮ ಮಂದಿರ ಉದ್ಘಾಟನೆಯಂದು ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬ ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಕಳೆದ 22 ರಂದು ರಾಮನ ಪೂಜೆಗೆ ಜೈಲು ಅಧಿಕಾರಿಗಳಿಗೆ ಅನುಮತಿಗಾಗಿ ಮನವಿ ಮಾಡಿದ್ದೆವು. ಆದರೆ ಅಧಿಕಾರಿಗಳು ಅನುಮತಿ‌ ನೀಡಿರಲಿಲ್ಲ. ಆದರೂ ಜನವರಿ 22 ರಂದು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದೆವು ಎಂದಿರೋ ಆರೋಪಿ ಪರಮೇಶ್ವರ, ಅದಾದಮೇಲೆ ಜನವರಿ 23 ರಂದು ಸಹಾಯಕ ಜೈಲು ಅಧೀಕ್ಷಕ ಚೌಧರಿ ತಮ್ಮ ಚೇಂಬರ್ ಗೆ ನನ್ನನ್ನು ಹಾಗೂ ನನ್ನ ಜೊತೆಗೆ ಪೂಜೆ ಮಾಡಿದ ಇನ್ನೂ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದರು.

ಇದನ್ನೂ ಓದಿ: ಉಚ್ಛ್ರಾಯ ಸ್ಥಿತಿ ತಲುಪಿದ ರಾಮ ಜಪ, ಜೈಲಿನಲ್ಲಿ ಕೈದಿಗಳಿಗೂ ಅಯೋಧ್ಯೆ ಮಂತ್ರಾಕ್ಷತೆ, ತುಳಸಿ ಮಾಲೆ

ಆಗ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು. ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಹಲ್ಲೆ ಮಾಡಿದರು. ನಮ್ಮ ಮೇಲೆ ಹಲ್ಲೆ ಮಾಡಿದರೂ ಜೈಲು ಅಧಿಕಾರಿ ಸಿಬ್ಬಂದಿ ನಮ್ಮ ರಕ್ಷಣೆ ಮಾಡಿಲ್ಲ. ಬದಲಾಗಿ ಈಗ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ.

ಈ ವಿಷಯವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಮಗೆ ಸಹಾಯ ಮಾಡಬೇಕು ಎಂದು ಆರೋಪಿ ಪರಮೇಶ್ವರ ಮನವಿ ಮಾಡಿದ್ದಾನೆ. ಆದರೆ ರಾಮನ‌ ವಿಚಾರ ಇಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾನೆಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜಿ ಮ್ಯಾಗೇರಿ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಜೈಲಿನಿಂದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಮೂವರು ಆರೋಪಿಗಳು ಬಂದಿದ್ದಾರೆ. ಮಹಾರಾಷ್ಟ್ರದ ಜೈಲಿನಲ್ಲಿ ಗಲಾಟೆ ಮಾಡಿದ ಕಾರಣ ಇಲ್ಲಿಗೆ ಕಳುಹಿಸಿದ್ದಾರೆ. ಈಗ ರಾಮ ಮಂದಿರ ಉದ್ಘಾಟನೆ ವಿಚಾರ ಮುಂದಿಟ್ಟು ಸುಳ್ಳು ಹೇಳುತ್ತಿದ್ದಾರೆ. ಜನವರಿ 23 ರಂದು ಜೈಲಲ್ಲಿ ಇತರ ಅಪರಾಧಿಗಳ ಜೊತೆಗೆ ಇವರು ಗಲಾಟೆ ಮಾಡಿದ್ದಾರೆ. ಆದ್ದರಿಂದ ಪ್ರತ್ಯೇಕ ಸೆಲ್ ನಲ್ಲಿಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆ ಕುರಿತು ತನಿಖೆ ಮಾಡಲಾಗುತ್ತದೆ. ಜೈಲಲ್ಲಿ ಮೋಬೈಲ್ ಹೇಗೆ ಬಂತು? ಆರೋಪಿ ಪರಮೇಶ್ವರ ಮಾಡಿರುವ ಆರೋಪದ ಕುರಿತು ತನಿಖೆ ನಡೆಸೋದಾಗಿ ಜೈಲು ಅಧೀಕ್ಷಕ ಐ ಜಿ ಮ್ಯಾಗೇರಿ ಹೇಳಿದ್ದಾರೆ.

Published On - 10:32 am, Sat, 27 January 24

ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Loading...
Unable to load recommendations.
Follow Us